Advertisement

ಆಂತರಿಕ ಕಚ್ಚಾಟದಿಂದ ಸೋಲು

01:18 AM Sep 16, 2019 | Lakshmi GovindaRaju |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿಗೆ ಹಾಲಿ ಶಾಸಕರು, ನಾಯಕರ ನಡುವಿನ ಆಂತರಿಕ ಕಚ್ಚಾಟವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. 2018ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಹುಡುಕಲು ಕೆಪಿಸಿಸಿ ನೇಮಿಸಿದ್ದ ಸತ್ಯಶೋಧನಾ ಸಮಿತಿಗೆ ಸೋಲಿನ ಸತ್ಯ ಪತ್ತೆಯಾಗಿದೆ.

Advertisement

ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಸಮಿತಿಗೆ ದೂರು ನೀಡಲಾಗಿದೆ. ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಸೋಲಿಗೆ ಕಾರಣ ಪತ್ತೆ ಹಚ್ಚಲು ಮಾಜಿ ಸಚಿವ ಬಸವರಾಜರಾಯರಡ್ಡಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಇದು ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿ ವಸ್ತು ಸ್ಥಿತಿ ಕಲೆ ಹಾಕುವ ಪ್ರಯತ್ನ ಮಾಡಿದೆ.

ಹಾಲಿ ಶಾಸಕರ ವಿರುದ್ಧವೇ ದೂರು: ಈ ಸಮಿತಿ ಹಾಸನ ಜಿಲ್ಲೆಯೊಂದನ್ನು ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಿಗೂ ಖುದ್ದು ಭೇಟಿ ನೀಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಜಿಲ್ಲಾ ಮುಖಂಡರು, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದಿದೆ. ಮೂಲಗಳ ಪ್ರಕಾರ ಪ್ರಮುಖವಾಗಿ ಬಹುತೇಕ ಜಿಲ್ಲೆಗಳಲ್ಲಿ ಹಾಲಿ ಶಾಸಕರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ವಿಶೇಷವಾಗಿ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿನ ಹಿರಿಯ ನಾಯಕರೇ ಪಕ್ಷದ ಸೋಲಿಗೆ ಕಾರಣ ಎಂದು ಸಮಿತಿಗೆ ಮಾಹಿತಿ ನೀಡಲಾಗಿದೆ.

ಕೆ.ಎನ್‌.ರಾಜಣ್ಣ ವಿರುದ್ಧವೂ ದೂರು: ಕೋಲಾರ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಶಾಸಕರಾದ ವಿ.ಮುನಿಯಪ್ಪ, ಎಚ್‌.ಎನ್‌. ನಾರಾಯಣಸ್ವಾಮಿ, ಕೃಷ್ಣ ಬೈರೇಗೌಡ, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಸೇರಿ ಪಕ್ಷದ ನಾಯಕರು ತಮ್ಮ ಗೆಲುವಿಗೆ ಶ್ರಮಿಸಿಲ್ಲ ಎಂದು ಸಮಿತಿಗೆ ದೂರು ನೀಡಿದ್ದಾರೆ.

ತುಮಕೂರಿನಲ್ಲಿ ಮೈತ್ರಿ ಲೆಕ್ಕಾಚಾರದಲ್ಲಿ ಎಚ್‌.ಡಿ.ದೇವೇಗೌಡರಿಗೆ ಬಹಿರಂಗ ವಿರೋಧ ಮಾಡಿದ್ದ ಮಾಜಿ ಸಚಿವ ಕೆ.ಎನ್‌.ರಾಜಣ್ಣ ವಿರುದ್ಧವೂ ಸಮಿತಿಗೆ ದೂರು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಐವರು ಶಾಸಕರಿದ್ದರೂ ತಮ್ಮ ಪರವಾಗಿ ಕೆಲಸ ಮಾಡಿಲ್ಲ ಎಂದು ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ವಿರುದ್ಧ ಕೃಷ್ಣ ಬೈರೇಗೌಡ ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ ಮುಖಂಡರು ಸಮಿತಿಗೆ ದೂರು ನೀಡಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಆರ್‌.ರೋಷನ್‌ ಬೇಗ್‌ ವಿರುದ್ಧ ಸಮಿತಿಗೆ ದೂರು ನೀಡಲಾಗಿದೆ.

Advertisement

ಆದರೆ, ಅವರು ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅನರ್ಹಗೊಂಡಿದ್ದು, ಪಕ್ಷವೂ ಈಗಾಗಲೇ ಅವರನ್ನು ಉಚ್ಚಾಟನೆ ಮಾಡಿರುವುದರಿಂದ ಈ ಬಗ್ಗೆ ಸಮಿತಿ ಗಂಭೀರ ಶಿಫಾರಸು ಮಾಡುವ ಸಾಧ್ಯತೆ ಕಡಿಮೆಯಿದೆ. ಮಂಡ್ಯ ಜಿಲ್ಲೆಯಲ್ಲಿ ಚುನಾವಣೆ ವೇಳೆಯೇ ಜೆಡಿಎಸ್‌ನಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲವು ಸ್ಥಳೀಯ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈಗ ಸಮಿತಿ ಎದುರು ಮಂಡ್ಯ ಜಿಲ್ಲೆಯ ನಾಯಕರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಸೋಲಿಗೆ ಆರೋಪ ಮಾಡದ ಖರ್ಗೆ: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸೋಲು ಕಂಡಿದ್ದರೂ, ಅವರು ಯಾರ ಮೇಲೂ ಸೋಲಿಗೆ ಆರೋಪ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖವಾಗಿ ಮೋದಿ ಅಲೆ, ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿ ಕಾಂಗ್ರೆಸ್‌ ನಾಯಕರು ನಿಂತಿರುವುದು ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣ ಎಂದು ದೂರು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿಯೇ ಸೋಲಿಗೆ ಕಾರಣ ಎಂಬ ಆರೋಪವನ್ನೂ ಮಾಡಲಾಗಿದೆ.

ಅ.2ಕ್ಕೆ ವರದಿ ಸಲ್ಲಿಕೆ: ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಗಳ ಸೋಲಿಗೆ ಏನು ಕಾರಣ ಎನ್ನುವುದನ್ನು ಸ್ಥಳೀಯ ಜಿಲ್ಲಾ ಮುಖಂಡರು, ನಾಯಕರು, ಮಾಜಿ ಸಚಿವರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಕಾರ್ಯಕರ್ತರ ಅಭಿಪ್ರಾಯ ಪಡೆದು ವರದಿ ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಜಿಲ್ಲಾಧ್ಯಕ್ಷರಿಂದ ಗೌಪ್ಯವಾಗಿ ಲಿಖೀತ ವರದಿ ಸಲ್ಲಿಸುವಂತೆಯೂ ಸಮಿತಿ ಸೂಚಿಸಿದೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ನಾಯಕರ ಹೆಸರನ್ನು ನೇರವಾಗಿ ಬರೆದು ಕಳುಹಿಸುವ ಸಾಧ್ಯತೆಯಿದೆ. ಎಲ್ಲಾ ಮಾಹಿತಿ ಬಂದ ನಂತರ ಪೂರ್ಣ ವರದಿ ಸಿದ್ಧಪಡಿಸಿ ಅ.2 ರಂದು ಸಲ್ಲಿಸಲು ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಸತ್ಯ ಶೋಧನಾ ಸಮಿತಿಯ ಪ್ರಶ್ನೆಗಳು
1.ಪಕ್ಷದಿಂದ ಸಮರ್ಪಕವಾಗಿ ಪ್ರಚಾರ ಕೈಗೊಂಡಿರಲಿಲ್ಲವೇ?

2. ನಾಯಕರು, ಚುನಾಯಿತ ಪ್ರತಿನಿಧಿಗಳು ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲವೇ?

3. ಅಭ್ಯರ್ಥಿ ಕ್ಷೇತ್ರದ ಎಲ್ಲಾ ಜಾತಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆಯೇ?

4.ಕ್ಷೇತ್ರದಲ್ಲಿ ಎಲ್ಲಾ ಧರ್ಮದ ಜಾತಿಯ ಜನರು ಪಕ್ಷಕ್ಕೆ ಬೆಂಬಲ ನೀಡಿದ್ದಾರೆಯೇ?

5.ಯುವ, ಮಹಿಳಾ ಮತದಾರರು ಪಕ್ಷದ ಪರವಾಗಿ ಇದ್ದಾರೆಯೇ?

6.ಪಕ್ಷದಿಂದ ಆಯೋಜಿಸಿದ್ದ ಕಾರ್ಯಕ್ರಮಗಳು ಚುನಾವಣೆಯಲ್ಲಿ ಸಹಾಯಕ್ಕೆ ಬರಲಿಲ್ಲವೇ?

7.ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆಯಲ್ಲಿ ಮತಗಳಿಕೆ ಇಳಿಮುಖವಾಗಲು ಕಾರಣ ಏನು?

8.ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳನ್ನು ಸೆಳೆಯಲು ಏನು ಮಾಡಬೇಕು?

ಸತ್ಯಶೋಧನಾ ಸಮಿತಿ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಮಾಹಿತಿ ಕಲೆ ಹಾಕಿದೆ. ವರದಿ ಸಿದ್ಧಪಡಿಸುವ ಕಾರ್ಯ ನಡೆದಿದ್ದು, ಅ.2 ರಂದು ವರದಿ ಸಲ್ಲಿಸುತ್ತೇವೆ. ಬಹಳ ಆಳವಾಗಿ ಅಧ್ಯಯನ ಮಾಡುತ್ತಿದ್ದೇವೆ. ಪಕ್ಷದಲ್ಲಿ ಆಗಬೇಕಿರುವ ಬದಲಾವಣೆ, ಯುವಕರು, ಮಹಿಳಾ ಮತದಾರರ ಭಾವನೆಗಳೇನು ಎನ್ನುವುದರ ಬಗ್ಗೆ ವರದಿಯಲ್ಲಿ ಸಂಪೂರ್ಣವಾಗಿ ವಿವರಣೆ ನೀಡುತ್ತೇವೆ.
-ಬಸವರಾಜ ರಾಯರಡ್ಡಿ, ಸತ್ಯ ಶೋಧನಾ ಸಮಿತಿ ಸಂಚಾಲಕ

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next