ಬೀದರ: ಜಿಲ್ಲಾ ವಿಮಾ ಅಧಿಕಾರಿ ರಾಜಶೇಖರ ಗೌರೆ ಅಮಾನತು ಖಂಡಿಸಿ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಸಿಎಂಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಉಪ ನಿರ್ದೇಶಕ ಹುದ್ದೆ ತಪ್ಪಿಸಲು ವಿಮಾ ಇಲಾಖೆಯ ನಿರ್ದೇಶಕಿ ಕೆ. ಸಾವಿತ್ರಿ ಅವರು ಉದ್ದೇಶಪೂರ್ವಕವಾಗಿ ಗೌರೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಗೌರೆ ಅವರು 2019ರಿಂದ ಈವರೆಗೆ ಜಿಲ್ಲಾ ವಿಮಾ ಅಧಿಕಾರಿಗಳ ರಾಜ್ಯದ ಹಾಗೂ ಕಲ್ಯಾಣ ಕರ್ನಾಟಕ ಜೇಷ್ಠತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೂ, ಅವರಿಗೆ ಬಡ್ತಿ ನೀಡಿಲ್ಲ. ಕಿರಿಯರನ್ನು ಬಡ್ತಿಗೆ ಪರಿಗಣಿಸಲಾಗಿದೆ. ಸಾವಿತ್ರಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ದಲಿತ ಅಧಿಕಾರಿಗಳಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮಿತಿಯ ಗೌರವಾಧ್ಯಕ್ಷ ತಿಪ್ಪಣ್ಣ ಶಿವಪೂರೆ, ಅಧ್ಯಕ್ಷ ಮಲ್ಲಿಕಾರ್ಜುನ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಗಣಪತಿ ಭಕ್ತಾ, ವಿವಿಧ ನೌಕರರ ಸಂಘಟನೆ ಪ್ರಮುಖರಾದ ಪಾಂಡುರಂಗ ಬೆಲ್ದಾರ್, ಗೋವಿಂದ ಪೂಜಾರಿ, ರಾಜಕುಮಾರ ಮಾಳಗೆ, ವೈಜಿನಾಥ ಸಾಗರ, ನಾಗೇಂದ್ರನಾಥ ಸಿಂಗೋಡೆ, ಸುರೇಶ ಟಾಳೆ, ವಿಜಯಕುಮಾರ, ಡಾ| ಕಾಶೀನಾಥ ಚಲ್ವಾ, ರಾಜಪ್ಪ ಗುನ್ನಳ್ಳಿ, ಶಿವಕುಮಾರ ಸದಾಫುಲೆ, ಶಿವರಾಜ ಬಿರಾದಾರ್, ರಾಜು ಸಾಗರ, ವಿಷ್ಣುಕಾಂತ ಠಾಕೂರ್, ಭೀಮಣ್ಣ ಕೊಂಕಣೆ, ಸಂಜು ಬಿ. ಸೂರ್ಯವಂಶಿ, ಎಂ.ಎಸ್. ಮನೋಹರ, ಸೂರ್ಯಕಾಂತ ಸಿಂಗೆ, ವಿಠ್ಠಲದಾಸ ಪ್ಯಾಗೆ, ಸುಮಂತ ಕಟ್ಟಮನಿ, ಮಾರುತಿ ಪೂಜಾರಿ ಮತ್ತಿತರರಿದ್ದರು.