ಮುಂಬಯಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಬೃಹತ್ ಯುದ್ಧನೌಕೆ ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ಒಂದಿಡೀ ದಿನವನ್ನು ಕಳೆದರು. ಈ ಸಂದರ್ಭದಲ್ಲಿ ಸಿಂಗ್ ಅವರು ಈ ಯುದ್ಧನೌಕೆಯ ಕಾರ್ಯವೈಖರಿಯ ಸ್ಥೂಲ ಪರಿಚಯವನ್ನು ಮಾಡಿಕೊಂಡರು ಮತ್ತು ‘ಬ್ಲ್ಯಾಕ್ ಪ್ಯಾಂಥರ್ಸ್’ ಎಂದೇ ಹೆಸರಾಗಿರುವ ಭಾರತೀಯ ನೌಕಾಪಡೆಯಲ್ಲಿರುವ ವಾಯುದಳ 303 ಯೋಧರೊಂದಿಗೆ ಸಂವಾದವನ್ನೂ ಸಹ ನಡೆಸಿದರು.
ಇದೇ ಸಂದರ್ಭದಲ್ಲಿ ವಿಕ್ರಮಾದಿತ್ಯ ನೌಕೆಯ ಸಾಮರ್ಥ್ಯವನ್ನು ಕಣ್ಣಾರೆ ಕಂಡು ಬೆರಗಾದ ರಕ್ಷಣಾ ಸಚಿವರು ಈ ನೌಕೆಯನ್ನು ‘ಸಿಕಂದರ್ ಆಫ್ ಸಮುಂದರ್’ (ಸಾಗರದ ಅಧಿಪತಿ) ಎಂದು ಕೊಂಡಾಡಿದರು.
ಈ ನಡುವೆ ಸಚಿವ ರಾಜನಾಥ್ ಸಿಂಗ್ ಅವರು ಐ.ಎನ್.ಎಸ್. ವಿಕ್ರಮಾದಿತ್ಯ ನೌಕೆಯಲ್ಲಿ ಮಧ್ಯಮ ಗಾತ್ರದ ಮೆಷಿನ್ ಗನ್ ಅನ್ನು ಚಾಲನೆಗೊಳಿಸಿದ್ದು ವಿಶೇಷವಾಗಿತ್ತು. ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಧರಿಸಿಕೊಂಡು ಸಚಿವ ಸಿಂಗ್ ಅವರು ಈ ಯುದ್ಧ ನೌಕೆಯ ಸೇನಾ ಸಿಬ್ಬಂದಿಗಳ ಸಹಾಯದೊಂದಿಗೆ ಹಲವಾರು ಸುತ್ತು ಅಣಕು ಫೈರಿಂಗ್ ನಡೆಸುವ ವಿಡಿಯೋ ಒಂದನ್ನು ಎ.ಎನ್.ಐ. ಸುದ್ದಿಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ರಾಜನಾಥ್ ಸಿಂಗ್ ಅವರು ಇತ್ತೀಚೆಗಷ್ಟೇ ಸ್ವದೇಶಿ ತೇಜಸ್ಸ್ ಯುದ್ಧ ವಿಮಾನದಲ್ಲಿ ಯಶಸ್ವೀ ಹಾರಾಟವನ್ನು ನಡೆಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.