Advertisement

ತನಿಖೆ ಬಳಿಕ ಮಾನನಷ್ಟ ಮೊಕದ್ದಮೆ: ಲೋಣಿ

12:09 PM Jan 04, 2022 | Shwetha M |

ವಿಜಯಪುರ: ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ನನ್ನನ್ನು ಕಣದಿಂದ ಹಿಂದೆ ಸರಿಸುವ ಹುನ್ನಾರ ನಡೆಯಿತು. ಇದಕ್ಕೆ ಬಗ್ಗದ ನನ್ನ ವಿರುದ್ದ ಅಶ್ಲೀಲ ವಿಡಿಯೋ ಸೃಷ್ಟಿಸಿ ಬಿಡಲಾಗಿದ್ದು, ಈ ಬಗ್ಗೆ ನಗರದ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದೇನೆ. ತನಿಖೆ ಬಳಿಕ ಕೃತ್ಯಕ್ಕೆ ಕಾರಣವಾದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪರಾಜಿತ ಪಕ್ಷೇತರ ಅಭ್ಯರ್ಥಿ ಎಂ.ಎಸ್‌. ಲೋಣಿ ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ನಾನು ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಲಾಯಿತು. ಒಪ್ಪದಿದ್ದಾಗ ಅಕ್ರಮ ಸಂಬಂಧ ಆರೋಪ ಮಾಡಲಾಯಿತು. ಅದಕ್ಕೂ ಬಗ್ಗದಿದ್ದಾಗ ಅಶ್ಲೀಲ ದೃಶ್ಯಾವಳಿ ಕುತಂತ್ರ ಮಾಡಲಾಯಿತು. ಇದೀಗ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕೆಲವರ ಪಾಪದ ಕೊಡ ತುಂಬಿದೆ ಎಂದು ವಾಗ್ಧಾಳಿ ನಡೆಸಿದರು.

ವೈಯಕ್ತಿಕ ಚಾರಿತ್ರ್ಯ ವಧೆ ಮಾಡುವ, ಹೀನ ರಾಜಕೀಯ ಮಾಡಲು ನನ್ನ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇಷ್ಟಕ್ಕೂ ವ್ಯಕ್ತಿಯೊಬ್ಬರ ಖಾಸಗಿ ಜೀವನವನ್ನು ಸಾರ್ವಜನಿಕವಾಗಿ ಬಯಲು ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.

ತಮ್ಮ ವಿರುದ್ಧ ಕುತಂತ್ರ ನಡೆಸಿರುವ ಎಂಬಿ.ಪಾಟೀಲ ಸೇರಿದಂತೆ ಇತರೆ ನಾಯಕರ ಕುರಿತು ಅಖೀಲ ಭಾರತ ಗಾಣಿಗ ಸಮಾಜದ ಅಧ್ಯಕ್ಷನಾಗಿರುವ ನಾನು, ನನ್ನ ಸಮಾಜದ ಸಭೆಯಲ್ಲಿ ಚರ್ಚಿಸುತ್ತೇನೆ. ನಮ್ಮ ಸಮಾಜಕ್ಕೆ ಆಗಿರುವ ರಾಜಕೀಯ ಅನ್ಯಾಯ ಕುರಿತು ಮನವರಿಕೆ ಮಾಡಿಕೊಡುತ್ತೇನೆ ಎಂದರು.

ಗ್ರಾಪಂ ಅಧಿಕಾರ ಮೊಟಕು

Advertisement

ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಗ್ರಾಪಂ ಅಧಿಕಾರ ಮೊಟಕುಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಕ್ಕಿಳಿಯಲಾಗುತ್ತದೆ. ಹೆಚ್ಚಿನ ಅಧಿಕಾರ, ಅನುದಾನ ನೀಡಬೇಕು. ಸದಸ್ಯರಿಗೆ ಬಸ್‌ಪಾಸ್‌, ವೈದ್ಯಕೀಯ ಉಚಿತ ಸೇವೆ ನೀಡಬೇಕೆಂದು ಆಗ್ರಹಿಸಿ ಗ್ರಾಪಂ ಸದಸ್ಯರ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಭೇಟಿ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದರು.

ಮೇಲ್ಮನೆ ಇನ್ನೋರ್ವ ಪರಾಜಿತ ಕಾಂತಪ್ಪ ಇಂಚಗೇರಿ, ಗ್ರಾಪಂ ಸದಸ್ಯರ ಸಂಘದ ಕೊಲ್ಹಾರ ತಾಲೂಕು ಅಧ್ಯಕ್ಷ ಪ್ರದೀಪ ಪಾಟೀಲ, ಎಂ.ಎಚ್‌.ಪಠಾಣ, ವಿಠ್ಠಲ ಕತ್ನಳ್ಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next