Advertisement

ಪಕ್ಷಾಂತರಿಗಳನ್ನು ರಾಜ್ಯದ ಜನತೆ ಸೋಲಿಸಿ ತಕ್ಕ ಪಾಠ ಕಲಿಸುತ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯ

10:03 AM Nov 21, 2019 | Mithun PG |

ಮೈಸೂರು: ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಅಷ್ಟು ಮಂದಿ ಅನರ್ಹರು ಸೋಲುತ್ತಾರೆ. ಆ ಮೂಲಕ ರಾಜ್ಯದ ಜನತೆ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.

Advertisement

ಇಂದಿನಿಂದ ಉಪ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದು, ಕಾಂಗ್ರೆಸ್  15 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ.12 ಕ್ಷೇತ್ರಗಳಲ್ಲಿ ನಮ್ಮ ಪಕ್ಷದವರೇ ಇದ್ದರು. ಅವರು ಪಕ್ಷಕ್ಕೆ ದ್ರೋಹ ಮಾಡಿ ಹೊರ ಹೋಗಿದ್ದಾರೆ.  ಇತ್ತೀಚೆಗೆ ನಡೆದ ಮಹಾರಾಷ್ಟ್ರ ಹರಿಯಾಣದ ಚುನಾವಣೆಯಲ್ಲಿ  ಪಕ್ಷಾಂತರಿಗಳಿಗೆ ಅಲ್ಲಿನ ಜನ ತಕ್ಕ ಪಾಠ ಕಲಿಸಿದ್ದಾರೆ. ಇಲ್ಲೂ ಕೂಡ ಪಕ್ಷಾಂತರ ಸಹಿಸುವುದಿಲ್ಲ. ಪಕ್ಷಾಂತರಿಗಳನ್ನು ಜನರೇ  ಸೋಲಿಸುತ್ತಾರೆ ಎಂದರು.

ನಮ್ಮ ಪಕ್ಷಕ್ಕೆ ದ್ರೋಹ ಬಗೆದವರು ಅನರ್ಹ ಶಾಸಕರೆಂಬ ಹಣೆಪಟ್ಟಿ ಹೊತ್ತಿದ್ದಾರೆ. ಅವರು ಅನರ್ಹರೆಂದು ಸುಪ್ರೀಂಕೋರ್ಟ್  ಕೂಡ ಹೇಳಿದೆ.  ಅಂದಿನ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ ಎಂದರು.

ಉಪಚುನಾವಣೆಯಲ್ಲಿ ಜೆಡಿಎಸ್ ಸೋಲುವ ಕಡೆ ಕಾಂಗ್ರೆಸ್‌ಗೆ ಬೆಂಬಲ ನೀಡಲಾಗುವುದೆಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಉದ್ದೇಶ ಅನರ್ಹರು ಸೋಲಬೇಕು. ಸಮ್ಮಿಶ್ರ ಸರ್ಕಾರ ಬೀಳಲು ಕಾರಣರಾದ ಅವರು ಸೋಲಬೇಕು. ಈ ಮೂಲಕ ರಾಜ್ಯಾದ್ಯಂತ ಒಂದು ಸ್ಪಷ್ಟ ಸಂದೇಶ ರವಾನೆಯಾಗಬೇಕು. ಈ ವಿಚಾರವಾಗಿ ಕಾಂಗ್ರೆಸ್ ಜೆಡಿಎಸ್ ಇಬ್ಬರ ಉದ್ದೇಶ ಒಂದೇ ಆಗಿದೆ. ಆದರೆ ಅವರ ದಾರಿ ನಮ್ಮ ದಾರಿ ಬೇರೆ ಬೇರೆಯಾಗಿದೆ ಎಂದು ತಿಳಿಸಿದರು.

ಎಲ್ಲರಿಗೂ ಒಂದು ಸಂಸ್ಕೃತಿ ಇರಬೇಕು. ಬಿಜೆಪಿಯ ಯಾವ ನಾಯಕರಿಗೂ ಒಳ್ಳೆಯ ಸಂಸ್ಕೃತಿಯಿಲ್ಲ. ಅವರದು ಫ್ಯಾಸಿಸ್ಟ್ ಪಕ್ಷ. ಅವರೆಂದೂ ನೈಜ  ಮಾತುಗಳನ್ನು ಆಡುವುದಿಲ್ಲ. ಬರೀ ಸುಳ್ಳನ್ನೇ ಪ್ರಚಾರ ಮಾಡೋದು ಅವರ ಕೆಲಸವಾಗಿದೆ. ಇದು ಹಿಟ್ಲರ್ ನ ಮನಸ್ಥಿತಿಯಾಗಿದೆ ಎಂದು ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ವಿರುದ್ದ ಹೇಳಿಕೆ ನೀಡಿರುವ ವಿಚಾರವಾಗಿ ಹರಿಹಾಯ್ದರು.

Advertisement

ಶ್ರೀರಾಮುಲು ವೆರಿ ವೆರಿ ವೆರಿ ಪಾಪ್ಯಲರ್ ಲೀಡರ್, ನಾನು ಅವರಷ್ಟು ಪಾಪ್ಯಲರ್ ಅಲ್ಲ. ಅವರು ಯಾರ ಮೇಲಾದರೂ ತೊಡೆ ತಟ್ಟುತ್ತಾರೆ, ನಮಗೆ ಆ ರೀತಿ ತೊಡೆ ತಟ್ಟಲು ಸಾಧ್ಯವಿಲ್ಲ ಎಂದು ಸಚಿವ ಶ್ರೀರಾಮುಲು ಹಾಕಿರುವ ಸವಾಲು  ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಉಪಚುನಾವಣೆಯ ಭರಾಟೆಯಲ್ಲಿ ರಾಜ್ಯ ಸರ್ಕಾರ ನೆರೆ ಸಂತ್ರಸ್ಥರನ್ನು ಮರೆತಿದೆ. ರಾಜ್ಯದ ಜನ ಬಹಳ ಸಂಕಷ್ಟದಲ್ಲಿದ್ದಾರೆ. ಯಾವ ಜಿಲ್ಲಾ ಮಂತ್ರಿಗಳು ಕೂಡ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇಲ್ಲ, ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇಲ್ಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರದಿಂದ ಹಣ ತರುವಲ್ಲಿ ವಿಫಲರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಕಡೆ ತಿರುಗಿಯೂ ನೋಡುತ್ತಿಲ್ಲ. ಇವರು ಜನ ವಿರೋಧಿ ಪ್ರಧಾನಿಯಾಗಿದ್ದಾರೆ. ಬಿಜೆಪಿಯವರ ಟಾರ್ಗೆಟ್ ನಾನೇ, ಜೆಡಿಎಸ್ ನವರ ಟಾರ್ಗೆಟ್ ನಾನೇ, ಅನರ್ಹರ ಟಾರ್ಗೆಟ್ ಕೂಡ ನಾನೇ ಆಗಿದ್ದೇನೆ. ಅವರಿಗೆಲ್ಲಾ ನನ್ನ ಮೇಲೆ ಭಯ ಇರಬೇಕು ಅನಿಸುತ್ತಿದೆ. ಅವರೆಲ್ಲಾ ತುಂಬಾ ಹತಾಶರಾಗಿದ್ದಾರೆ. ಹಾಗಾಗಿ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

ನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಾಗಿಲ್ಲ. ಕಾಂಗ್ರೆಸ್ ಪಕ್ಷ ಎಂದಿಗೂ, ಯಾರನ್ನೂ ಏಕಾಂಗಿ ಮಾಡುವುದಿಲ್ಲ. ಯಡಿಯೂರಪ್ಪನವರಿಗೆ ನಾನು ಏಕಾಂಗಿಯಾಗಬೇಕು ಅಂತಾ ಅನಿಸಿರಬಹುದು. ಆದರೆ ಅವರ ಆಸೆ ಎಂದಿಗೂ ಈಡೇರುವುದಿಲ್ಲಎಂದು  ಮೈಸೂರಿನಲ್ಲಿ ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳೀದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next