Advertisement

ತಣ್ಣೀರುಬಾವಿ: ಸಮುದ್ರ ತಟದಲ್ಲಿ ಅರಣ್ಯೀಕರಣ!

09:45 PM Oct 21, 2020 | mahesh |

ತಣ್ಣೀರುಬಾವಿ: ಕೂಳೂರಿನಿಂದ ತಣ್ಣೀರುಬಾವಿಗೆ ಸಂಚರಿಸುವ ಮಾರ್ಗದಲ್ಲಿ ಇಲ್ಲಿನ ಅರಣ್ಯ ಇಲಾಖೆಯ ಜಾಗದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಅಮೂಲ್ಯ ಗಿಡಗಳನ್ನು ಬೆಳಸಲಾಗುತ್ತಿದೆ. ಸುದೀರ್ಘ‌ ಬಾಳಿಕೆ ಬರುವ ಆಲದಮರ, ಅರಳಿಮರ, ಅಶ್ವತ್ಥ, ಹೊಳೆಹೊನ್ನೆ, ಅತ್ತಿ
ಮರಗಳನ್ನು ಬೆಳೆಸಲಾಗುತ್ತಿದೆ. ಸಮುದ್ರ ತಟದಲ್ಲಿ ಒತ್ತುವರಿ ತಡೆ, ಕಡಲ್ಕೊರೆತ ತಡೆ ಮತ್ತು ಸುರಕ್ಷತೆಯ ಜತೆಗೆ ಅರಣ್ಯೀಕರಣಕ್ಕೆ ಉಪಯೋಗವಾಗಲಿವೆ. ಈ ಹಿಂದೆ ನೆಟ್ಟಿದ್ದ ಗಾಳಿ ಮರಗಳು ಉರುಳಿ ಬೀಳುತ್ತಿದ್ದು, ಇದಕ್ಕೆ ಪರ್ಯಾಯವಾಗಿ ದೈತ್ಯ ಮರಗಳನ್ನು ನೆಡಲಾಗಿದೆ.

Advertisement

ಇಲಾಖೆಯು ತುಂಬಾ ಜವಾಬ್ದಾರಿಯಿಂದ ಈ ಸಸಿಗಳನ್ನು ಬೆಳೆಸುತ್ತಿದೆ. ಈ ಹಿಂದೆ ಇದ್ದ ಗಾಳಿ ಮರಗಳು ಕೇವಲ ಭೂ ಸವೆತ ತಡೆಗಟ್ಟುವಲ್ಲಿ ಸಫಲವಾದರೆ, ಇದೀಗ ವಿನೂತನ ಯೋಜನೆಯಿಂದ ಬೃಹತ್‌ ಮರಗಳ ಅರಣ್ಯ ಬೆಳೆಸುವ ಜತೆಗೆ ಸಮುದ್ರ ಕೊರೆತ ತಡೆಗಟ್ಟಲು, ನವಿಲು ಸಹಿತ ವಿವಿಧ ಹಕ್ಕಿಗಳಿಗೆ ಈ ಮರಗಳು ಆಶ್ರಯ ತಾಣವಾಗಲಿದೆ. ಅತ್ತಿ ಮರಗಳು ಹಕ್ಕಿಗಳಿಗೆ ಕಾಯಿ ನೀಡಿ ಆಹಾರದ ಮೂಲವಾಗಲಿದೆ. ಈ ಹೊಸ ಯೋಜನೆ ಇದೀಗ ತಣ್ಣೀರುಬಾವಿಯುದ್ದಕ್ಕೂ ಅಳ ವಡಿಸಿಕೊಳ್ಳಲಾಗಿದೆ. ಬೃಹತ್‌ ಮರಗಳ ನಾಟಿಯಿಂದ ಈ ಭಾಗದಲ್ಲಿ ಇರುವ ಅರಣ್ಯ ಭೂಮಿಯನ್ನು ಒತ್ತುವರಿಯಾಗದಂತೆ ಉಳಿಸಿಕೊಳ್ಳುವುದರ ಜತೆಗೆ ದೀರ್ಘ‌ಕಾಲದ ಅರಣ್ಯ ಬೆಳೆಸುವ ಗುರಿಯನ್ನು ಹೊಂದಲಾಗಿದೆ.
ನವಮಂಗಳೂರು ಬಂದರು ತಡೆ ಗೋಡೆಯ ಸುತ್ತಲೂ ಇದ್ದ ಕುರುಚಲು ಅರಣ್ಯ ಇದೀಗ ಅಭಿವೃದ್ಧಿಯ ಕಾರಣದಿಂದ ಕಂಡುಬರುತ್ತಿಲ್ಲ. ಇಲ್ಲಿದ್ದ

ಅಪಾರ ಸಂಖ್ಯೆ ನವಿಲುಗಳು, ಮುಳ್ಳು ಹಂದಿ, ಮುಂಗುಸಿ ಮೊದಲಾದ ಪ್ರಾಣಿ, ಪಕ್ಷಿಗಳು ತಣ್ಣೀರುಬಾವಿ ಸುತ್ತ ಇರುವ ಸೀಮಿತ ಅರಣ್ಯ ಪ್ರದೇಶದಲ್ಲಿ ಇರುವ ಸಂದಿಗ್ಧ ಸ್ಥಿತಿ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲೇ ಅರಣ್ಯ ಇಲಾಖೆ ಸರ್ವಋತು ಅರಣ್ಯ ಯೋಜನೆ ರೂಪಿಸಿ ಅಮೂಲ್ಯ ಸಸಿಗಳನ್ನು ನೆಟ್ಟು ಬೆಳೆಸುತ್ತಿದೆ. ಮುಂದಿನ ದಿನಗಳಲ್ಲಿ ತಣ್ಣೀರುಬಾವಿ ಬೆಂಗ್ರೆ ಸಮುದ್ರದಡದಲ್ಲಿ ಹಸುರುವಲಯದ ಜತೆಗೆ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸುವ ಅವಕಾಶ ದೊರಕಲಿದೆ.

4 ಸಾವಿರ ಗಿಡ ಬೆಳಸಲಾಗಿದೆ
ಅರಣ್ಯ ಇಲಾಖೆಯ ಭೂಮಿಯಲ್ಲಿ ಗಾಳಿ ಮರಕ್ಕಿಂತ ಪಕ್ಷಿಗಳಿಗೆ ಅನುಕೂಲವಾಗುವ ಮರಗಳನ್ನು ನೆಟ್ಟಿದ್ದೇವೆ. ಅಶ್ವತ್ಥ, ಅರಳಿ, ಆಲದ ಮರ ಮತ್ತಿತರ ಸಸಿಗಳು ಭೂ ಸವಕಳಿ ತಡೆಯುತ್ತವೆ. ಸುಮಾರು 4 ಸಾವಿರ ಗಿಡ ನೆಡಲಾಗಿದೆ. ಇದಕ್ಕೆ ಎಂಆರ್‌ಪಿಎಲ್‌ ಆರ್ಥಿಕ ಸಹಾಯ ಒದಗಿಸಿದೆ. ಸುತ್ತಲೂ ಫೆನ್ಸಿಂಗ್‌ ಅಳವಡಿಸಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು.
-ಶ್ರೀಧರ್‌, ಅರಣ್ಯಾಧಿಕಾರಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next