ಮಾಲ್ಡಾ (ಬಂಗಾಲ): ಜಾತಿ, ಧರ್ಮ, ಲಿಂಗ ತಾರತಮ್ಯವನ್ನು ನಿವಾರಿಸುವುದಕ್ಕೆ ಭಾರತ ದಲ್ಲಿ ದೀರ್ಘಕಾಲದಿಂದ ಹೋರಾಟ ಚಾಲ್ತಿಯಲ್ಲಿದೆ. ಈಗಲೂ ಅವುಗಳಿಂದ ಭಾರತ ಬಿಡುಗಡೆ ಹೊಂದಿಲ್ಲ. ಕನಿಷ್ಠ ಅದನ್ನು ತಮ್ಮ ಶಾಲಾ ವ್ಯಾಪ್ತಿಯಿಂದಲಾದರೂ ದೂರ ಮಾಡುವುದಕ್ಕೆ, ಪಶ್ಚಿಮ ಬಂಗಾಲದ ಮಾಲ್ಡಾ ಹಳ್ಳಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಹೋರಾಡುತ್ತಿದ್ದಾರೆ.
ಈ ಹೋರಾಟದ ಅಂಗವಾಗಿ, ಈ ವರ್ಷದ ಶಾಲಾ ಸರಸ್ವತಿ ಪೂಜೆಯನ್ನು ಬುಡಗಟ್ಟು ಜನಾಂಗಕ್ಕೆ ಸೇರಿದ 11ನೇ ತರಗತಿ ವಿದ್ಯಾರ್ಥಿನಿಯೊಬ್ಬರು ನಡೆಸಿಕೊಡಲಿದ್ದಾರೆ!
ದಲ್ಲಾ ಚಂದ್ರಮೋಹನ್ ಪ್ರೌಢಶಾಲೆಯ ಮುಖ್ಯಶಿಕ್ಷಕರ ಹೆಸರು ಜೈದೇಬ್ ಲಾಹಿರಿ. ಪೂಜೆ ಮಾಡಲು ಸಿದ್ಧವಾಗಿರುವ ವಿದ್ಯಾರ್ಥಿನಿ ರೋಹಿಲಾ ಹೆಂಬ್ರಾಮ್. ಈಕೆಗೆ ನೆರವಾಗಲಿರುವ ಬ್ರಾಹ್ಮಣೇತರ ಶಿಕ್ಷಕರ ಹೆಸರು ಬಿನಯ್ ಬಿಶ್ವಾಸ್.
ಈ ಹಿಂದೆ ಬ್ರಾಹ್ಮಣ ಅರ್ಚಕರೊಬ್ಬರು ಪೂಜೆ ಮಾಡುತ್ತಿದ್ದರಂತೆ. ಆತ ಹಣಕ್ಕಾಗಿ ತಕರಾರು ಮಾಡಿದಾಗ ಸಿಟ್ಟಾದ ಮುಖ್ಯಶಿಕ್ಷಕ ಜೈದೇಬ್ ತಾನೇ ಪೂಜೆ ಮಾಡಲು ಆರಂಭಿಸಿದರು. ಅಅನಂತರ ಇತರೆ ಶಿಕ್ಷಕರು ಶುರುಮಾಡಿದರು. ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯಿಂದ ಅಂತಹ ಪೂಜೆ ನಡೆಯುತ್ತಿದೆ. ಇದು ಪಕ್ಕಾ ಬುಡಕಟ್ಟು ಜನಾಂಗವೇ ಜಾಸ್ತಿಯಿರುವ ಪ್ರದೇಶ. ಈ ಶಾಲೆಯ ಆಸುಪಾಸು 10 ಕಿ.ಮೀ. ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ರದ್ದಾಗಿದೆ. ಅದಕ್ಕೆ ಮುಖ್ಯ ಕಾರಣ ಜೈದೇಬ್.