ಯಾದಗಿರಿ: ಜಿಲ್ಲೆಯಲ್ಲಿನ ಸಣ್ಣ ನೀರಾವರಿ ಇಲಾಖೆಯ 71 ಕೆರೆಗಳು ಹಾಗೂ ಜಿಪಂ ವ್ಯಾಪ್ತಿಯ 268 ಕೆರೆ ಸೇರಿ ಒಟ್ಟು 339 ಕೆರೆಗಳಿಗೆ ಅರಣ್ಯೀಕರಣ ಮಾಡಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆ ನಡೆಸಿ ಅವರು ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆ ಕೆರೆಗಳ ಅಭಿವೃದ್ಧಿಗೆ ಬರುವ ಅನುದಾನದಲ್ಲಿ ಸಣ್ಣ ನೀರಾವರಿ ಕೆರೆಗಳಿಗೆ ಬೇಲಿ (ಪೆನ್ಸಿಂಗ್) ನಿರ್ಮಾಣ ಮಾಡಿ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾನೂನು ಮತ್ತು ಅಧಿನಿಯಮಗಳನ್ವಯ ಸದಸ್ಯರು ತಮ್ಮ ಜವಾಬ್ದಾರಿ ನಿರ್ವಹಿಸಿ, ಎಲ್ಲ ಕೆರೆಗಳ ಸರ್ವೇ ಮಾಡಿಸಿ ಹದ್ದುಬಸ್ತು ಮಾಡಲು ಸೂಚನೆ ನೀಡಿದರು.
ಸಣ್ಣ ನೀರಾವರಿ 71 ಕೆರೆಗಳಿಗೆ ಬೇಲಿ ಅಳವಡಿಸಲು ಸುಮಾರು 1323.89 ಲಕ್ಷ ರೂ. ಅಂದಾಜು ಮೊತ್ತದ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಕೋರಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪಂಚಾಯತ ರಾಜ್ ವ್ಯಾಪ್ತಿಯಲ್ಲಿನ 268 ಕೆರೆಗಳ ಸರ್ವೇ ಹಾಗೂ ಹದ್ದುಬಸ್ತು ಕಾಮಗಾರಿ ಕೈಗೆತ್ತಿಕೊಂಡು ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಯಾವ ಕೆರೆಗಳಲ್ಲಾದರೂ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆಯೇ ಎಂದು ಪರಿಶೀಲಿಸಿ ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
2018-19 ಹಾಗೂ 2019-20ನೇ ಸಾಲಿನಲ್ಲಿ ಜಿಲ್ಲಾಡಳಿತ ಹಾಗೂ ಭಾರತ ಜೈನ್ ಸಂಘದ ಆಶ್ರಯದಲ್ಲಿ ಜಿಲ್ಲೆಯಲ್ಲಿ 25 ಕೆರೆಗಳಿಂದ ಸುಮಾರು 16,95,582 ಕ್ಯೂ. ಮೀಟರ್ ಹೂಳು ತೆಗೆಯಲಾಗಿದ್ದು, 2019- 20ರ ಸಾಲಿನಲ್ಲಿ ಕೆರೆ ಸಂಜೀವಿನಿ ಕಾರ್ಯಕ್ರಮದಲ್ಲಿ ಜಿಲ್ಲೆಯ 31 ಕೆರೆಗಳಿಂದ ಹೂಳು ತೆಗೆಯುವ ಸುಮಾರು 105 ಲಕ್ಷ ರೂ. ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
2020-21ನೇ ಸಾಲಿನಲ್ಲಿ ಜಿಲ್ಲೆಯ ಸುಮಾರು 169 ಕೆರೆಗಳು ಹಾಗೂ 2021-22 ನೇ ಸಾಲಿನಲ್ಲಿ ಸುಮಾರು 133 ಕೆರೆಗಳ ಹೂಳು ತೆಗೆಯಲಾಗಿದೆ. 2021-21ನೇ ಸಾಲಿನಲ್ಲಿ ಸುಮಾರು 144 ಹಳ್ಳಗಳು ಹಾಗೂ 2021-22ನೇ ಸಾಲಿನಲ್ಲಿ 742 ಹಳ್ಳಗಳ ಹೂಳೆತ್ತುವ ಕಾಮಗಾರಿ ಮಹತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೆತ್ತಿಕೊಂಡು ಪೂರ್ತಿಗೊಳಿಸಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಅಮರೇಶ ನಾಯ್ಕ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಶಾಆಲಂ ಹುಸೇನ್, ನಗರಸಭೆ ಆಯುಕ್ತ ಬಕ್ಕಪ್ಪ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ವಡಿಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ, ಗುರುಮಿಠಕಲ್ ತಹಶೀಲ್ದಾರ್ ಶರಣಬಸವ ಸೇರಿದಂತೆ ಇತರೆ ಕೆರೆ ಪ್ರಾಧಿಕಾರದ ಸದಸ್ಯರು ಇದ್ದರು.