ಶುಕ್ರವಾರ ಟಿಡಿಪಿ, ಕಾಂಗ್ರೆಸ್, ಎನ್‌ಸಿಪಿ ನೇತೃತ್ವದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ನಿರೀಕ್ಷೆಯಂತೆಯೇ ಸೋಲಾಗಿದೆ. ಅವಿಶ್ವಾಸದ ವಿರುದ್ಧ 325 ಮತ್ತು ಪರವಾಗಿ 126 ಮತಗಳು ಬಿದ್ದಿದ್ದು, ಈ ಮೂಲಕ ಯಾರ ಬಲ ಎಷ್ಟು ಎನ್ನುವುದು ದೇಶಕ್ಕೆ ಗೊತ್ತಾಯಿತು. ಹಾಗೆ ನೋಡಿದರೆ ಪೂರ್ಣ ಬಹುಮತವಿರುವ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇ ದುಸ್ಸಾಹಸ. ಏನೇ ತಿಪ್ಪರಲಾಗ ಹಾಕಿದರೂ ಗೊತ್ತುವಳಿಯನ್ನು ಗೆಲ್ಲಿಸುವಷ್ಟು ಬಹುಮತ ಇಲ್ಲ ಎನ್ನುವುದು ವಿಪಕ್ಷಗಳಿಗೆ ಗೊತ್ತಿತ್ತು. ಇದರ ಹೊರತಾಗಿಯೂ ಅವಿಶ್ವಾಸ ಮಂಡಿಸಿರುವುದರ ಹಿಂದಿನ ಉದ್ದೇಶ ಏನು ಎನ್ನುವುದು ಪ್ರಸ್ತುತ ಚರ್ಚೆಗೀಡಾಗಿರುವ ವಿಷಯ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ವೇದಿಕೆ ಯೊಂದನ್ನು ಸಿದ್ಧಮಾಡಿಕೊಳ್ಳುವ ಉದ್ದೇಶದಿಂದ ವಿರೋಧ ಪಕ್ಷಗಳು ಈ ಸಾಹಸಕ್ಕಿಳಿದಿವೆ ಎನ್ನುವುದು ಈ ಪೈಕಿ ಹೆಚ್ಚು ಚರ್ಚೆಯಲ್ಲಿರುವ ಅಂಶ. ಒಂದರ್ಥದಲ್ಲಿ ಇದು ನಿಜವೂ ಹೌದು. ಅವಿಶ್ವಾಸ ಮಂಡಿಸಿದ್ದು ಟಿಡಿಪಿ ಯಾಗಿದ್ದರೂ ಅದರ ನೇತೃತ್ವ ವಹಿಸಿದ್ದು ಕಾಂಗ್ರೆಸ್. ರಾಹುಲ್ ಗಾಂಧಿ ಯನ್ನು “ರೀಲಾಂಚ್’ ಮಾಡಲು ಅವಿಶ್ವಾಸ ಗೊತ್ತುವಳಿಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿತು. ಸದ್ಯಕ್ಕೆ ಕಾಂಗ್ರೆಸ್‌ಗೆ ಆಗಿರುವ ಲಾಭ ಇದೊಂದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷನ ಹೊಸ ಪಾತ್ರದಲ್ಲಿ ರಾಹುಲ್ ಗಾಂಧಿಯ ರಾಜಕೀಯ ಪ್ರಬುದ್ಧತೆ ತುಸು ಸುಧಾರಿಸಿದಂತೆ ಕಂಡು ಬಂದಿದೆ.
ಅವಿಶ್ವಾಸ ಗೊತ್ತುವಳಿಯ ವಿರುದ್ಧ ಚರ್ಚೆ ಆರಂಭಿಸಿದ ಅವರು ವ್ಯವಸ್ಥಿವಾಗಿಯೇ ಸರಕಾರದ ವಿರುದ್ಧ ದಾಳಿ ಮಾಡಿದರು. ಪ್ರಧಾನಿಯನ್ನೇ ಗುರಿ ಮಾಡಿಕೊಂಡು ಅವರ ದಾಳಿ ಮುಂದುವರಿಯಿತು ಹಾಗೂ ಅವರ ಮಾತೂ ಸಾಕಷ್ಟು ಹರಿತವಾಗಿತ್ತು. ಸಾಕಷ್ಟು ಸಿದ್ಧತೆ ಮಾಡಿಕೊಂಡು ಅವರು ಬಂದಿದ್ದರು ಎನ್ನುವುದು ಸ್ಪಷ್ಟ. ಆದರೆ ಅವರು ಹೇಳಿದ್ದು ರಾಫೆಲ್ ಡೀಲ್, ನಿರುದ್ಯೋಗ, ಬೆಲೆಯೇರಿಕೆ ಇವೇ ಮೊದಲಾದ ಹಳೇ ವಿಚಾರಗಳನ್ನೇ ಹೊರತು ಹೊಸದು ಯಾವುದೂ ಇರಲಿಲ್ಲ. ಇದನ್ನು ಅವರು ಈಗಾಗಲೇ ಸಾರ್ವಜನಿಕ ಸಭೆಯಲ್ಲಿ ಸಾಕಷ್ಟು ಸಲ ಹೇಳಿಯಾಗಿದೆ. ಯಾವ ಆರೋಪಗಳಿಗೂ ಅವರ ಬಳಿ ಸಾಕಷ್ಟು ದಾಖಲೆಗಳು ಇರಲಿಲ್ಲ. ಇದೀಗ ಸದನಕ್ಕೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಅವರು ಸರಕಾರದಿಂದ ಹಕ್ಕುಚ್ಯುತಿ ಎದುರಿಸುವಂತಾಗಿದೆ.
ಆದರೆ ರಾಹುಲ್ ಗಾಂಧಿಯ ಭಾಷಣಕ್ಕಿಂತಲೂ ಭಾಷಣ ಮುಗಿಸಿದ ಬಳಿಕ ಅವರು ಮೋದಿಯನ್ನು ಅಪ್ಪಿಕೊಂಡದ್ದು ಮತ್ತು ಅನಂತರ ತನ್ನ ಪಕ್ಷದವರನ್ನು ನೋಡಿ ಕಣ್ಣು ಮಿಟುಕಿಸಿದ್ದು ದೇಶಾದ್ಯಂತ ಸುದ್ದಿಯಾಗಿದೆ. ಇದು ಅಪ್ರಚೋದಿತ ನಡೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರೂ ಇದನ್ನು ನಂಬುವುದು ಕಷ್ಟ. ಈ ಅಪ್ಪುಗೆಯಿಂದ ರಾಹುಲ್ ಯಾವ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ ನ್ನುವುದು ಮುಖ್ಯ ಪ್ರಶ್ನೆ. ಮೋದಿ ವಿದೇಶಗಳ ಪ್ರಧಾನಿ ಅಧ್ಯಕ್ಷರು ಬಂದಾಗ ಅವರನ್ನು ಆಲಂಗಿಸಿ ಸ್ವಾಗತಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಮೋದಿಯ ಈ ವರ್ತನೆಯನ್ನು ಅವಕಾಶ ಸಿಕ್ಕಿದಾಗಲೆಲ್ಲ ಲೇವಡಿ ಮಾಡುತ್ತಿತ್ತು. ಪಾಕಿಸ್ತಾನದ ಲಷ್ಕರ್ ಉಗ್ರ ಹಫೀಜ್ ಸಯೀದ್‌ನನ್ನು ಗೃಹ ಬಂಧನದಿಂದ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ರಾಹುಲ್ ಗಾಂಧಿಯೇ ಮೋದಿಯ ಅಪ್ಪುಗೆ ರಾಜನೀತಿಯನ್ನು ಲೇವಡಿ ಮಾಡಿದ್ದರು. ಇದೀಗ ಅವರೇ ಈ ರಾಜನೀತಿಯನ್ನು ಅನುಸರಿಸಿದ್ದು ಪ್ರಶ್ನಾರ್ಹ.
ಎದುರಾಳಿಯನ್ನು ಟೀಕಿಸಿದ ಬಳಿಕ ವೈಯಕ್ತಿಕವಾಗಿ ನಿಮ್ಮ ಮೇಲೆ ಯಾವುದೇ ಸಿಟ್ಟು ಇಲ್ಲ ಎಂದು ತಿಳಿಸಲು ಅಪ್ಪಿಕೊಳ್ಳುವುದು ಒಂದು ಉತ್ತಮ ನಡೆ ಎಂದಿಟ್ಟುಕೊಳ್ಳಬಹುದು. ಆದರೆ ಅನಂತರ ತನ್ನ ಪಕ್ಷದವರತ್ತ ನೋಡಿ ಕಣ್ಣುಮಿಟುಕಿಸಿದ್ದು ಮಾತ್ರ ಸಂಸದೀಯ ನಡಾವಳಿಗೆ ಮಾಡಿದ ಅಪಚಾರ ಮಾತ್ರವಲ್ಲದೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿರುವಂತೆ ಪ್ರಧಾನಿ ಹುದ್ದೆಗೆ ತೋರಿಸಿರುವ ಅಗೌರವ. ರಾಷ್ಟ್ರೀಯ ಪಕ್ಷದ ಅಧ್ಯಕ್ಷನಿಗೆ ಸೂಕ್ತವಾದ ನಡವಳಿಕೆ ಇದಲ್ಲ.
ಏನೇ ಆದರೂ ಅವಿಶ್ವಾಸ ಗೊತ್ತುವಳಿಯಿಂದ ಸಂಸತ್ತಿನಲ್ಲಿ ಬಹಳ ಸಮಯದ ಬಳಿಕ ಪೂರ್ಣ ಪ್ರಮಾಣದ ಚರ್ಚೆಯೊಂದನ್ನು ನೋಡುವ ಅವಕಾಶ ಸಿಕ್ಕಿದೆ. ಬಜೆಟ್ ಅಧಿವೇಶನ ಪೂರ್ತಿ ಯಾವುದೇ ಚರ್ಚೆ ನಡೆಯದೆ ವ್ಯರ್ಥವಾಗಿತ್ತು. ಮುಂಗಾರು ಅಧಿವೇಶನಕ್ಕೂ ಇದೇ ಗತಿಯಾಗಲಿಕ್ಕಿಲ್ಲ ಎಂಬ ವಿಶ್ವಾಸ ಅವಿಶ್ವಾಸ ಗೊತ್ತುವಳಿಯಿಂದ ಉಂಟಾಗಿದೆ. ಆರೋಗ್ಯಪೂರ್ಣ ಚರ್ಚೆಯೇ ಪ್ರಜಾತಂತ್ರದ ಜೀವಾಳ. ಈ ಅಧಿವೇಶನದಲ್ಲಾದರೂ ಅಂಥ ಚರ್ಚೆ ನಡೆಯಲಿ.