Advertisement

ಸದ್ಯಕ್ಕಿಲ್ಲ ತಾಲೂಕಿನಲ್ಲಿ ಮೇವಿನ ಕೊರತೆ

02:59 PM May 19, 2019 | Suhan S |

ಚನ್ನರಾಯಪಟ್ಟಣ: ಪೂರ್ವ ಮುಂಗಾರು ಕೈಕೊಟ್ಟರೂ ತಾಲೂಕಿನಲ್ಲಿ ರಾಸುಗಳ ಮೇವಿಗೆ ಕೊರತೆ ಉಂಟಾಗುವುದಿಲ್ಲ ಮುಂದಿನ 60 ದಿವಸದ ವರೆವಿಗೆ ಆಗುವಷ್ಟು ಮೇವಿನ ದಾಸ್ತಾನಿದೆ. ಹಾಗಾಗಿ ತಾಲೂಕಿನಲ್ಲಿ ಮೇವಿನ ಬ್ಯಾಂಕ್‌ ಮತ್ತು ಗೋಶಾಲೆ ತೆರೆಯುವ ಪ್ರಮೇಯವೇ ಒದಗಿ ಬರುವುದಿಲ್ಲ.

Advertisement

ಬರಪೀಡಿತ ತಾಲೂಕು ಎಂದು ಘೋಷಣೆಯಾಗಿ ರುವ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಉಳಿದೆಲ್ಲ ತಾಲೂಕುಗಳಿಗಿಂತ ಮೇವು ಹೆಚ್ಚಾಗಿ ದೊರೆಯುತ್ತಿದೆ. ಈಗಾಗಲೇ ಹಲವು ಗ್ರಾಮದ ರೈತರು ಭತ್ತ ಹಾಗೂ ರಾಗಿ ಒಕ್ಕಣೆ ಸಮಯದಲ್ಲಿ ಮೇವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ, ಹೈನುಗಾರಿಕೆ ಮಾಡುವ ರೈತರು ಹಾಗೂ ಕೊಳವೆ ಬಾವಿ ಹೊಂದಿರುವ ಕೃಷಿಕರು ಪಶು ಇಲಾಖೆಯಲ್ಲಿ ಮೇವಿನ ಬೀಜ ಪಡೆದು ಹಸಿರು ಮೇವು ಬೆಳೆದಿದ್ದಾರೆ.

ಗದ್ದೆಯಲ್ಲಿ ಹಸಿರು ಮೇವು ಬೆಳೆಯಲಾಗಿದೆ: ತಾಲೂಕಿನಲ್ಲಿ 1.13 ಲಕ್ಷ ರಾಸುಗಳಿಗೆ ನಿತ್ಯ ಒಣವೇವು ಐದು ಕೇಜಿಯಂತೆ ಸುಮಾರು 5. 68 ಲಕ್ಷ ಕೇಜಿ ಇಲ್ಲವೇ 17.05 ಲಕ್ಷ ಕೇಜಿ ಹಸಿಮೇವು ಬೇಕಿದೆ. ಮುಂದಿನ 60 ದಿವಸ‌ಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದೆ. ಇದಲ್ಲದೇ ತಾಲೂಕಿನ ಜನಿವಾರ ಕೆರೆ ಪ್ರದೇಶ, ಪಟ್ಟಣದ ಅಮಾನಿಕೆರೆ, ಬಾಗೂರು, ಜಂಬೂರು, ಬೇಡಿಗನಹಳ್ಳಿ ಸೇರಿದಂತೆ ಹಲವು ಗ್ರಾಮದ ಗದ್ದೆ ಬಯಲಿನಲ್ಲಿ ಭತ್ತ ನಾಟಿ ಮಾಡಿರು ವುದರಿಂದ ಮೇವಿನ ಸಮಸ್ಯೆ ಉಂಟಾಗುವುದಿಲ್ಲ. ಈ ಭಾಗದ ಕೆಲ ಕೃಷಿಕರು ತಮ್ಮ ಗದ್ದೆಯಲ್ಲಿ ಮೆಕ್ಕೆಜೊಳೆ ಬೆಳೆದಿದ್ದು, ಹಸಿರು ಮೇವು ಮಾರಾಟ ಮಾಡುವ ಮೂಲಕ ತಾಲೂಕಿನಲ್ಲಿ ಉಂಟಾಗಲಿರುವ ಮೇವಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದಾರೆ.

ಮೇವುಬ್ಯಾಂಕ್‌ ಅಗತ್ಯವಿಲ್ಲ: ಈಗ್ಗೆ ಒಂದು ವಾರ ದಿಂದ ಎರಡ್ಮೂರು ಸಲ ತುಂತುರು ಮಳೆಯಾಗಿರುವ ಕಾರಣ ಬಯಲುಗಳಲ್ಲಿ, ಗೋಮಾಳ ಹಾಗೂ ಬೋರೆಯಲ್ಲಿ ಹಸಿರು ಮೇವು ಚಿಗುರಿದೆ ಗ್ರಾಮೀಣ ಭಾಗದ ರೈತರು ತಮ್ಮ ರಾಸುಗಳನ್ನು ನಿತ್ಯ ಅಲ್ಲಿ ಮೇಯಿಸುವುದರಿಂದ ಮೇವಿನ ಸಮಸ್ಯೆ ಅಷ್ಟಾಗಿ ತಲೆದೂರಿಲ್ಲ, ಆದ್ದರಿಂದ ತಾಲೂಕಿನಲ್ಲಿ ಗೋಶಾಲೆ ಅಥವಾ ಮೇವು ಬ್ಯಾಂಕ್‌ ತೆರೆಯುವ ಪ್ರಮೇಯವೇ ಒದಗಿ ಬಂದಿಲ್ಲ.

ಮೇವಿನ ಕಿಟ್ ವಿತರಣೆ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ತಾಲೂಕಿನ 6 ಹೋಬಳಿಗಳ 27 ಸಾವಿರ ರೈತರಿಗೆ 85.50 ಲಕ್ಷ ಮೌಲ್ಯದ 30 ಸಾವಿರ ಮೇವಿನ ಬೀಜದ ಕಿಟ್ ವಿತರಣೆ ಮಾಡಲಾಗಿದೆ.

Advertisement

ಹೈಬ್ರಿಡ್‌ ಜವಾರ್‌ ತಳಿಯ ಮೇವಿನ ಬೀಜದಲ್ಲಿ ಬೆಳೆಯುವ ಮೇವು ಮೂರರಿಂದ ನಾಲ್ಕು ಬಾರಿ ದೊರೆಯಲಿದೆ, ಮೈಜ್‌ ಮೇವು ಬೀಜ ಪಡೆದ ರೈತರಿಗೆ 40 ದಿವಸದ ಅಂತರದಲ್ಲಿ ಒಮ್ಮೆ ಮಾತ್ರ ಮೇವು ದೊರೆಯಲಿದೆ. ಹೆಚ್ಚು ನೀರಿನ ಸೌಲಭ್ಯ ಹೊಂದಿರುವ ರೈತರು ಹೈಬ್ರಿಡ್‌ ಜವಾರ್‌ ತಳಿ ಪಡೆದು ನಾಲ್ಕು ತಿಂಗಳು ಮೇವಿನ ಸಮಸ್ಯೆಯನ್ನು ಬಗೆ ಹರಿಸಿಕೊಂಡಿದ್ದಾರೆ. ಇದಲ್ಲದೇ ಹೈನುಗಾರಿಕೆ ಮಾಡುವವರಿಗೆ ಹಾಲು ಉತ್ಪಾದಕರ ಸಹಾರ ಸಂಘದಿಂದ ಮೇವುಬೀಜವನ್ನು ವಿತರಿಸಲಾಗಿದೆ.

ಹಸಿಮೇವು ಹೆಚ್ಚು ಪೌಷ್ಟಿಕಾಂಶ: ಮೇವಿನ ಬೀಜ ಪಡೆದ ರೈತರು ಈಗಾಗಲೇ ಬಿತ್ತನೆ ಮಾಡಿ ಮೇವು ಬೆಳೆದಿದ್ದಾರೆ. ಈ ರೀತಿ ಹಸಿ ಮೇವು ರಾಸುಗಳಿಗೆ ನೀಡುವುದರಿಂದ ಜಾನುವಾರಗಳಿಗೆ ಹೆಚ್ಚು ಪೌಷ್ಟಿಕಾಂಶ ದೊರೆಯುತ್ತಿದ್ದು ಹೈನುಗಾರಿಕೆ ಮಾಡುವವರಿಗೆ ಹೆಚ್ಚು ಉಪಯೋಗವಾಗುತ್ತಿದ್ದು ರಾಸುಗಳು ಹೆಚ್ಚು ಹಾಲು ನೀಡುತ್ತಿದ್ದು ಬೇಸಿಗೆ ಯಲ್ಲಿಯೂ ಹೈನುಗಾರಿಗೆ ತಾಲೂಕಿನಲ್ಲಿ ಉತ್ತಮವಾಗಿದೆ.

ಹೋಬಳಿವಾರು ವಿವಿರ: ಕಸಬಾ ಹೋಬಳಿಯಲ್ಲಿ 12,776 ಹಸುಗಳಿದ್ದು 7,310 ಎಮ್ಮೆಗಳಿವೆ. ನುಗ್ಗೇಹಳ್ಳಿಯಲ್ಲಿ 10,580 ಹಸು, 6.834 ಎಮ್ಮೆ, ಹಿರೀಸಾವೆ 9065 ಹಸು, 8129 ಎಮ್ಮೆ, ಶ್ರವಣ ಬೆಳಗೊಳ 12, 121 ಹಸು, 9, 318 ಎಮ್ಮೆ, ದಂಡಿಗನ ಹಳ್ಳಿ 11, 515 ಹಸು, 4,733 ಎಮ್ಮೆ, ಬಾಗೂರು ಹೋಬಳಿಯಲ್ಲಿ 13,105 ಹಸು, 8,040 ಎಮ್ಮೆಗಳಿದ್ದು ತಾಲೂಕಿನಲ್ಲಿ ಒಟ್ಟಾರೆಯಾಗಿ 1.13 ಲಕ್ಷ ರಾಸುಗಳಿವೆ, ಅವುಗಳಲ್ಲಿ ಒಂದು ಲಕ್ಷ ರಾಸುಗಳಿಗೆ ಈಗಾಗಲೆ ಕಲುಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗಿದೆ. ಇವುಗಳಲ್ಲಿ ಎಸ್ಸಿ,ಎಸ್ಟಿ ಜನಾಂಗದ ರೈತರು 165 ರಾಸುಗಳಿಗೆ ಮಾತ್ರ ವಿಮೆ ಮಾಡಿಸಿದ್ದಾರೆ.

ಪರಿಹಾರ: ತಾಲೂಕಿನಲ್ಲಿ ಅಕಾಲಿಕವಾಗಿ ಮರಣ ಹೊಂದಿರುವ 60 ಜಾನುವಾರಗಳಿಗೆ ತಲಾ 10 ಸಾವಿರ ಪರಿಹಾರ ನೀಡಿದರೆ 112 ಕುರಿಗಳಿಗೆ ತಲಾ 5 ಸಾವಿರ ರೂ. ಪರಿಹಾರ ನೀಡಲಾಗಿದೆ.

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next