ಮೈಸೂರು: ಕೇಂದ್ರ ಸರ್ಕಾರದ ನೋಟು ರದ್ಧತಿ ತೀರ್ಮಾನದಿಂದ ಆಗಿರುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸಿಪಿಐಎಂ ವತಿಯಿಂದ ಹಮ್ಮಿಕೊಂಡಿರುವ ಜಾಗೃತಿ ಜಾಥಾಕ್ಕೆ ಗುರುವಾರ ಚಾಲನೆ ದೊರೆಯಿತು.
ನಗರದ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಜಾಥಾದಲ್ಲಿ ಪಾಲ್ಗೊಂಡ ಸಿಪಿಐಎಂ ಕಾರ್ಯಕರ್ತರು, ದೇಶದಲ್ಲಿ ನೋಟು ರದ್ಧತಿ ಆದೇಶ ಜಾರಿಗೊಳಿಸಿದ ಕೇಂದ್ರ ಸರ್ಕಾರದ ತೀರ್ಮಾನದಿಂದ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.
ಹಳೇ ನೋಟುಗಳ ಬದಲಾವಣೆಗೆ ಡಿ.30ರವರೆಗೆ ನೀಡಿದ್ದ ಗಡುವು ಮುಕ್ತಾಯವಾಗಿದೆ. ಆದ್ದರಿಂದ ಸಾರ್ವಜನಿಕರು ತಾವು ಸಂಪಾದಿಸಿ ಬ್ಯಾಂಕಿನಲ್ಲಿಟ್ಟ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಹಿವಾಟು ನಡೆಸಲು ಹೇರಲಾಗಿರುವ ಎಲ್ಲಾ ನಿರ್ಬಂಧಗಳನ್ನು ಕೂಡಲೇ ಹಿಂಪಡೆಯಬೇಕು.
ಜತೆಗೆ ಸಾಮಾನ್ಯ ಕೃಷಿ ಚಟುವಟಿಕೆಗಳು ಏರುಪೇರಾಗಿ ರೈತರು ಸಂಕಷ್ಟ ಅನುಭವಿಸುತ್ತಿರುವುದರಿಂದ ಅವರ ಸಾಲವನ್ನು ಶೀಘ್ರವೇ ಮನ್ನಾ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಇದಕ್ಕೂ ಮುನ್ನ ಜಾಥಾ ಆರಂಭಿಸಿದ ಸಿಪಿಐಎಂ ಕಾರ್ಯಕರ್ತರು ಬಲ್ಲಾಳ್ ವೃತ್ತದ ಮಾರ್ಗವಾಗಿ ಸಂಚರಿಸಿ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಇಎಂಎಲ್ ಕಾರ್ಖಾನೆ ತಲುಪಿದರು.
ನಂತರ ಬಿಇಎಂಎಲ್ ಷೇರನ್ನು ಹಿಂತೆಗೆದು ಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಬಿಇಎಂಎಲ್ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿದರು. ನೋಟ್‌ಬ್ಯಾನ್ ವಿರುದ್ಧ ಸಿಪಿಐಎಂ ಸಂಘಟನೆ ಕೈಗೊಂಡಿರುವ ಜಾಗೃತಿ ಜಾಥಾ ಜಿಲ್ಲಾದ್ಯಂತ ಫೆ.13ರವರೆಗೆ ನಡೆಯಲಿದೆ. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು, ಪ್ರಮುಖರಾದ ಲ. ಜಗನ್ನಾಥ್, ಜಗದೀಶ್ ಸೂರ್ಯ, ರಾಜೇಂದ್ರ, ಬಿ.ಜಯರಾಂ, ಯತೀಶ್ ಇನ್ನಿತರರು ಭಾಗವಹಿಸಿದ್ದರು.