Advertisement
ಹಾಲಿ ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಮತ್ತು 2019ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತು ಈಚೆಗೆ ಬಿಜೆಪಿ ಸೇರಿರುವ ಬಿ.ವಿ.ನಾಯಕ ಮತ್ತೂಮ್ಮೆ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಹೊರತಾಗಿಯೂ ಉಭಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಿಜೆಪಿಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಸಿಗುವುದು ಸಂಶಯ. ಮತ್ತೂಂದೆಡೆ ಬಿ.ವಿ.ನಾಯಕ ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಾಗಿ ಶೋಧ ನಡೆಸಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರ ರಾಯಚೂರು-ಯಾದಗಿರಿ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಎರಡೂ ಜಿಲ್ಲೆಗಳಲ್ಲಿ ಪ್ರಭಾವ ಉಳಿಸಿಕೊಂಡ ನಾಯಕರು ಕಡಿಮೆ. ಹೀಗಾಗಿ ಮಾಜಿಗಳು, ಪರಾಜಿತ ಅಭ್ಯರ್ಥಿಗಳ ಮೇಲೆಯೇ ಒಲವು ಹೆಚ್ಚಾಗಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಕಣದಿಂದ ದೂರ ಉಳಿಯುವುದು ದಟ್ಟವಾಗಿದೆ.
ಕಾಂಗ್ರೆಸ್‌ನ ಕೆಲವು ಮುಖಂಡರು ಹಾಲಿ ಸಂಸದರನ್ನೇ ತಮ್ಮ ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಮತ್ತೂಂದೆಡೆ ಬಿ.ವಿ.ನಾಯಕ ಬಿಜೆಪಿಗೆ ಬಂದರೂ ಇನ್ನೂ ಕಾಂಗ್ರೆಸ್ ಮೇಲೆ ಒಲವು ಉಳಿಸಿಕೊಂಡಿದ್ದು, ಟಿಕೆಟ್ ನೀಡುವ ಭರವಸೆ ಕೊಟ್ಟರೆ ಮರಳಿ ತವರು ಪಕ್ಷಕ್ಕೆ ಬರಬಹುದು ಎನ್ನಲಾಗುತ್ತಿದೆ. ಆದರೆ, ಈ ಎರಡೂ ಬೆಳವಣಿಗೆಗಳಿಗೆ ಕಾಂಗ್ರೆಸ್‌ನ ಎರಡು ಗುಂಪುಗಳ ನಡುವೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ರಾಜಾ ರಾಯಪ್ಪ ನಾಯಕರ ಹೆಸರು ಮುನ್ನೆಲೆಗೆ ಬರುತ್ತಿದೆ. ಅದರ ಜತೆಗೆ ಜಾರಕಿಹೊಳಿ ಕುಟುಂಬದ ಸಂಬಂಧಿ ರವಿ ಪಾಟೀಲ್, ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಈ ಚುನಾವಣೆ ಕಾಂಗ್ರೆಸ್ ಪಾಲಿಗೆ ಬಹಳ ಮುಖ್ಯವಾಗಿರುವ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗದ ಕ್ಷೇತ್ರಗಳ ಹೆಚ್ಚು ನಿರೀಕ್ಷೆ ಹೊಂದಿದೆ. ಇದೇ ಕಾರಣಕ್ಕೆ ಪಕ್ಷದ ನಾಯಕರೆಲ್ಲ ಒಗ್ಗೂಡಿ ಸೂಕ್ತ ಆಕಾಂಕ್ಷಿಗಳ ಹೆಸರು ಹೈಕಮಾಂಡ್‌ಗೆ ಸೂಚಿಸುವಂತೆ ತಿಳಿಸಿರುವುದು ಸ್ಥಳೀಯ ನಾಯಕರ ಮೇಲೆ ಒತ್ತಡ ಹೆಚ್ಚಾಗಿದೆ.
Related Articles
ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಶಮನಗೊಳ್ಳುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಸಚಿವ ಎನ್.ಎಸ್.ಭೋಸರಾಜು ಮತ್ತು ಶಾಸಕ ಹಂಪನಗೌಡ ಬಾದರ್ಲಿ, ದದ್ದಲ್ ಬಸನಗೌಡ ಸಹಿತ ಇನ್ನಿತರ ಮುಖಂಡರ ಎರಡು ಬಣಗಳಾಗಿದ್ದು, ಪಕ್ಷಕ್ಕೆ ಮುಳ್ಳಾಗಿ ಪರಿಣಮಿಸಿದೆ. ಈಚೆಗೆ ಅಭ್ಯರ್ಥಿ ಆಯ್ಕೆಗೆ ನಡೆದ ಸಭೆಗೆ ಒಂದು ಬಣದ ಶಾಸಕರು ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಭೋಸರಾಜು ನಡೆಸುವ ತಂತ್ರಗಾರಿಕೆಗಳನ್ನು ವಿರೋಧಿ ಬಣ ಒಪ್ಪದೆ ಒಮ್ಮತ ಮೂಡುತ್ತಿಲ್ಲ. ಇದು ಕೂಡ ಪಕ್ಷದ ಅಭ್ಯರ್ಥಿ ಆಯ್ಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
Advertisement
ಶ್ರೀರಾಮುಲು ಬರುತ್ತಾರಾ?ಬಿಜೆಪಿಯಲ್ಲಿಯೂ ಆಕಾಂಕ್ಷಿ ಗಳ ಪಟ್ಟಿ ದೊಡ್ಡದಾಗುತ್ತಿದೆ. ಹಾಲಿ ಸಂಸದರ ಜತೆಗೆ ಕಳೆದ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳಾದ ಬಿ.ವಿ.ನಾಯಕ, ಕೆ.ಶಿವನಗೌಡ ನಾಯಕ, ರಾಜುಗೌಡರ ಹೆಸರುಗಳು ಚಾಲ್ತಿಯಲ್ಲಿವೆ. ಅದರ ಜತೆಗೆ ಮಾಜಿ ಸಚಿವ ಬಳ್ಳಾರಿಯ ಬಿ.ಶ್ರೀರಾಮುಲು ಹೆಸರು ಕೂಡ ಕೇಳಿಬರುತ್ತಿದೆ. ಪರಿಶಿಷ್ಟ ವರ್ಗಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯದ ಜನ ಹೆಚ್ಚಾಗಿದ್ದಾರೆ. ಇದೇ ಕಾರಣಕ್ಕೆ ರಾಮುಲು ರಾಯಚೂರಿಗೆ ಬಂದರೂ ಅಚ್ಚರಿ ಇಲ್ಲ. ಇನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಮತ ಪಡೆದರೂ ಲೋಕಸಭೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಈ ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಗೆ ಜೆಡಿಎಸ್ ಬಲ ಸಿಗಲಿದೆ. ಸಿದ್ದಯ್ಯಸ್ವಾಮಿ ಕುಕನೂರು