ಬೆಂಗಳೂರು: ನಟ ಅರ್ಜನ್ ಸರ್ಜಾ ತಮ್ಮ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಹಾಗೂ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸುವ ಅರ್ಜಿ ವಜಾಗೊಳಿಸಬೇಕೆಂದು ನಟಿ ಶೃತಿ ಹರಿಹರನ್ ಪರ ವಕೀಲರು ಸೋಮವಾರ ಮೆಯೋಹಾಲ್‌ನ ಎಸಿಸಿಎಂಎಂ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಮಂಗಳವಾರ(ಅ.30)ಕ್ಕೆ ವಿಚಾರಣೆ ಮುಂದೂಡಿದೆ.
ಅರ್ಜುನ್ ಸರ್ಜಾ ಅವರು “ವಿಸ್ಮಯ’ ಸಿನಿಮಾ ಚಿತ್ರೀಕರಣದ ವೇಳೆ ನಟಿ ಶೃತಿ ಹರಿಹರನ್‌ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಮೀ ಟೂ ಅಭಿಯಾನದ ಮೂಲಕ ಬಹಿರಂಗಪಡಿಸಿದ್ದರು. ಇದನ್ನು ವಿರೋಧಿಸಿ ಅರ್ಜುನ್ ಸರ್ಜಾ ಅಳಿಯ ಧೃವ ಸರ್ಜಾ ಶೃತಿ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಗೂ ಮಾನ ಹಾನಿಕಾರ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಮೆಯೋಹಾಲ್‌ನ ಎಸಿಸಿಎಂಎಂ ನ್ಯಾಯಾಲಯಕ್ಕೆ ಶೃತಿ ಪರ ವಕೀಲೆ ಜೈನಾ ಕೊಥಾರಿ 14 ಪುಟಗಳ ಲಿಖೀತ ವಾದ ಮಂಡಿಸಿದರು. ಜತೆಗೆ ಸರ್ಜಾ ವಿರುದ್ಧ ಆರೋಪ ಮಾಡುತ್ತಿದ್ದಂತೆ ನಮ್ಮ ಕಕ್ಷಿದಾರರಿಗೆ 500ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದ ಭಯಗೊಂಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕಕ್ಷಿದಾರರಿಗೆ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದರು.
ಅರ್ಜುನ್ ಸರ್ಜಾ ಸಹಿ ಹಾಕಿಲ್ಲ: ಅರ್ಜುನ್ ಸರ್ಜಾ ಪರ ಕೋರ್ಟ್ ಮೊರೆ ಹೋಗಲು ಧೃವ ಸರ್ಜಾ ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಪಡೆದಿದ್ದಾರೆ. ಆದರೆ, ಈ ಜಿಪಿಎಗೆ ಅರ್ಜುನ್ ಸರ್ಜಾ ಸಹಿ ಹಾಕಿಲ್ಲ. ಹೀಗಿರುವಾಗ ಜಿಪಿಎಗೆ ಕಾನೂನು ಸಮ್ಮತಿ ದೊರೆಯುವುದಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕೆಂದು ವಕೀಲೆ ಜೈನಾ ಕೊಥಾರಿ ಮನವಿ ಮಾಡಿದರು.
ಠಾಣೆಗೆ ವಕೀಲರ ಭೇಟಿ: ಈ ನಡುವೆ ಶೃತಿ ಹರಿಹರನ್ ಪರ ವಕೀಲ ಅನಂತ್ ನಾಯಕ್ ಕಬ್ಬನ್‌ಪಾರ್ಕ್ ಠಾಣೆಗೆ ಭೇಟಿ ನೀಡಿ ಪೊಲೀಸರೊಂದಿಗೆ ಪ್ರಕರಣ ಕುರಿತು ಚರ್ಚಿಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅರ್ಜುನ್ ಸರ್ಜಾ ಅವರನ್ನು ಬಂಧಿಸಬೇಕು. ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿ ಪ್ರಭಾವಿಯಾಗಿದ್ದಾರೆ. ಒತ್ತಡದಿಂದ ಪೊಲೀಸರು ತನಿಖೆಯನ್ನು ಮಂದಗತಿಯಲ್ಲಿ ನಡೆಸುತ್ತಿದ್ದಾರೆ. ಇದರಿಂದ ಸಾಕ್ಷ್ಯನಾಶಪಡಿಸುವ ಸಾಧ್ಯತೆಯಿದೆ ಎಂದು ಹೇಳಿದರು.