ಹೊಸದಿಲ್ಲಿ: ರಕ್ಷಣ ವಲಯದ ಸರಕಾರಿ ಸಂಸ್ಥೆಗಳಾದ ಬೆಮೆಲ್, ಜಿಆರ್ ಎಸ್‌ಇ ಲಿ. ಹಾಗೂ ಮಿಶ್ರಧಾತು ನಿಗಮ ಲಿ.ಗಳು ಸದ್ಯದಲ್ಲೇ ಖಾಸಗೀಕರಣಗೊಳ್ಳಲಿವೆ. ಈ ಕುರಿತು ಕೇಂದ್ರ ಸರಕಾರವೇ ರಾಜ್ಯಸಭೆಗೆ ಸೋಮವಾರ ಮಾಹಿತಿ ನೀಡಿದೆ. ಸೇನಾ ಹಾರ್ಡ್ ವೇರ್ ಹಾಗೂ ಶಸ್ತ್ರಾಸ್ತ್ರಗಳ ದೇಶೀಯ ತಯಾರಿಕೆಗೆ ಉತ್ತೇಜನ ನೀಡುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಭಾಗವಾಗಿ, ಈ ಸಂಸ್ಥೆಗಳಲ್ಲಿರುವ ಬಂಡವಾಳ ವಾಪಸ್ ಪಡೆಯಲು
ಸರಕಾರ ನಿರ್ಧರಿಸಿದೆ.
ಇದನ್ನೂ ಓದಿ:ಬಂಟ್ವಾಳ: ತಾಯಿಯ ಕುರಿತು ಭಾವನಾತ್ಮಕ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ!
ಅದರಂತೆ ಬೆಮೆಲ್, ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ ಲಿ., ಮಿಶ್ರಧಾತು ನಿಗಮ ಲಿ.ಯನ್ನು ಖಾಸಗೀಕರಣಗೊಳಿಸಲಾಗುವುದು ಎಂದು ರಕ್ಷಣ ಖಾತೆ ಸಹಾಯಕ ಸಚಿವ ಶ್ರೀಪಾದ್ ನಾಯ್ಕ ಲಿಖಿತ ಮಾಹಿತಿ ನೀಡಿದ್ದಾರೆ. ಮ್ಯಾನೇಜ್ ಮೆಂಟ್ ನಿಯಂತ್ರಣವನ್ನು ವರ್ಗಾಯಿಸದೇ ಈ ಸಂಸ್ಥೆಗಳಲ್ಲಿನ ಷೇರುಗಳನ್ನು ವಾಪಸ್ ಪಡೆಯಲಾಗುವುದು ಎಂದೂ ಹೇಳಿದ್ದಾರೆ.
1964ರಲ್ಲಿ ಸ್ಥಾಪನೆಯಾದ ಬೆಮೆಲ್ ಸಂಸ್ಥೆಯು ರಕ್ಷಣೆ, ರೈಲು, ವಿದ್ಯುತ್, ಗಣಿಗಾರಿಕೆ ಹಾಗೂ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಸರಕುಗಳನ್ನು ಉತ್ಪಾದಿಸುತ್ತಿದೆ. ಕಂಪೆನಿಯ ಉತ್ಪನ್ನಗಳನ್ನು ದೇಶೀಯ ಸಂಸ್ಥೆಗಳಿಗೆ ಮಾತ್ರವಲ್ಲದೇ 67ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಸದ್ಯ ಶ್ರೀಪಾದ್ ನಾಯ್ಕ ಆಸ್ಪತ್ರೆಯಲ್ಲಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.
46 ಯೋಧರು ಹುತಾತ್ಮ: ಗಡಿಯಲ್ಲಿ ಪಾಕ್ ಉಪಟಳ ಕುರಿತು ಪ್ರಸ್ತಾವಿಸಿದ ರಾಜನಾಥ್ ಸಿಂಗ್, ಆ ದೇಶದ ದುಸ್ಸಾಹಸಕ್ಕೆ ನಮ್ಮ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಪಾಕಿಸ್ಥಾನದ ಎಲ್ಲ ದುರ್ವರ್ತನೆಗಳೂ ಗಡಿಗೇ ಸೀಮಿತವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ ಕಳೆದ ವರ್ಷ ಪಾಕಿಸ್ಥಾನ ಸೇನೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ 46 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದೂ ಸಿಂಗ್ ಹೇಳಿದ್ದಾರೆ. ಇನ್ನು ಪೂರ್ವ ಲಡಾಖ್‌ನಲ್ಲಿ ಚೀನ ಸೇನೆಯನ್ನು ಎದುರಿಸಲು ತುರ್ತು ಸೇನಾ ಸಲಕರಣೆಗಳು, ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದೂ ಸರಕಾರ ತಿಳಿಸಿದೆ.
ರಫೇಲ್ ಸೇರ್ಪಡೆಗೆ 41 ಲಕ್ಷ ವೆಚ್ಚ: ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಂಬಾಲಾ ವಾಯುನೆಲೆಯಲ್ಲಿ ಮೊದಲ 5 ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮಕ್ಕೆ 41 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ 9.18 ಲಕ್ಷ ರೂ. ಜಿಎಸ್‌ಟಿ ಕೂಡ ಸೇರಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಾರ್ಚ್ ನಲ್ಲಿ ಬರಲಿವೆ 17 ರಫೇಲ್
ಮಾರ್ಚ್ ತಿಂಗಳೊಳಗೆ ಭಾರತಕ್ಕೆ ಮತ್ತೆ 17 ರಫೇಲ್ ಯುದ್ಧ ವಿಮಾನಗಳು ಹಸ್ತಾಂತರವಾಗಲಿದ್ದು, ಭಾರತ ಖರೀದಿಸಿರುವ ಎಲ್ಲ ರಫೇಲ್ ಗಳೂ ಏಪ್ರಿಲ್ ವೇಳೆಗೆ ಕೈಸೇರಲಿವೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. 2016ರಲ್ಲಿ ಭಾರತವು 59 ಸಾವಿರ ಕೋಟಿ ರೂ. ವೆಚ್ಚ ದಲ್ಲಿ 35 ರಫೇಲ್ ಜೆಟ್ ಖರೀದಿಗೆ ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈವರೆಗೆ 11 ವಿಮಾನಗಳು ಬಂದಿಳಿದಿದ್ದು, ಮಾರ್ಚ್ ನಲ್ಲಿ 17 ಜೆಟ್ ಗಳು ಹಸ್ತಾಂತರಗೊಳ್ಳಲಿವೆ. ಎಪ್ರಿಲ್ ವೇಳೆಗೆ ಉಳಿದ ವಿಮಾನಗಳೂ ನಮ್ಮ ಕೈಸೇರಲಿವೆ ಎಂದು ರಾಜ್ಯಸಭೆಗೆ ಸಿಂಗ್ ಮಾಹಿತಿ ನೀಡಿದ್ದಾರೆ.