Advertisement
ಮಂಗಳೂರಿನಲ್ಲಿ ರಕ್ಷಣಾ ವಲಯದ ಉತ್ಪನ್ನಗಳ ಮುಖ್ಯವಾಗಿ ವೈಮಾನಿಕ ಕ್ಷೇತ್ರದ ಉತ್ಪನ್ನಗಳ ತಯಾರಿಕಾ ಘಟಕವನ್ನು ಸ್ಥಾಪಿಸುವುದಾಗಿ ಸರಕಾರ ಘೋಷಣೆ ಮಾಡಿದೆ. ಇದು ಮಂಗಳೂರಿನ ಪಾಲಿಗೆ ಒಂದು ಆಶಾದಾಯಕ ಬೆಳವಣಿಗೆಯಾಗಿದ್ದು, ಕರಾವಳಿಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಪೂರಕವಾಗಲಿದೆ.
Related Articles
ಮಹಾರಾಷ್ಟದಲ್ಲಿ ಈಗಾಗಲೇ ಅಲ್ಲಿನ ಸರಕಾರ ರಕ್ಷಣಾ ಉತ್ಪನ್ನಗಳು ಹಾಗೂ ವೈಮಾನಿಕ ಸಾಮಗ್ರಿಗಳ ಉತ್ಪಾದನೆಗೆ ಹೊಸದಾಗಿ 5 ಕ್ಲಸ್ಟರ್ ಗಳನ್ನು ಸ್ಥಾಪಿಸಲು ಮುಂದಾಗಿದೆ. ಪ್ರಥಮ ಹಂತದಲ್ಲಿ ಇದಕ್ಕಾಗಿ 15,000 ಕೋಟಿ ರೂ. ವಿನಿಯೋಗಿಸಲು ರೂಪುರೇಷೆ ಸಿದ್ಧಪಡಿಸಿದೆ. 5 ಕ್ಲಸ್ಟರ್‌ಗಳ ಸ್ಥಾಪನೆಯಿಂದ ಹೊಸದಾಗಿ ಸುಮಾರು 1 ಲಕ್ಷ ಉದ್ಯೋಗ ಸ್ಥಾಪನೆಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.
Advertisement
ಪ್ರಸ್ತುತ ಭಾರತದ ರಕ್ಷಣಾ ವಲಯದ ಅವಶ್ಯಕತೆಗಳಲ್ಲಿನ ಶೇ. 60ರಷ್ಟು ಹಾರ್ಡ್ವೇರ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರಕಾರ ರಕ್ಷಣಾ ವಲಯದ ಸಾಮಗ್ರಿಗಳ ಆಮದು ಪ್ರಮಾಣವನ್ನು ಕನಿಷ್ಠ ಮಟ್ಟಕ್ಕಿಳಿಸಲು ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ಮೇಕ್ ಇಂಡಿಯಾಕ್ಕೆ ಉತ್ತೇಜನ ನೀಡಿ ಭಾರತದಲ್ಲೇ ಇವುಗಳನ್ನು ಉತ್ಪಾದಿಸಲು ಉತ್ತೇಜನ ನೀಡಲಾಗುತ್ತಿದೆ. ಕೇಂದ್ರ ಸರಕಾರ ಈಗಾಗಲೇ ಕರ್ನಾಟಕ, ಆಂಧ್ರ ಪ್ರದೇಶ, ಮಧ್ಯಪ್ರದೇಶ , ಮಹಾರಾಷ್ಟ್ರ ಹಾಗೂ ಛತ್ತೀಸ್‌ಘಡದಲ್ಲಿ ರಕ್ಷಣಾ ವಲಯದ ಉತ್ಪನ್ನಗಳ ಉತ್ಪಾದನಾ ಘಟಕಗಳನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಿದೆ.
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಉತ್ಪಾದನೆಯಲ್ಲಿ ಗಣನೀಯವ ಪ್ರಮಾಣದಲ್ಲಿ ಏರಿಕೆಯಾಗಿದ್ದು, 2017- 18ರಲ್ಲಿ 58,163 ಕೋಟಿ ರೂ. ಮೊತ್ತದ ಉತ್ಪನ್ನಗಳನ್ನು ತಯಾರಿಸಲಾಗಿದೆ. ಇದರಲ್ಲಿ ಶೇ. 40ರಷ್ಟು ಉತ್ಪನ್ನಗಳ ತಯಾರಿಕೆಯನ್ನು ಖಾಸಗಿ ಕಂಪೆನಿಗಳಿಗೆ ಹೊರಗುತ್ತಿಗೆ ನೀಡಲಾಗಿದೆ. ಉತ್ತರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಎರಡು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲಾಗಿದೆ. ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಇತ್ತೀಚೆಗೆ ಮತ್ತೂಂದು ಕಾರಿಡಾರ್ ಸೇರ್ಪಡೆಗೊಂಡಿದೆ. ಇದರಿಂದ ರಕ್ಷಣ ಉದ್ಯಮಕ್ಕೆ 3,200 ಕೋಟಿ ರೂ. ಹರಿದು ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಸರಕಾರ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಗಳನ್ನು ಸ್ಥಾಪಿಸಿ ಜಿಲ್ಲೆಗಳನ್ನು ಚೀನ ಮಾದರಿಯಲ್ಲಿ ಕೈಗಾರಿಕೆಗಳಿಗೆ ಉತ್ತೇಜಿಸಲು ಕ್ರಮ ಕೈಗೊಂಡಿದೆ. ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಚೀನ ಮಾದರಿಯಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳು ಬರುತ್ತಿವೆ. ಕೊಪ್ಪಳದಲ್ಲಿ ಟಾಯ್ಸ ಕ್ಲಸ್ಟರ್ ಹಾಗೂ ಬಳ್ಳಾರಿಯಲ್ಲಿ ಜವಳಿ ಕ್ಲಸ್ಟರ್ ಗಳು ಇತ್ತೀಚೆಗೆ ಉದ್ಘಾಟನೆಗೊಂಡಿವೆ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಫೋನ್, ಮೈಸೂರಿನಲ್ಲಿ ಪ್ರಿಂಟೆಡ್ ಸರ್ಕ್ನೂಟ್ ಬೋರ್ಡ್ಸ್, ಹಾಸನದಲ್ಲಿ ಟೈಲ್ಸ್, ಕಲಬುರಗಿಯಲ್ಲಿ ಸೋಲಾರ್ ಪ್ಯಾನಲ್ಸ್, ಚಿತ್ರದುರ್ಗದಲ್ಲಿ ಎಲ್‌ಇಡಿ ಲೈಟ್ಸ್, ಬೀದರ್‌ನಲ್ಲಿ ಕೃಷಿ ಉಪಕರಣಗಳು ಹಾಗೂ ತುಮಕೂರಿನಲ್ಲಿ ಸ್ಪೋರ್ಟ್ಸ್ ಗೂಡ್ಸ್ ಕ್ಲಸ್ಟರ್‌ಗಳು ಸ್ಥಾಪಿಸಲು ಸರಕಾರ ಕಾರ್ಯಯೋಜನೆ ರೂಪಿಸಿದೆ. ಇದರಿಂದ 9 ಲಕ್ಷ ಮಂದಿಗೆ ಉದ್ಯೋಗ ಲಭಿಸಲಿದೆ ನಿರೀಕ್ಷಿಸಲಾಗಿದೆ. ಇದೇ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಿಶೇಷ ಕೈಗಾರಿಕಾ ಕ್ಲಸ್ಟರ್‌ವೊಂದರ ಸ್ಥಾಪನೆಯಾಗಬೇಕು ಎಂಬುದು ಜಿಲ್ಲೆಯ ಜನರ ನಿರೀಕ್ಷೆಯಾಗಿತು.
ಶೀಘ್ರ ಅನುಷ್ಠಾನಕ್ಕೆ ಬರಲಿಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಗಳೂರಿನಲ್ಲಿ ರಕ್ಷಣಾ ಉತ್ಪನ್ನಗಳ ಘಟಕವೊಂದನ್ನು ಸ್ಥಾಪಿಸುವುದಾಗಿ ಮಾಡಿರುವ ಘೋಷಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಮಂಗಳೂರಿನಲ್ಲಿ ಈಗಾಗಲೇ ಕೋಸ್ಟ್‌ಗಾರ್ಡ್ ನ ತರಬೇತಿ ಕೇಂದ್ರ ಮಂಜೂರುಗೊಂಡಿದೆ. ಮಂಗಳೂರಿನಲ್ಲಿ ರಕ್ಷಣಾ ಉತ್ಪನ್ನಗಳ ಘಟಕ ಸ್ಥಾಪನೆಗೆ ಪೂರಕ ವಾತಾವರಣವಿದೆ. ತಾಂತ್ರಿಕ ಮಾನವ ಸಂಪನ್ಮೂಲವೂ ಲಭ್ಯವಿದೆ. ಉದ್ಯಮ ಸ್ಥಾಪನೆಗೆ ಪೂರಕವಾದ ವಾತಾವರಣವೂ ಇದೆ. ಜಿಲ್ಲೆಯಲ್ಲಿ ಈ ಹಿಂದೆ ಐಟಿ, ಆಹಾರ ಸಂಸ್ಕರಣೆ, ವಸ್ತ್ರೋದ್ಯಮ, ಪ್ಲಾಸ್ಟಿಕ್ ಪಾರ್ಕ್, ಜವುಳಿ ( ಆ್ಯಪೆರಾಲ್) ಪಾರ್ಕ್, ಐಟಿ ಪಾರ್ಕ್, ಕೊಕೊನಟ್ ಪಾರ್ಕ್, ಜಾಷಧ ತಯಾರಿ ಪಾರ್ಕ್, ಆಟೋಮೊಬೈಲ್ ಪಾರ್ಕ್ ಮುಂತಾದ ಯೋಜನೆಗಳನ್ನು ಪ್ರಸ್ತಾವನೆ ಮಾಡಲಾಗಿತ್ತು. ಆದರೆ ಇದ್ಯಾವುದು ಸದ್ಯಕ್ಕೆ ಸ್ಥಾಪನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈಗ ರಕ್ಷಣಾ ಉತ್ಪನ್ನಗಳ ಘಟಕ ಸ್ಥಾಪಿಸುವ ಪ್ರಸ್ತಾವವೂ ಸಾಲಿನ ಸೇರದೆ ಶೀಘ್ರ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭಗೊಳ್ಳಬೇಕಾಗಿದೆ. ನಮ್ಮ ಜಿಲ್ಲೆಯಿಂದಲೂ ಪ್ರಯತ್ನಗಳು ನಡೆಯಬೇಕಾಗಿದೆ. ಕೇಶವ ಕುಂದರ್