Advertisement

ಸೋಲು ಪಾಠವಾಗಲಿ

11:29 PM May 26, 2019 | sudhir |

ಪ್ರತಿ ಚುನಾವಣೆಯ ರಾಜಕೀಯ ಪಕ್ಷಗಳಿಗೆ ಒಂದೊಂದು ಪಾಠವನ್ನು ಕಲಿಸುತ್ತದೆ. ಈ ಪಾಠವನ್ನು ಕಲಿತವರು ಮುಂದಿನ ಚುನಾವಣೆಗಾಗುವಾಗ ಹೊಸ ಹುರುಪಿನಿಂದ ತಯಾರಾಗುತ್ತಾರೆ. ಕಲಿಯದವರು ಮತ್ತಷ್ಟು ಕುಸಿಯುತ್ತಾ ಹೋಗುತ್ತಾರೆ. 2014ರ ಚುನಾವಣೆಯಲ್ಲಿ ಬರೀ 44 ಸ್ಥಾನಗಳಿಗೆ ಸೀಮಿತಗೊಂಡಿದ್ದ ಕಾಂಗ್ರೆಸ್‌ ಈ ಸೋಲಿನಿಂದ ಏನಾದರೂ ಪಾಠವನ್ನು ಕಲಿತಿದ್ದರೆ 2019ರಲ್ಲಿ ಮರಳಿ ಅದೇ ಸ್ಥಿತಿಗೆ ಬರುವ ಅವಮಾನಕಾರಿ ಸನ್ನಿವೇಶವನ್ನು ತಪ್ಪಿಸಿಕೊಳ್ಳಬಹುದಿತ್ತು. ಬಹುಮತಗಳಿಸಲು ಸಾಧ್ಯವಾಗದಿದ್ದರೂ ಕನಿಷ್ಠ 100 ಪ್ಲಸ್‌ ಸ್ಥಾನಗಳನ್ನು ಗೆದ್ದು ವಿರೋಧಪಕ್ಷವಾಗಿ ಪರಿಣಾಮಕಾರಿ ನಿರ್ವಹಣೆ ನೀಡಬಹುದಿತ್ತು. ಸತತ ಎರಡನೇ ಅವಧಿಗೂ ವಿರೋಧ ಪಕ್ಷವಾಗುವ ಅರ್ಹತೆಯನ್ನೂ ಪಡೆಯದಷ್ಟು ಹೀನಾಯ ಸ್ಥಿತಿಗೆ ತಲುಪಲು ಕಾಂಗ್ರೆಸಿನ ಸ್ವಯಂಕೃತ ಅಪರಾಧಗಳು ಕಾರಣ.

Advertisement

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಈ ಮಾತನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಸೋಲಿನ ಹೊಣೆಯನ್ನು ಅವರೇ ಹೊರಬೇಕಾಗಿತ್ತು. ಆ ಕೆಲಸವನ್ನು ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ ಕೂಡಾ. ತನ್ನ ಆಡಳಿತವಿರುವ ರಾಜ್ಯಗಳಲ್ಲೂ ಕಾಂಗ್ರೆಸ್‌ ಹೀನಾಯ ಪ್ರದರ್ಶನ ನೀಡಿದೆ. ಇದಕ್ಕೆ ಅವರು ಪಕ್ಷದ ಕೆಲವು ಹಿರಿಯ ನಾಯಕÃನ್ನು ಹೊಣೆ ಮಾಡಿದ್ದಾರೆ. ಅದರಲ್ಲೂ ಕಾಂಗ್ರೆಸ್‌ ಮುಖ್ಯಮಂತ್ರಿಗಳಾದ ಮಧ್ಯ ಪ್ರದೇಶದ ಕಮಲ್‌ನಾಥ್‌ ಮತ್ತು ರಾಜಸ್ಥಾನ ಅಶೋಕ್‌ ಗೆಹೊÉàಟ್‌ ವಿರುದ್ಧ ಹರಿಹಾಯ್ದಿದ್ದಾರೆ. ಹಿರಿಯ ನಾಯಕ ಚಿದಂಬರಂ ಅವರೂ ರಾಹುಲ್‌ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್‌ ನೀಡಲು ಬಲವಂತಪಡಿಸಿದರು. ತನಗೆ ಇಷ್ಟವಿಲ್ಲದಿದ್ದರೂ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಟಿಕೆಟ್‌ ನೀಡಬೇಕಾಯಿತು ಎನ್ನುವುದು ರಾಹುಲ್‌ ಆರೋಪ.

ಕಾಂಗ್ರೆಸ್‌ ಸೋಲಿಗೆ ಅಸಮರ್ಪಕ ಟಿಕೆಟ್‌ ಹಂಚಿಕೆಯೂ ಒಂದು ಕಾರಣ ಎನ್ನುವುದು ನಿಜ. ಆದರೆ ಟಿಕೆಟ್‌ ಹಂಚುವ ಪರಮಾಧಿಕಾರ ಇದ್ದದ್ದು ರಾಹುಲ್‌ ಗಾಂಧಿಯ ಕೈಯಲ್ಲಿಯೇ. ಅವರಿಗೆ ಇಂಥ ಒತ್ತಾಯಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸುವ ಸಂಪೂರ್ಣ ಅಧಿಕಾರವಿತ್ತು. ಯಾವ ಮುಲಾಜಿಗೆ ಕಟ್ಟುಬಿದ್ದು ಮಕ್ಕಳಿಗೆ, ಮೊಮ್ಮಕ್ಕಳಿಗೆಲ್ಲ ಟಿಕೆಟ್‌ ನೀಡಲಾಯಿತು ಎಂಬುದನ್ನು ಅವರೆ ತಿಳಿಸಬೇಕು. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇರುವ ಮುಖ್ಯ ವ್ಯತ್ಯಾಸವೇ ಇದು. ಬಿಜೆಪಿಯ ಅಧ್ಯಕ್ಷ ಯಾವ ಒತ್ತಾಯ, ಬಲವಂತ, ಲಾಬಿ, ಕೋರಿಕೆಗೆ ಮಣಿಯುವುದಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯ ಗೆಲುವಿನ ಸಾಧ್ಯತೆಯನ್ನು ತಾನೇ ಲೆಕ್ಕ ಹಾಕಿ ಟಿಕೆಟ್‌ ನೀಡುತ್ತಾರೆ. ಇದಕ್ಕೊಂದು ಉದಾಹರಣೆ ಬೆಂಗಳೂರು ದಕ್ಷಿಣದ ಅಭ್ಯಥಿ ತೇಜಸ್ವಿ ಸೂರ್ಯ ಅವರ ಆಯ್ಕೆ.
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ನಾಯಕ ಅನಂತಕುಮಾರ್‌ ಕೆಲ ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಅವರ ಪತ್ನಿ ತೇಜಸ್ವಿನಿಯವರಿಗೆ ಟಿಕೆಟ್‌ ಸಿಗುವ ನಿರೀಕ್ಷೆಯಿತ್ತು. ತೇಜಸ್ವಿನಿ ಕೂಡಾ ಸಾಕಷ್ಟು “ಗ್ರೌಂಡ್‌ವರ್ಕ್‌’ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಅಭ್ಯರ್ಥಿ ತೇಜಸ್ವಿ ಸೂರ್ಯ ಎಂದು ಘೋಷಣೆಯಾದಾಗ ಬಿಜೆಪಿಯವರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ಅಚ್ಚರಿಯಾಗಿತ್ತು. ಬೇರೆ ಯಾವುದೇ ಪಕ್ಷದ ಅಧ್ಯಕ್ಷನಾಗಿದ್ದರೂ ಅನುಕಂಪದ ಮತಗಳ ಲೆಕ್ಕಾಚಾರ ಹಾಕಿ ಟಿಕೆಟ್‌ ನೀಡುತ್ತಿದ್ದ. ಇದೇ ಮಾದರಿಯ ಇನ್ನೊಂದು ಅಚ್ಚರಿಯ ಆಯ್ಕೆ ಭೋಪಾಲದ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಅವರದ್ದು. ಸಾಧ್ವಿಗೆ ಟಿಕೆಟ್‌ ನೀಡಿದ್ದು ನೈತಿಕವಾಗಿಯೇ ಸರಿಯೇ ತಪ್ಪೇ ಎನ್ನೋದು ಬೇರೆ ವಿಚಾರ. ಆದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಇಂಥದ್ದೊಂದು ದಿಟ್ಟತನವನ್ನು ತೋರಿಸುವ ಛಾತಿ ಇರುವುದರಿಂದಲೇ ಇಂದು ಬಿಜೆಪಿ ಉಳಿದ ಪಕ್ಷಗಳಿಗಿಂತ ಭಿನ್ನವೆಂದು ಗುರುತಿಸಿಕೊಳ್ಳುತ್ತಿದೆ.

ಕಾಂಗ್ರೆಸ್‌ನ ಉನ್ನತ ನಾಯಕತ್ವದಲ್ಲಿ ಇಂಥ ಛಾತಿ ಇಲ್ಲ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಈಗಲೂ ಪಕ್ಷವನ್ನು ಅದೇ ಕೆಲವು ಹಿರಿತಲೆಗಳು ನಿಯಂತ್ರಿಸುತ್ತಿವೆ. ಹಾಗೇ ನೋಡುವುದಾದರೆ ಬಹುತೇಕ ಕೆ‌Òàತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್‌ ಎಡವಿತ್ತು. ಹೀಗಾಗಿಯೇ ಬಿಜೆಪಿಗೆ ಕಾಂಗ್ರೆಸ್‌ಗಿಂತಲೂ ಪ್ರಾದೇಶಿಕ ಪಕ್ಷಗಳು ಹೆಚ್ಚು ಸವಾಲೊಡ್ಡಿದ್ದವು. ಸಾಕಷ್ಟು ಮೊದಲೇ ಚುನಾವಣೆ ತಯಾರಿ ಪ್ರಾರಂಭಿಸಿಯೂ ಸರಿಯಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಏಕೆ ಸಾಧ್ಯವಾಗಿಲ್ಲ ಎಂಬುದರ ಕುರಿತು ಪಕ್ಷ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಗೆಲುವಿಗೆ ಸಾವಿರ ಅಪ್ಪಂದಿರು, ಸೋಲು ಅನಾಥ ಎಂಬ ಮಾತು ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳಿಗೂ ಅನ್ವಯವಾಗುಂಥದ್ದು. ಸೋಲಿನಿಂದ ಕುಗ್ಗದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಅವೇ ತಪ್ಪುಗಳು ಪುನರಾವರ್ತಿಸದಂತೆ ನೋಡಿಕೊಳ್ಳುವುದು ಬುದ್ಧಿವಂತಿಕೆ. ಈ ಬುದ್ಧಿವಂತಿಕೆಯನ್ನು ಈಗ ಕಾಂಗ್ರೆಸ್‌ ತೋರಿಸಬೇಕಾಗಿದೆ. ಏಕೆಂದರೆ ಪ್ರಜಾತಂತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಆಡಳಿತ ಪಕ್ಷದಷ್ಟೇ ಪ್ರಬಲವಾಗಿರುವ ಪ್ರತಿಪಕ್ಷದ ಅಗತ್ಯವೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next