Advertisement

ಸೇನೆ ಹಿಂದೆಗೆತ ಪೂರ್ಣ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಣೆ

08:04 AM Feb 22, 2021 | Team Udayavani |

ಹೊಸದಿಲ್ಲಿ/ಸೇಲಂ: ಗಾಲ್ವಾನ್‌ ಘರ್ಷಣೆ ಅನಂತರ ಭಾರತ ಮತ್ತು ಚೀನ ನಡುವೆ ಏರ್ಪಟ್ಟಿದ್ದ ಬಹುದೊಡ್ಡ ಸಂಘರ್ಷವೊಂದು ಶಮನವಾಗುವ ಹಂತಕ್ಕೆ ಬಂದಿದೆ. ಉಭಯ ದೇಶಗಳು ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಒಪ್ಪಿತ ಸ್ಥಾನಗಳವರೆಗೆ ತಮ್ಮ ಸೇನೆಯನ್ನು ಸಂಪೂರ್ಣವಾಗಿ ಹಿಂದೆಗೆದುಕೊಂಡಿವೆ. ಇದನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.

Advertisement

ಭಾರತೀಯ ಯೋಧರ ಬಲಿದಾನದ ಬಗ್ಗೆ ಕಾಂಗ್ರೆಸ್‌ ಈಗಲೂ ಅನುಮಾನ ವ್ಯಕ್ತಪಡಿಸುತ್ತಿದೆ. ಭಾರತೀಯ ಸೇನೆಯು ಗಡಿಯಲ್ಲಿ ಎಂದಿಗೂ ಏಕ ಪಕ್ಷೀಯ ದಾಳಿಗೆ ಅವಕಾಶ ನೀಡುವುದಿಲ್ಲ. ಹೀಗೆ ಮಾಡಲು ಬಂದವರಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತದೆ ಎಂದು ಸಿಂಗ್‌ ತಮಿಳುನಾಡಿನ ಸೇಲಂನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ ಹೇಳಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶದ ಏಕತೆ, ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆಯ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದೂ ತಿಳಿಸಿದ್ದಾರೆ.

10ನೇ ಸುತ್ತಿನ ಮಾತುಕತೆ ಅಂತ್ಯ
ಚೀನದ ಕಡೆ ಇರುವ ಮೋಲ್ಡೋದಲ್ಲಿ ನಡೆದ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ಗಳ ಸಭೆ ಮುಕ್ತಾಯವಾಗಿದೆ. ಸಭೆ 16 ತಾಸುಗಳ ಕಾಲ ನಡೆದಿದ್ದು, ಪೂರ್ವ ಲಡಾಖ್‌ನಿಂದ ಸೇನೆ ವಾಪಸಾತಿಗೆ ಸಮ್ಮತಿಸಲಾಗಿದೆ. ಮುಂದೆಯೂ ಮಾತುಕತೆಗಳ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯ ಗೋಗ್ರಾ, ಹಾಟ್‌ಸ್ಪ್ರಿಂಗ್‌ಗಳಿಂದ ವಾಪಸಾತಿಗೆ ಒಪ್ಪಿಗೆ ನೀಡಲಾಗಿದೆ. ಆದರೆ ದೆಪ್ಸಂಗ್‌ ಪ್ಲೇನ್ಸ್‌ ಮತ್ತು ಡೆಮ್‌ಚುಕ್‌ ಬಗ್ಗೆ ಚರ್ಚೆ ನಡೆಯಿತಾದರೂ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಉಭಯ ದೇಶಗಳು ಹೇಳಿಕೊಂಡಿವೆ.

“ಚೀನಕ್ಕೆ ಅನಿವಾರ್ಯವಾಗಿತ್ತು’
ಲಡಾಖ್ : ಲಡಾಖ್‌ನ ಪ್ಯಾಗೊಂಗ್‌ ತ್ಸೋದಲ್ಲಿ ಸೇನಾ ವಾಪಸಾತಿ ಭಾರತೀಯ ಸೇನೆಗೆ ಅನುಕೂಲಕರ ಸನ್ನಿವೇಶದಲ್ಲಿ ನಡೆದಿದೆ ಎಂದು ಸೇನೆಯ ನಾರ್ದರ್ನ್ ಆರ್ಮಿ ಕಮಾಂಡರ್‌ ಲೆ|ಜ| ವೈ.ಕೆ. ಜೋಶಿ ಹೇಳಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಪ್ಯಾಂಗೊಂಗ್‌ ತ್ಸೋದ ದಕ್ಷಿಣ ದಂಡೆಯ ಮೇಲಿನ ಎತ್ತರ ಪ್ರದೇಶಗಳ ಆಯಕಟ್ಟಿನ ಸ್ಥಳಗಳಲ್ಲಿ ಭಾರತೀಯ ಸೇನೆಯು ನೆಲೆ ಹೂಡಿದ್ದರಿಂದ ಚೀನದ ಸೇನೆಯು ಅನಿವಾರ್ಯವಾಗಿ ಸಂಧಾನದ ಮೇಜಿಗೆ ಬರಲೇ ಬೇಕಾಯಿತು ಎಂದು ಅವರು ಪ್ರತಿಪಾದಿಸಿದ್ದಾರೆ.

Advertisement

ಒಪ್ಪಂದಗಳನ್ನು ಚೀನದ ಸೇನೆಯು ಏಕಪಕ್ಷೀಯವಾಗಿ ಮುರಿದು ಮುಂದೊತ್ತಿ ಬಂದಿತ್ತು ಎಂದು ಚೀನದ ಅತಿಕ್ರಮಣಕ್ಕೆ ಎದುರಾಗಿ ಭಾರತೀಯ ಸೇನೆಯ “ಆಪರೇಶನ್‌ ಲಿಯೊಪಾರ್ಡ್‌’ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೆ|ಜ| ಜೋಶಿ ಹೇಳಿದ್ದಾರೆ. ಚೀನದ ಅತಿಕ್ರಮಣಕ್ಕೆ ಉತ್ತರವಾಗಿ ಭಾರತೀಯ ಸೇನೆ ಅತ್ಯಂತ ಕ್ಷಿಪ್ರವಾಗಿ ಪ್ಯಾಂಗೊಂಗ್‌ ಸರೋವರದ ದಕ್ಷಿಣ ದಂಡೆಯ ಎತ್ತರ ಪ್ರದೇಶಗಳಾದ ರೆಚಿನ್‌ ಲಾ ಮತ್ತು ಕೈಲಾಶ್‌ ರೇಂಜ್‌ಗಳಲ್ಲಿ ನೆಲೆ ಹೂಡಿತು. ಇವು ಚೀನ ಅತಿಕ್ರಮಿಸಿದ್ದ ಮೊಲ್ಡೊ ಗ್ಯಾರಿಸನ್‌ ಮತ್ತಿತರ ಪ್ರದೇಶಗಳಿಗೆ ನೇರ ಎದುರಿನಲ್ಲಿವೆ. ಇದಕ್ಕೆ ಮುನ್ನ ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ ಸಭೆಯಲ್ಲಿ ಸೇನಾ ಹಿಂದೆಗೆತಕ್ಕೆ ಚೀನ ನಕಾರ ಸೂಚಿಸಿತ್ತು. ಆದರೆ ಭಾರತೀಯ ಸೇನೆಯ ಈ ನಡೆಯ ಬಳಿಕ ಅದು ತೆಪ್ಪಗೆ ಒಪ್ಪಿಕೊಳ್ಳಬೇಕಾಯಿತು ಎಂದು ಲೆ|ಜ| ಜೋಶಿ ಹೇಳಿದ್ದಾರೆ.

ಕೂಲಂಕಷ ಪರಿಶೀಲನೆ
ಸೇನಾ ವಾಪಸಾತಿಯ ಸಂದರ್ಭದಲ್ಲಿ ವೈರಿಯ ಪ್ರತೀ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ ಎಂದು ಕೂಡ ಲೆ|ಜ| ಜೋಶಿ ಹೇಳಿದ್ದಾರೆ. ವಾಪಸಾತಿ ನಾಲ್ಕು ಹಂತಗಳನ್ನು ಹೊಂದಿದ್ದು, ಪ್ರತೀ ಹಂತದಲ್ಲಿಯೂ ಕೂಲಂಕಷವಾಗಿ ಗಮನಿಸಿ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

ಮೊದಲನೆಯ ಹಂತ ಶಸ್ತ್ರಸಜ್ಜಿತ ಮತ್ತು ಯಂತ್ರ ಸಹಿತ ಯೂನಿಟ್‌ಗಳು ಒಪ್ಪಿತ ಸ್ಥಾನಗಳಿಗಿಂತ ಹಿಂದೆ ಸರಿಯುವುದು. 2 ಮತ್ತು 3ನೇ ಹಂತಗಳು ಪ್ಯಾಂಗೊಂಗ್‌ ತ್ಸೋದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಭೂಸೇನೆಯ ವಾಪಸಾತಿ. 4ನೇ ಹಂತದಲ್ಲಿ ಕೈಲಾಶ್‌ ರೇಂಜ್‌ನಿಂದ ವಾಪಸಾತಿ ಎಂದು ಲೆ|ಜ| ಜೋಶಿ ವಿವರಿಸಿದ್ದಾರೆ.

ಪ್ರತೀ ಹಂತ ಪೂರೈಸಿದ ಬಳಿಕ ಎರಡೂ ಸೇನೆಗಳು ಸಮ್ಮತಿಸಿದ ಮೇಲಷ್ಟೇ ಮುಂದಿನ ಹಂತ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಚೀನದ ಪಡೆಗಳ ವಾಪಸಾತಿ ತೃಪ್ತಿದಾಯಕವಾಗಿದೆ ಮತ್ತು ಅದರಲ್ಲಿ “ಪ್ರಾಮಾಣಿಕತೆ’ ಕಂಡುಬಂದಿತ್ತು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next