ಬೆಂಗಳೂರು: ದೇಶದ ಪ್ರತೀ ವ್ಯಕ್ತಿಯ ಕೋಪ ಮತ್ತು ನಿರಾಶೆಯನ್ನು ನಿವಾರಿಸುವಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ನಮ್ಮ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳುವುದಕ್ಕೆ ನನಗೆ ಪದಗಳು ಸಿಗುತ್ತಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಏರ್ ಶೋಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುಲ್ವಾಮಾ ದಾಳಿಯಲ್ಲಿ ನಮ್ಮ ದೇಶದ ಕೈವಾಡ ಇಲ್ಲ ಎಂದಿರುವ ಇಮ್ರಾನ್ ಖಾನ್ ವಿರುದ್ಧ ಕಿಡಿ ಕಾರಿದರು.
ಮುಂಬಯಿ ದಾಳಿಯ ನಂತರ ಪಾಕ್‌ಗೆ ಈ ಸರ್ಕಾರ ಮಾತ್ರವಲ್ಲ, ಹಿಂದಿನ ಸರ್ಕಾರವೂ ಕಡತಗಳ ಮೇಲೆ ಕಡತ ಮತ್ತು ಸಾಕ್ಷ್ಯಗಳನ್ನು ಕಳುಹಿಸಿದೆ. ಪಾಕ್ ಉಗ್ರರ ವಿರುದ್ಧ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ನಮ್ಮ ಸೇನೆಯ ನೈತಿಕ ಸ್ಥೈರ್ಯ ಕುಸಿದಿಲ್ಲ. ಅವರೆಲ್ಲ ತಮ್ಮ ಕರ್ತವ್ಯ ಮಾಡಲು ಸರ್ವ ಸನ್ನದ್ಧವಾಗಿದ್ದಾರೆ. ದೇಶದ ಜನರ ಪ್ರತಿಕ್ರಿಯೆ , ಅವರಿಗೆಲ್ಲಾ ಇನ್ನಷ್ಟು ಉತ್ತೇಜನ ನೀಡಿದೆ ಎಂದರು.
ಯಾವುದು ಸರಿ ಎನಿಸುತ್ತದೆ ಆ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ಸೇನೆಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪುಲ್ವಾಮಾ ದಂತಹ ದಾಳಿಗಳು ನಡೆಯದಂತೆ ನಾವು ಸರ್ವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.