Advertisement

ಸಿದ್ದರಾಮಯ್ಯ ಪ್ರತಿಷ್ಠೆಯ ಕಣದಲ್ಲಿ ದೋಸ್ತಿಗೆ ಸೋಲು

12:46 AM May 24, 2019 | Lakshmi GovindaRaj |

ಮೈಸೂರು: ತವರು ಜಿಲ್ಲೆ ಮೈಸೂರನ್ನು ಒಳಗೊಂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ತನ್ನ ಪ್ರತಿಷ್ಠೆಯನ್ನು ಒರೆಗೆ ಹಚ್ಚಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗರ್ವಭಂಗವಾಗಿದೆ.

Advertisement

ಈ ಚುನಾವಣೆಯಲ್ಲಿ ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೂ ತವರು ಜಿಲ್ಲೆಯಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಅಭ್ಯರ್ಥಿ ನಗಣ್ಯವಾಗಿ ಇಡೀ ಚುನಾವಣೆ ಸಿದ್ದರಾಮಯ್ಯ ವರ್ಸಸ್‌ ಬಿಜೆಪಿ ಎಂಬಂತೆ ಬಿಂಬಿತವಾಗಿತ್ತು.

ಸ್ಥಳೀಯ ದಳಪತಿಗಳು, ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುವುದು ಎನ್ನುವುದಕ್ಕಿಂತ ಸಿದ್ದರಾಮಯ್ಯ ಅವರ ಅಭ್ಯರ್ಥಿಪರ ಕೆಲಸ ಮಾಡಲೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಅಸಮಾಧಾನಗೊಂಡು ಕ್ಷೇತ್ರದಿಂದಲೇ ದೂರ ಉಳಿದರು. ಸ್ವತಃ ಅಭ್ಯರ್ಥಿ ವಿಜಯಶಂಕರ್‌, ಬೆಂಬಲ ಕೋರಲು ಅವರ ಮನೆಗೆ ತೆರಳಿದಾಗಲೂ ಕೈಗೆ ಸಿಗಲಿಲ್ಲ.

ಇನ್ನು ಸಿದ್ದರಾಮಯ್ಯ ಅವರ ಬದ್ಧ ರಾಜಕೀಯ ವೈರಿ ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಪಿರಿಯಾಪಟ್ಟಣದ ಜೆಡಿಎಸ್‌ ಶಾಸಕ ಕೆ.ಮಹದೇವ್‌, ಪ್ರಚಾರದಲ್ಲಿ ಕೈ ಜೋಡಿಸಿದರಾದರೂ ಕ್ಷೇತ್ರದ ಜೆಡಿಎಸ್‌ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗೆ ವರ್ಗಾಯಿಸುವ ಕೆಲಸಕ್ಕೆ ಮುಂದಾಗಲಿಲ್ಲ.

ಇನ್ನು ಬಿಜೆಪಿ ಪಾಲಿಗೆ ಅಬೇಧ್ಯ ಕೋಟೆಯಾಗಿರುವ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲೂ ಜೆಡಿಎಸ್‌ನ ನಿರೀಕ್ಷಿತ ಸಹಕಾರ ಸಿಗಲಿಲ್ಲ. ಮೈಸೂರು ನಗರದ 3 ಕ್ಷೇತ್ರಗಳ ಪೈಕಿ ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿರುವುದರಿಂದ ಸಹಜವಾಗಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಇಡೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಏಕೈಕ ಶಾಸಕರಿರುವ ಅಲ್ಪಸಂಖ್ಯಾತ ಮತದಾರರ ಬಾಹುಳ್ಯ ಹೊಂದಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷೆಯಂತೆ ಮುನ್ನಡೆ ಸಿಕ್ಕಿದೆಯಾದರೂ ಬಿಜೆಪಿ ಇಲ್ಲಿ ಗಣನೀಯ ಪ್ರಮಾಣದಲ್ಲಿ ಮತ ಪಡೆದುಕೊಂಡಿದೆ.

ಒಟ್ಟಾರೆ ಎರಡೂ ಪಕ್ಷಗಳು ದೋಸ್ತಿಯಾದರೂ ಸಿದ್ದರಾಮಯ್ಯ ಅವರ ಕಾರಣಕ್ಕೆ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ಗೆ ಕೈಕೊಟ್ಟಿದ್ದರಿಂದ ಸಿ.ಎಚ್‌.ವಿಜಯಶಂಕರ್‌ ಲೋಕಸಭೆ ಚುನಾವಣೆಯಲ್ಲಿ ಸತತ 3ನೇ ಸೋಲು ಕಾಣುವಂತಾಗಿದೆ.

ನರೇಂದ್ರ ಮೋದಿ ಅವರು ಸಂಸತ್ತಿಗೆ ಕಾಲಿಟ್ಟಾಗಲೇ ನಾನೂ ಸಂಸತ್‌ಗೆ ಕಾಲಿಟ್ಟೆ. ಈಗ 2ನೇ ಬಾರಿಗೆ ಅವರ ಜತೆ ಸಂಸತ್‌ಗೆ ಹೋಗುತ್ತಿದ್ದೇನೆ. ಮಂತ್ರಿ ಪದವಿ ಮೇಲೆ ನನಗೆ ಆಸೆ ಇಲ್ಲ, ಮೋದಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅಷ್ಟೇ ಸಾಕು.
-ಪ್ರತಾಪಸಿಂಹ, ವಿಜೇತ ಅಭ್ಯರ್ಥಿ

ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಆಗಿಲ್ಲದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ಸೋಲಿನಿಂದ ಮೈತ್ರಿ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
-ಸಿ.ಎಚ್‌.ವಿಜಯಶಂಕರ್‌, ಪರಾಜಿತ ಅಭ್ಯರ್ಥಿ

ಮೈಸೂರು-ಕೊಡಗು
-ವಿಜೇತರು ಪ್ರತಾಪ್‌ ಸಿಂಹ (ಬಿಜೆಪಿ)
-ಪಡೆದ ಮತ 6,85,105
-ಎದುರಾಳಿ ಸಿ.ಎಚ್‌.ವಿಜಯಶಂಕರ್‌ (ಮೈತ್ರಿ ಅಭ್ಯರ್ಥಿ)
-ಪಡೆದ ಮತ 5,48,911
-ಗೆಲುವಿನ ಅಂತರ 1.36 ಲಕ್ಷ

ಗೆಲುವಿಗೆ 3 ಕಾರಣ
-ಕಾಂಗ್ರೆಸ್‌- ಜೆಡಿಎಸ್‌ ದೋಸ್ತಿ ಪಕ್ಷಗಳಲ್ಲಿ ಮೂಡದ ಸಹಮತ
-ಮಾಜಿ ಸಿಎಂ ಸಿದ್ದರಾಮಯ್ಯ ಕಾರಣಕ್ಕೆ ಬಿಜೆಪಿ ಪಾಲಾದ ಒಕ್ಕಲಿಗ ಮತಗಳು
-ಚುನಾವಣಾ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದು

ಸೋಲಿಗೆ 3 ಕಾರಣ
-ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪರವಾದ ಅಲೆ
-ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಬಿಜೆಪಿಯ ಸಂಘಟಿತ ಪ್ರಯತ್ನ
-ಜೆಡಿಎಸ್‌ನ ಸ್ಥಳಿಯ ನಾಯಕರ ಪರೋಕ್ಷ ಬೆಂಬಲ

Advertisement

Udayavani is now on Telegram. Click here to join our channel and stay updated with the latest news.

Next