Advertisement

ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ

07:35 AM Oct 31, 2018 | Karthik A |

ಭೋಪಾಲ್‌/ಇಂದೋರ್‌/ಹೈದರಾಬಾದ್‌: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಪುತ್ರನ ಹೆಸರು ಪನಾಮಾ ದಾಖಲೆಗಳಲ್ಲಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಕ್ರುದ್ಧಗೊಂಡಿರುವ ಸಿಎಂ ಪುತ್ರ ಕಾರ್ತಿಕೇಯ ಕಾಂಗ್ರೆಸ್‌ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಬಿಜೆಪಿ ರಾಜ್ಯಗಳಲ್ಲಿ ಹಲವು ಹಗರಣಗಳು ಇದ್ದುದರಿಂದ ಗೊಂದಲಕ್ಕೊಳಗಾಗಿ ತಪ್ಪು ಆರೋಪ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

Advertisement

ಜಬುವಾದಲ್ಲಿ ಸೋಮವಾರ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಮಾಮಾಜಿ’ (ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಪ್ರೀತಿಯಿಂದ ಕರೆಯುವ ಹೆಸರು) ಪುತ್ರನ ಹೆಸರು ತೆರಿಗೆ ವಂಚಕರ ಹೆಸರುಗಳಿರುವ ಪನಾಮಾ ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಇದರ ಹೊರತಾಗಿಯೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಸಿಎಂ ಚೌಹಾಣ್‌ ಮತ್ತು ಪುತ್ರ ಕಾರ್ತಿ ಕೇಯ ಚೌಹಾಣ್‌ ಸೋಮವಾರ ರಾತ್ರಿಯೇ ಟ್ವೀಟ್‌ ಮಾಡಿ ಆರೋಪ ತಿರಸ್ಕರಿಸಿದ್ದಲ್ಲದೆ, ದಾವೆ ಹೂಡುವ ಎಚ್ಚರಿಕೆ ನೀಡಿದ್ದರು. ಅದರಂತೆಯೇ ವಿಶೇಷ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ರಾಹುಲ್‌ ಗಾಂಧಿ ಆರೋಪ ಸರಿಯಲ್ಲ. ನನ್ನ ಹಾಗೂ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರವುದೇ ಅವರ ಉದ್ದೇಶವಾಗಿದೆ ಎಂದು ಕಾರ್ತಿಕೇಯ ಚೌಹಾಣ್‌ ಹೇಳಿದ್ದಾರೆ.  ಕೋರ್ಟ್‌ ನ.3 ರಂದು ವಿಚಾರಣೆ ನಡೆಸಲಿದ್ದು, ಆ ದಿನ ಕಾರ್ತಿಕೇಯ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತದೆ.

ತಪ್ಪಾಗಿದೆ: ಮೊಕದ್ದಮೆ ದಾಖಲಾಗುತ್ತಿದ್ದಂತೆಯೇ ಇಂದೋರ್‌ನಲ್ಲಿ ಆಯ್ದ ಪತ್ರಕರ್ತರ ಜತೆಗೆ ಮಾತನಾಡಿದ ರಾಹುಲ್‌ ಗಾಂಧಿ ‘ಪ್ರಚಾರಕ್ಕಾಗಿ ಹಲವು ರಾಜ್ಯಗಳ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಹೀಗಾಗಿದೆ. ಅಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಹಲವು ಹಗರಣಗಳು ಇವೆ. ಹೀಗಾಗಿ ಗೊಂದಲಕ್ಕೆ ಒಳಗಾದೆ. ಪನಾಮಾ ದಾಖಲೆಗಳಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮತ್ತು ಅವರ ಪುತ್ರನ ಹೆಸರು ಇಲ್ಲ. ಆದರೆ ಮಧ್ಯಪ್ರದೇಶದ ಮುಖ್ಯಮಂತ್ರಿ ವ್ಯಾಪಂ ಮತ್ತು ಇ-ಟೆಂಡರಿಂಗ್‌ ಸ್ಕೀಂ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ’ ಎಂದು ಹೇಳಿದ್ದಾರೆ. ರಹಸ್ಯವಾಗಿ ಚಿತ್ರೀಕರಿಸಲಾಗಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಯುಪಿಎಗೆ ಬರುವುದಿದ್ದರೆ ಸ್ವಾಗತ: ಈ ನಡುವೆ, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಯುಪಿಎಗೆ ಬರುವುದಿದ್ದರೆ ಸ್ವಾಗತ ಎಂದು ಕಾಂಗ್ರೆಸ್‌ ನಾಯಕ ವೀರಪ್ಪ ಮೊಲಿ ಹೇಳಿದ್ದಾರೆ. ಎಲ್ಲಾ ವಿಪಕ್ಷಗಳ ಜತೆ ಮೈತ್ರಿಗೆ ಮುಂದಾಗಿದ್ದೇವೆ. ತೆಲಂಗಾಣ ಸಿಎಂ ಕೆಸಿಆರ್‌ ಅತ್ಯಂತ ಕೃತಘ್ನ ವ್ಯಕ್ತಿ. ಕಾಂಗ್ರೆಸ್‌ ತೆಲಂಗಾಣಕ್ಕಾಗಿ ಹಲವು ತ್ಯಾಗ ಮಾಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next