Advertisement

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪದವಿ ತರಗತಿಗಳು ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ

07:33 PM Oct 23, 2020 | Mithun PG |

ಬೆಂಗಳೂರು: ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ನವೆಂಬರ್ -17ರಿಂದ ಆರಂಭಿಸಲು ನಿರ್ಧರಿಸಿದೆ. ಎಲ್ಲಾ ಪದವಿ ಕಾಲೇಜುಗಳು, ಸ್ನಾತಕೋತ್ತರ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯವಾಗುತ್ತದೆ.

Advertisement

ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಕೋವಿಡ್-19 ಗಮನದಲ್ಲಿರಿಸಿಕೊಂಡು ತರಗತಿಗಳನ್ನು ಆರಂಭಿಸುವ ಸಂಬಂಧ ಮಾಡಿಕೊಳ್ಳಲಾಗಿರುವ ಸಿದ್ಧತೆಗಳ ಕುರಿತು ಮಾತುಕತೆ ನಡೆಸಿದ ನಂತರ ಈ ವಿಷಯ ಪ್ರಕಟಿಸಿದರು.

ಆದರೆ ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ಅಥವಾ ಆನ್ ಲೈನ್ ಮೂಲಕ ಹಾಜರಾಗುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಲಾಗಿದೆ. ಪ್ರಾಯೋಗಿಕ ತರಗತಿಗಳಿಗೆ ಭೌತಿಕವಾಗಿ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾರು ತರಗತಿಗಳಿಗೆ ಭೌತಿಕವಾಗಿ ಹಾಜರಾಗಲು ಇಚ್ಛಿಸುತ್ತಾರೋ ಅಂತಹ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಂಬಂಧಿಸಿದ ಸಂಸ್ಥೆಗೆ ಸಮ್ಮತಿ ಪತ್ರವನ್ನು ಕೊಡಬೇಕಾಗುತ್ತದೆ. ನಂತರ ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕಾಗುತ್ತದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಕೋವಿಡ್ ಸೋಂಕು ಹರಡಲು ಆಸ್ಪದವಾಗದಂತೆ ತರಗತಿಗಳನ್ನು ನಡೆಸುವ ಬಗ್ಗೆ ಮೇಲ್ವಿಚಾರಣೆ ವಹಿಸಲು ಪ್ರತಿಯೊಂದು ಸಂಸ್ಥೆಯಲ್ಲೂ ಕೋವಿಡ್ ಕಾರ್ಯಪಡೆ ರಚಿಸಲಾಗುತ್ತದೆ.

ಕಾಲೇಜು ತೆರೆಯುವಿಕೆಯ ಬಗ್ಗೆ ವಿದ್ಯಾರ್ಥಿಗಳಿಂದಲೇ ಬೇಡಿಕೆ ಬಂದಿದ್ದು, ಕ್ಯಾಂಪಸ್‍ ಸಂದರ್ಶನ ಹಾಗೂ ಉದ್ಯೋಗ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಇವರೆಲ್ಲರಿಗೂ ಸೂಕ್ತ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಲು ಇಲಾಖೆ ಸಜ್ಜಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

Advertisement

ತರಗತಿಗಳನ್ನು ನಡೆಸುವುದಕ್ಕೆ ಹಲವಾರು ಇಲಾಖೆಗಳ ಸಹಕಾರ ಅಗತ್ಯವಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಆರೋಗ್ಯ ಸೇರಿದಂತೆ ಹಲವಾರು ಇಲಾಖೆಗಳು ಜೊತೆ ಸೇರಿ ಕೆಲಸ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿಗಳಿಗೂ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಅವರು ಹೇಳಿದರು.

ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ), ಶೈಕ್ಷಣಿಕ ಮಾರ್ಗಸೂಚಿಗಳು, ಸಾಮಾನ್ಯ ಮಾರ್ಗಸೂಚಿಗಳು, ಡಿಜಿಟಲ್ ಕಲಿಕಾ ನಿರ್ವಹಣಾ ವ್ಯವಸ್ಥೆ (ಡಿಎಲ್ಎಂಎಸ್), ಇ-ಪಠ್ಯ, ಡಿಎಲ್ಎಂಎಸ್-ವಿಶ್ಲೇಷಕಗಳು, ಡಿಜಿಟಲ್ ಕಲಿಕೆ ಅನುಷ್ಠಾನಗೊಳಿಸಲು ಬೇಕಾಗುವ ಉಪಕರಣ ವ್ಯವಸ್ಥೆ, ವಿದ್ಯಾರ್ಥಿ ನಿಲಯಗಳ ಆರಂಭ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವುದು ಇತ್ಯಾದಿ ವಿಷಯಗಳ ಕುರಿತು ಮುಖ್ಯಮಂತ್ರಿ ಮುಂದೆ ಮಂಡಿಸಲಾದ ವಿಡಿಯೊ ಪ್ರಸ್ತುತಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ವಿವರಿಸಿದರು.

ಹಾಸ್ಟೆಲ್ ಗಳು ಕೂಡ ತರೆಯುತ್ತಿದ್ದು ಎಚ್ಚರವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next