Advertisement

ನ್ಯೂನತೆ ಮಕ್ಕಳಿಗೆ ಪಾಲಕರಿಂದ ವಿಶೇಷ ಆರೈಕೆ ಅಗತ್ಯ

05:06 PM Aug 20, 2018 | |

ಹಾನಗಲ್ಲ: ಸಾಮಾನ್ಯ ಮಕ್ಕಳನ್ನು ನೋಡುವ ದೃಷ್ಟಿಕೋನದಂತೆ ಬೆಳವಣಿಗೆಯಲ್ಲಿ ನ್ಯೂನ್ಯತೆ ಹೊಂದಿದ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸುವ ಮೂಲಕ, ನಮ್ಮಲ್ಲಿರುವ ವಿಚಾರ, ಮೌಲ್ಯಗಳನ್ನು ವಿಭಿನ್ನವಾಗಿ ವಿವಿಧ ರೀತಿಯಿಂದ ಪ್ರೀತಿ ಪೂರಕವಾಗಿ ಹಂಚಬೇಕು ಎಂದು ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತೀರ್ಣಾಧಿಕಾರಿ ಎಸ್‌.ಆನಂದ ಹೇಳಿದರು.

Advertisement

ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆ ಹಾನಗಲ್ಲ ಆಶ್ರಯದಲ್ಲಿ ಶೀಘ್ರ ಮಧ್ಯಸ್ಥಿಕೆ ಹಾಗೂ ಆರಂಭಿಕ ಶಿಕ್ಷಣ ಕಾರ್ಯಕ್ರಮದಡಿ ಆಯೋಜಿಸಲಾಗಿದ್ದ ನಿರಾಮಯ ಆರೋಗ್ಯ ಕಾರ್ಡ್‌ ವಿತರಣೆ ಹಾಗೂ ಪಾಲಕರ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದೇವರ ಸಮಾನ; ಅವರು ಹೇಗೆ ಇರಲಿ ಅವರ ಆರೈಕೆ ಮಾಡುವುದು ತಂದೆ ತಾಯಿಯ ಕರ್ತವ್ಯ. ವಿಶೇಷ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಇದರಿಂದ ಮಕ್ಕಳ ಬದಲಾವಣೆಗೆ ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ ಎಂದರು. ರೋಶನಿ ಸಂಸ್ಥೆ ನ್ಯೂನ್ಯತೆ ಹೊಂದಿರುವ ಮಕ್ಕಳಿಗೆ ದಾರಿ ದೀಪವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಡಿಂಪಲ್‌ ಡಿಸೋಜಾ, ನಿರಾಮಯ ಆರೋಗ್ಯ ಕಾರ್ಡ್‌ ಎನ್ನುವುದು ಒಂದು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇದು ಕೇವಲ ಬುದ್ಧಿ ಮಾಂದ್ಯತೆ, ಮೆದುಳು ವಾತ, ಆಟಿಸ್‌ಂ ಹಾಗೂ ಬಹುವಿಧ ಅಂಗವಿಕಲತೆ ಉಳ್ಳವರಿಗಾಗಿಯೇ ನೀಡುವ ಸೌಲಭ್ಯವಾಗಿದೆ. ಪಾಲಕರು ದಿವ್ಯಾಂಗ ಮಕ್ಕಳನ್ನು ಆರೋಗ್ಯ ಸೇವೆಯಿಂದ ವಂಚಿತಗೊಳಿಸಬಾರದು ಎನ್ನುವ ಉದ್ದೇಶದಿಂದ ನ್ಯಾಷನಲ್‌ ಟ್ರಸ್ಟ್‌ ಅಡಿಯಲ್ಲಿ ಅಂತಹ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುತ್ತದೆ. ಪಾಲಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲೆಂದೇ ಇರುವ ಈ ಯೋಜನೆ ಉಪಯೋಗವನ್ನು ಪ್ರತಿಯೊಬ್ಬ ಪಾಲಕರು ಪಡೆದುಕೊಳ್ಳಬೇಕು. ಮಕ್ಕಳನ್ನು ಶೀಘ್ರ ಮಧ್ಯಸ್ಥಿಕೆ ಕೇಂದ್ರಕ್ಕೆ ಕರೆತಂದು ಅವರ ಬದಲಾವಣೆಗೆ ಮುಂದಾಗಬೇಕು. ನ್ಯೂನ್ಯತೆ ಮಕ್ಕಳ ಆರೋಗ್ಯದಕಡೆ ಹೆಚ್ಚಿನ ಗಮನಹರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎಂ.ಎಂ. ಮುಲ್ಲಾ, ರೋಶನಿ ಸಂಸ್ಥೆಯವರು ನೀಡಿದ ಸಾಧನ ಸಲಕರಣೆಗಳನ್ನು ಸರಿಯಾಗಿ ಬಳಕೆ ಮಾಡಿ ಮಕ್ಕಳ ಆರೋಗ್ಯ ಸುಧಾರಣೆಗೆ ಶ್ರಮಿಸಬೇಕೆಂದರು. ನ್ಯೂನ್ಯತೆ ಮಗುವಿನ ಪಾಲಕರಾದ ಹೇಮಾವತಿ ಮಾತನಾಡಿ, ತಾವು ಒಂದು ವರ್ಷದಿಂದ ನಿರಾಮಯ ಆರೋಗ್ಯ ಕಾರ್ಡ್ನ್ನು ಬಳಸುತ್ತಿದ್ದು, ಅದರಿಂದಲೇ ತಮ್ಮ ಮಗುವಿನ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನಲ್ಲಿ ಮಾಡಿಸಿಕೊಂಡಿದ್ದೇವೆ ಎಂದು ತಿಳಿಸಿದ ಅವರು, ಮಗುವಿನಲ್ಲಾದ ಬದಲಾವಣೆಯನ್ನು ಪಾಲಕರೊಂದಿಗೆ ಹಂಚಿಕೊಂಡರು.

ವೈದ್ಯಕೀಯ ಪ್ರಮಾಣ ಪತ್ರ ಪಡೆಯುವ ಹಾಗೂ ಚಿಕಿತ್ಸಾ ವೆಚ್ಚವನ್ನು ನಿರಾಮಯ ಯೋಜನೆಯ ಮೂಲಕ ಮಾಡಿಕೊಳ್ಳುವ ಕುರಿತು ಶಿವಕುಮಾರ ಮಾಂಗ್ಲೇನವರ ಮತ್ತು ಶಿವಬಸವನಗೌಡ ಪಾಟೀಲ್‌ ಅವರು ಪಾಲಕರಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ 15 ಮಕ್ಕಳಿಗೆ ನಿರಾಮಯ ಕಾರ್ಡ್‌ ವಿತರಿಸಲಾಯಿತು. ಪಾಲಕರಾದ ಗೌರಮ್ಮ ಪ್ರಾರ್ಥಿಸಿದರು. ಎಸ್‌.ವಿ.ಪಾಟೀಲ್‌ ಸ್ವಾಗತಿಸಿದರು, ಮಧುಮತಿ ನಿರೂಪಿಸಿದರು, ಅಣ್ಣಪ್ಪ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next