Advertisement

ಸೋಲಿನ ಹೊಣೆಗಾರಿಕೆ: ದೋಸ್ತಿಗಳ ಕೆಸರೆರಚಾಟ

04:10 PM Jun 06, 2019 | Suhan S |

ಮೈಸೂರು: ಲೋಕಸಭಾ ಚುನಾವಣೆ ಮುಗಿದು, ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿ ವಾರ ಕಳೆದರೂ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ನಡುವೆ ಪರಸ್ಪರ ಕೆಸರೆರಚಾಟ ನಿಂತಿಲ್ಲ.

Advertisement

ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬಂತೆ ಸೋಲಿಗೆ ಮೈತ್ರಿ ಧರ್ಮ ಪಾಲನೆ ಮಾಡದಿರುವುದು ಕಾರಣ ಎಂದು ಎರಡೂ ಪಕ್ಷಗಳ ನಾಯಕರು ಪರಸ್ಪರ ದೂಷಣೆಯಲ್ಲಿ ತೊಡಗಿರುವಾಗಲೇ ಶಾಸಕ ಎಚ್.ವಿಶ್ವನಾಥ್‌ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಕೆಂಡಕಾರುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ವರಿಷ್ಠರು ತಾಕೀತು: ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಉಳಿವಿನ ದೃಷ್ಟಿಯಿಂದ ಎರಡೂ ಪಕ್ಷಗಳ ಯಾವುದೇ ನಾಯಕರು ಲೋಕಸಭಾ ಚುನಾವಣೆಯಲ್ಲಿನ ಸೋಲು, ಮೈತ್ರಿ ಧರ್ಮ ಪಾಲನೆ ವಿಚಾರವಾಗಿ ಮಾತನಾಡದಂತೆ ವರಿಷ್ಠರು ತಾಕೀತು ಮಾಡಿದ್ದರೂ, ಎರಡೂ ಪಕ್ಷಗಳ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ದೋಸ್ತಿ ಪಕ್ಷದ ಮೇಲೆ ಮುಗಿಬೀಳುತ್ತಿದ್ದಾರೆ.

ಮೈತ್ರಿಧರ್ಮ ಪಾಲಿಸಿಲ್ಲ: ಜೆಡಿಎಸ್‌ ನಾಯಕರು ತುಮಕೂರು ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರ ಸೋಲು ಹಾಗೂ ಮಂಡ್ಯ ಕ್ಷೇತ್ರದಲ್ಲಿ ನಿಖೀಲ್ ಕುಮಾರಸ್ವಾಮಿ ಸೋಲಿಗೆ ಕಾಂಗ್ರೆಸ್‌ ನಾಯಕರ ಒಳ ಏಟು ಕಾರಣ ಎನ್ನುತ್ತಿದ್ದರೆ, ಕಾಂಗ್ರೆಸ್‌ ನಾಯಕರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೆ ಜೆಡಿಎಸ್‌ ಮೈತ್ರಿಧರ್ಮ ಪಾಲಿಸದೆ ಬಿಜೆಪಿ ಬೆಂಬಲಿಸಿರುವುದೇ ಕಾರಣ ಎಂದು ದೂಷಿಸುತ್ತಿದ್ದಾರೆ.

ಸಿದ್ದು ಬೆನ್ನಿಗೆ ನಿಂತ ಸೇಠ್ : ಅತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ ಆರ್‌.ರೋಷನ್‌ಬೇಗ್‌, ಸಿದ್ದರಾಮಯ್ಯ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೆ, ಈವರೆಗೆ ಸಿದ್ದರಾಮಯ್ಯ ಅವರಿಂದ ಒಂದು ಅಂತರ ಕಾಯ್ದುಕೊಂಡೇ ಬಂದಿರುವ ತನ್ವೀರ್‌ ಸೇಠ್ , ರೋಷನ್‌ಬೇಗ್‌ ಅವರ ಟೀಕಾಸ್ತ್ರಗಳಿಗೆ ಪ್ರತ್ಯಸ್ತ್ರ ಪ್ರಯೋಗಿಸುವ ಮೂಲಕ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ಅಚ್ಚರಿ ಮೂಡಿಸಿದ್ದಾರೆ.

Advertisement

ತುಮಕೂರಿನಲ್ಲಿ ಸಿದ್ದರಾಮಯ್ಯ ಸಂಚು ಮಾಡಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದರು ಎಂಬ ಎಚ್.ವಿಶ್ವನಾಥ್‌ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿ ರುವ ತನ್ವೀರ್‌ ಸೇಠ್ , ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿಗೆ ಎಚ್.ವಿಶ್ವನಾಥ್‌ ತಮ್ಮ ಕ್ಷೇತ್ರ ಹುಣಸೂರಿ ನಲ್ಲಿ ಹೆಚ್ಚು ಮತಗಳನ್ನು ಕೊಡಿಸದಿರುವುದೇ ಕಾರಣ ಎಂದು ಹರಿಹಾಯ್ದಿದ್ದಾರೆ.

ಮೈತ್ರಿಗೆ ಹಿನ್ನಡೆ: ಜೆಡಿಎಸ್‌ ನಾಯಕರಾಗಲಿ, ಕಾರ್ಯಕರ್ತರಾಗಲಿ ಮೈತ್ರಿ ಧರ್ಮ ಪಾಲನೆ ಮಾಡಲಿಲ್ಲ.ಅದಕ್ಕಾಗಿ ನಮಗೆ ಈ ಗತಿ ಬಂತು. ನಾವು ಮೈತ್ರಿ ಮಾಡಿಕೊಳ್ಳುವ ಒಂದು ವರ್ಷ ಮೊದಲೇ ಎಲ್ಲರು ಒಂದಾಗಬೇಕಿತ್ತು. ಮೈತ್ರಿ ನಂತರ ನಾವು ಒಂದಾಗಲೂ ಹೋದೆವು. ಅದು ಸರಿಯಾಗಿ ಆಗಲಿಲ್ಲ. ಅದಕ್ಕಾಗಿ ಮೈತ್ರಿಗೆ ಹಿನ್ನಡೆ ಉಂಟಾಯಿತು.

ಅಸಮಾಧಾನ:

ನಮ್ಮ ಕಾಂಗ್ರೆಸ್‌ ಪಕ್ಷ ಶಿಸ್ತಿನ ಪಕ್ಷ. ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ನಾವು ಸ್ವೀಕರಿಸುತ್ತೇವೆ. ನಾವು ಅವರನ್ನು ವಲಸಿಗರು ಎಂದು ನೋಡುವುದಿಲ್ಲ. ಪಕ್ಷಕ್ಕೆ ಯಾರು ಮುಜುಗರ ತರುತ್ತಾರೋ ಅಂಥವರಿಗೆ ಸರ್ಕಾರದಲ್ಲಿ ಮಣೆ ಹಾಕುತ್ತಾರೆ. ನಮ್ಮ ಪಕ್ಷದ ರಾಮಲಿಂಗಾರೆಡ್ಡಿ ಮತ್ತಿತರೇ ನಾಯಕರು ಹೇಳುವ ಮಾತನ್ನ ನಾವು ತಿಳಿಯಬೇಕಿದೆ ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದ ವಿರುದ್ಧ ತಿರುಗಿ ಬಿದ್ದವರಿಗೆ ಸರ್ಕಾರದಲ್ಲಿ ಮಣೆ ಹಾಕಲಾಗುತ್ತಿದೆ. ನಮ್ಮಂಥ ಪಕ್ಷ ನಿಷ್ಠರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಈ ಭಾಗದ ಹಿರಿಯ ಶಾಸಕರಾದ ತನ್ವೀರ್‌ಸೇಠ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲ ಮೂರು ವರ್ಷ ಸಂಪುಟದಿಂದ ಹೊರಗಿಟ್ಟಿದ್ದು, ಸಂಪುಟ ಪುನಾರಚನೆ ಮಾಡಿದಾಗ ಅವಕಾಶ ಕಲ್ಪಿಸಿದ್ದರು. ಮೂಲ ಕಾಂಗ್ರೆಸ್ಸಿಗರಾದ ತನ್ವೀರ್‌ಸೇs್, ಅಧಿಕಾರ ಕೊಡದಿದ್ದಾಗ, ಕೊಟ್ಟ ನಂತರ ಕೂಡ ಸಿದ್ದರಾಮಯ್ಯ ಅವರೊಂದಿಗೆ ಅಂತರ ಕಾಯ್ದುಕೊಂಡೇ ಬಂದವರು, ಇದೀಗ ಏಕಾಏಕಿ ಸಿದ್ದರಾಮಯ್ಯ ಪರವಾದ ಅವರ ಹೇಳಿಕೆ ಸಚಿವ ಸಂಪುಟ ವಿಸ್ತರಣೆಯಾದಲ್ಲಿ ಅವಕಾಶಕ್ಕಾಗಿ ಹಾದಿ ಸುಗಮಗೊಳಿಸಿಕೊಳ್ಳುತ್ತಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ.

● ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next