ಹೊಸದಿಲ್ಲಿ : ರಕ್ಷಣಾ ಇಲಾಖೆ ಫ್ರಾನ್ ಜತೆ ರಫೇಲ್ ಫೈಟರ್ ಜೆಟ್ ವ್ಯವಹಾರವನ್ನು ನಡೆಸುತ್ತಿದ್ದಂತೆಯೇ ಪ್ರಧಾನಿ ಕಾರ್ಯಾಲಯ ಕೂಡ ಸಮಾನಂತರ ಮಾತುಕತೆಗಳನ್ನು ಫ್ರಾನ್ಸ್ ಕಂಪೆನಿ ಜತೆ ನಡೆಸುತ್ತಿತ್ತು ಎಂಬ ಮಾಧ್ಯಮ ವರದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಲವಾಗಿ ತಿರಸ್ಕರಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಸಚಿವೆ ಸೀತಾರಾಮನ್ ಅವರು “ಈ ರೀತಿಯ ವರದಿಯು ರಾಜಕೀಯ ಪ್ರೇರಿತವಾಗಿದ್ದು ಇದನ್ನು ಕಾಂಗ್ರೆಸ್ ಅನಗತ್ಯವಾಗಿ ದೊಡ್ಡದು ಮಾಡಿದೆ” ಎಂದು ಆರೋಪಿಸಿದರು.
ಆಗಿನ ರಕ್ಷಣಾ ಸಚಿವ ಮನೋಹರ ಪಾರೀಕರ್ ಅವರು ಎಂಓಡಿ ಟಿಪ್ಪಣಿಗೆ ಉತ್ತರಿಸಿದ್ದಾರೆ. ‘ನೀವು ಸುಮ್ಮನಿರಿ, ಯಾವುದೇ ರೀತಿಯ ಚಿಂತೆ ಬೇಡ; ಎಲ್ಲವೂ ಸರಿ ಹೋಗುತ್ತದೆ’ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ ನೇತೃತ್ವದ ಎನ್‌ಎಸಿ ಈಗ ಏನು ಹೇಳುತ್ತಿದೆ ?’ ಎಂದು ಸಚಿವೆ ಸೀತಾರಾಮನ್ ಪ್ರಶ್ನಿಸಿದರು.
ರಫೇಲ್ ಡೀಲ್ ನಲ್ಲಿ ಪಿಎಂಓ ಹಸ್ತಕ್ಷೇಪ ಮಾಡಿದ್ದಾರೆ ಎಂಬ ವರದಿಯು ಕಪೋಲಕಲ್ಪಿತ ಮತ್ತು ರಾಜಕೀಯ ಪ್ರೇರಿತ ಎಂದ ಸಚಿವೆ ನಿರ್ಮಲಾ ಇದು “ಸತ್ತ ಕುದುರೆಗೆ ಚಾಟಿಯೇಟು ಕೊಟ್ಟಂತಿದೆ’ ಎಂದು ಟೀಕಿಸಿದರು.