Advertisement

ಸೋಂಕಿತರ ಚಿಕಿತ್ಸೆಗೆ ಸ್ಪಂದಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ

04:28 PM Jul 08, 2020 | Suhan S |

ಧಾರವಾಡ: ಕೋವಿಡ್‌-19 ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಕೂಡಾ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಖಾಸಗಿ ವೈದ್ಯರಿಗೆ ಸಹಕಾರ ನೀಡಲು ಕೋರಿಕೊಳ್ಳಲಾಗುವುದು. ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ಜಿಲ್ಲಾಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಈ ಕಠಿಣ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಸಾರ್ವಜನಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ವಾಟ್ಸ್‌ ಆ್ಯಪ್‌, ಫೋನ್‌ ಹಾಗೂ ಇ-ಮೇಲ್‌ ಮೂಲಕ ಜನಸ್ಪಂದನೆ ಮಾಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ವಿವಿಧ ಇಲಾಖೆಗಳು ಕಳೆದ 3-4 ತಿಂಗಳಿನಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರ ಕಾರ್ಯನಿರ್ವಹಣೆ ಪ್ರಶಂಸನೀಯ. ಬರುವ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ತಕ್ಷಣ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಂಡುಬಂದ ಪ್ರಕರಣಗಳಲ್ಲಿ 30 ಜನ ಬೇರೆ ಜಿಲ್ಲೆಯವರಿದ್ದಾರೆ. ಜಿಲ್ಲೆಯ ಡಿಮ್ಹಾನ್ಸ್‌ ಪ್ರಯೋಗಾಲಯದಲ್ಲಿ 31807, ಕಿಮ್ಸ್‌ 19596, ಖಾಸಗಿ ಎನ್‌ಎಂಆರ್‌ ಪ್ರಯೋಗಾಲಯದಲ್ಲಿ 63 ಜನರನ್ನು ಇದುವರೆಗೆ ಕೋವಿಡ್‌ ತಪಾಸಣೆಗೆ ಒಳಪಡಿಸಲಾಗಿದೆ. ಪ್ರಸ್ತುತ ಕಿಮ್ಸ್‌ನಲ್ಲಿ 188, ಎಸ್‌ಡಿಎಂನಲ್ಲಿ 13, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 138 ಸೇರಿ ಒಟ್ಟು 339 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಅರವಿಂದ ಬೆಲ್ಲದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

Advertisement

ಕೋವಿಡ್ ವಿರುದ್ಧದ ಯುದ್ಧದಲ್ಲಿ ಖಾಸಗಿ ವೈದ್ಯರ ಭಾಗವಹಿಸುವಿಕೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಅನೇಕ ಬಾರಿ ಸಭೆ ಕರೆದು ಮನವಿ ಮಾಡಿಕೊಳ್ಳಲಾಗಿದೆ. ಖಾಸಗಿ ವೈದ್ಯರು ಅನಗತ್ಯ ಭಯ ತೊರೆದು ಸ್ವಯಂಪ್ರೇರಣೆಯಿಂದ ಕೊರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸಬೇಕು. ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳ ಸೇವೆ ಅನಿವಾರ್ಯ. -ಜಗದೀಶ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ

ಜಿಲ್ಲೆಯ ಕಿಮ್ಸ್‌ನಲ್ಲಿ 250, ಜಿಲ್ಲಾಸ್ಪತ್ರೆಯಲ್ಲಿ 40, ಮೂರು ತಾಲೂಕಾ ಆಸ್ಪತ್ರೆಗಳಲ್ಲಿ ತಲಾ 50 ಹಾಸಿಗೆಗಳು ಸೇರಿ ಒಟ್ಟು 440 ಹಾಸಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ 91 ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 8970 ಹಾಸಿಗೆಗಳ ಸಾಮರ್ಥ್ಯಗುರುತಿಸಲಾಗಿದೆ. ಈ ಪೈಕಿ ಸದ್ಯ 4 ಸೆಂಟರ್‌ಗಳಲ್ಲಿ 300 ಹಾಸಿಗೆಗಳು ಲಭ್ಯವಿವೆ. ಎಲ್ಲಾ 17 ಖಾಸಗಿ ಆಸ್ಪತ್ರೆಗಳಲ್ಲಿ ಅವುಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಹಂತ ಹಂತವಾಗಿ ಪಡೆಯಲಾಗುವುದು. -ನಿತೇಶ ಪಾಟೀಲ, ಜಿಲ್ಲಾಧಿಕಾರಿ

ವಾಟ್ಸ್‌ಆ್ಯಪ್‌ ಟಪಾಲು : ಸರಕಾರಿ ಕಚೇರಿಗಳಲ್ಲಿ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರದ ಊರುಗಳಿಂದ ಕಚೇರಿಗೆ ಬರುವುದು ಬೇಡ. ವಾಟ್ಸ್‌ಆ್ಯಪ್‌ ನಂ: 9449847641 ಗೆ ಮನವಿ ಮಾಡಿಕೊಂಡರೆ ಅದನ್ನು ಪರಿಶೀಲನೆ ಮಾಡಿ, ವಾಟ್ಸ್‌ಆ್ಯಪ್‌ ಮೂಲಕವೇ ಪ್ರತಿಕ್ರಿಯೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next