ಬಾಗಲಕೋಟೆ: ದೀಪ ಆರುವ ಮುನ್ನ ಹೆಚ್ಚು ಉರಿಯುತ್ತದೆ. ಬಿಜೆಪಿ ಸ್ಥಿತಿ ಕೂಡ ಹಾಗೆಯೇ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ಜಾರ್ಖಂಡ್ ಚುನಾವಣೆಯೇ ಬಿಜೆಪಿಗೆ ಮೊದಲ ಪರೀಕ್ಷೆ. ಅವರದೇ ಸರ್ಕಾರ ಇದ್ದರೂ ಅಲ್ಲಿ ಸೋಲನ್ನು ಅನುಭವಿಸಿದೆ. ಮುಂದೆ ದೇಶದ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸೋಲುವುದು ಖಚಿತ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಮುಂಬರುವ ಎಲ್ಲ ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಸೋಲಲಿದೆ. ಬಿಜೆಪಿಯ ಚಾಣಕ್ಯ ಅಮಿತ್ ಶಾ, 12 ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಚಾಣಕ್ಯನ ಸ್ಥಿತಿ ನೋಡಿ ಮರುಕ ಬರುತ್ತಿದೆ. ಕೆಲವು ಜನರನ್ನು ಕೊನೆಯವರೆಗೂ ಮೋಸ ಮಾಡಬಹುದು. ಆದರೆ, ಎಲ್ಲ ಜನರನ್ನು, ಎಲ್ಲ ಸಮಯದಲ್ಲೂ ಮೋಸ ಮಾಡಲು ಆಗಲ್ಲ. ಇದು ಪ್ರಧಾನಿ ಮೋದಿ ಅವರಿಗೆ ಅನ್ವಯಿಸುತ್ತದೆ ಎಂದರು.
ಕಾರಜೋಳ ಕ್ಷಮೆ ಕೋರಲಿ: ಕಾಂಗ್ರೆಸ್ ಪಕ್ಷದವರು ದೇಶದ್ರೋಹಿಗಳು ಎಂದು ಹೇಳಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೂಡಲೇ ಕಾಂಗ್ರೆಸ್ಸಿಗರ ಕ್ಷಮೆ ಕೋರಬೇಕು. ಇಂತಹ ಹೇಳಿಕೆ ಕಾರಜೋಳ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ದೇಶದ ಸ್ವಾತಂತ್ರಕ್ಕೆ ಕಾಂಗ್ರೆಸ್‌ನ 6.50 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಾರಜೋಳರ ಬಿಜೆಪಿ ಹುಟ್ಟಿಕೊಂಡಿದ್ದೇ 1950ರಲ್ಲಿ. ತಮ್ಮ ಪಕ್ಷದ ಇತಿಹಾಸ ನೋಡಿಕೊಂಡು ಮಾತನಾಡಲಿ ಎಂದರು.
ಸಂಪುಟ ವಿಸ್ತರಣೆ ಬಳಿಕ ಬಣ್ಣ ಬಯಲು: ರಾಜ್ಯ ಸರ್ಕಾರ ಮೂರು ವರ್ಷ ಗಟ್ಟಿಯಾಗಿರುತ್ತದೆ ಎಂಬುದು ಈಗಲೇ ಗೊತ್ತಾಗಲ್ಲ. ಮೊದಲು ಸಂಪುಟ ವಿಸ್ತರಣೆ ಮಾಡಲಿ. ಆಗ ನಿಜವಾದ ಬಣ್ಣ ಬಯಲಾಗುತ್ತದೆ. ಆಗ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ.
ಅನರ್ಹ ಶಾಸಕರು ಬಿಜೆಪಿಗೆ ಹೋಗಲು ಹಣ ಪಡೆದಿದ್ದಾರೆ. ಈಗ ಉಪ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುತ್ತಾರೆ. ಅಂತವರು ಗೆದ್ದರೆ ರಾಜ್ಯ ಸರ್ಕಾರದ ಬೊಕ್ಕಸ ಉಳಿಯುತ್ತದೆಯಾ ಎಂಬ ಸಂಶಯವಿದೆ. ಇದನ್ನೆಲ್ಲ ನೋಡಿ, ಬಿಜೆಪಿಯ ನಿಷ್ಠಾವಂತ ಶಾಸಕರು ಸುಮ್ಮನಿರುತ್ತಾರಾ? ಅವರೇ ಬಡಿದಾಡಿ ಅಧಿಕಾರದಿಂದ ನಿರ್ಗಮಿಸುವುದು ನಿಶ್ಚಿತ ಎಂದರು.