Advertisement

ದೇಯಿ ಬೈದ್ಯೆತಿ, ಸಾಯನ ಬೈದ್ಯ, ಕೋಟಿ –ಚೆನ್ನಯರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

11:08 PM Feb 28, 2020 | mahesh |

ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ಫೆ. 28ರಂದು ಪ್ರಧಾನ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕವು ಬೆಳಗ್ಗಿನಿಂದಲೇ ಹರಿದು ಬಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ತಂತ್ರಿ ಎಂ.ಕೆ. ಲೋಕೇಶ್‌ ಶಾಂತಿ ನೇತೃತ್ವದಲ್ಲಿ ನಡೆಯಿತು.

Advertisement

ಬೆಳಗ್ಗೆ ಗಣಪತಿ ಹೋಮ, ಶಿಖರ ಪ್ರತಿಷ್ಠೆ, ಬೆರ್ಮೆರ್‌ ಗುಂಡದಲ್ಲಿ ಬೆರ್ಮೆರ್‌ ಶಿಲಾ ಸ್ಥಾಪನೆ, ಬೆಳಗ್ಗೆ 8.04ರ ಮೀನ ಲಗ್ನ ಸುಮುಹೂರ್ತದಲ್ಲಿ ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ಬಿಂಬ ಪ್ರತಿಷ್ಠೆ, ಸಾಯನ ಬೈದ್ಯರ ಗುರುಪೀಠ ಸ್ಥಾಪನೆ, ಮೂಲಸ್ಥಾನ ಗರಡಿಯಲ್ಲಿ ಗುರು ಸಾಯನ ಬೈದ್ಯರು, ಕೋಟಿ ಚೆನ್ನಯರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಸತ್ಯಧರ್ಮ ಚಾವಡಿಯಲ್ಲಿ ನೈವೇದ್ಯ, ಮಹಾಪೂಜೆ ನಡೆಯಿತು.

ಮಧ್ಯಾಹ್ನ ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಧೂಮಾವತಿ ಸಾನ್ನಿಧ್ಯದಲ್ಲಿ ನವಕ ಪ್ರಧಾನ ಹೋಮ, ಧ್ವಜಪೂಜೆ, ಧ್ವಜಾರೋಹಣದ ಬಳಿಕ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಅನಾವರಣಗೊಂಡಿತು.

ಸತ್ಯಧರ್ಮ ಚಾವಡಿಯಲ್ಲಿ ಶುಕ್ರವಾರ ವೈದಿಕ ವಿಧಿ ವಿಧಾನಗಳೊಂದಿಗೆ ಮಾತೆ ದೇಯಿ ಬೈದ್ಯೆತಿ ಬಿಂಬ ಪ್ರತಿಷ್ಠೆ ಮಾಡಲಾಯಿತು. ಸಾಯನ ಬೈದ್ಯರ ಗುರುಪೀಠ ಸ್ಥಾಪನೆ ಮಾಡಲಾಯಿತು.

ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಲೀಲಾವತಿ ಅಮ್ಮ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಮಹಾಬಲ ಪೂಜಾರಿ, ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ ಹಾಗೂ ಉಲ್ಲಾಸ್‌ ಕೋಟ್ಯಾನ್‌, ಕೋಶಾಧಿಕಾರಿ ದೀಪಕ್‌ ಕೋಟ್ಯಾನ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ನರೇಶ್‌ ಕುಮಾರ್‌ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್‌, ಗಣ್ಯರಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್‌, ಚಿತ್ತರಂಜನ್‌, ರಕ್ಷಿತ್‌ ಶಿವರಾಮ್‌, ಸತ್ಯಜಿತ್‌ ಸುರತ್ಕಲ್‌, ದಯಾನಂದ್‌ ಬೋಂಟ್ರ, ಮುಂಬಯಿ ಟ್ರಸ್ಟ್‌ ಸದಸ್ಯರು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಪ್ರಮುಖರು, ಸಾವಿರಾರು ಭಕ್ತರು ಪಾಲ್ಗೊಂಡರು.

Advertisement

ಮೂಲಸ್ಥಾನ ಗರಡಿ ಪ್ರತಿಷ್ಠೆ
500 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೋಟಿ ಚೆನ್ನಯರಿಗೆ ಮೂಲಸ್ಥಾನ ಗರಡಿಯನ್ನು ಕ್ಷೇತ್ರದ ಶಿಖರಾಗ್ರದಲ್ಲಿ ನಿರ್ಮಿಸಲಾಗಿದ್ದು, ಜತೆಗೆ ಬೆರ್ಮೆರ್‌ ಗುಂಡ ತಲೆ ಎತ್ತಿದೆ. ಪೂರ್ವ ಮತ್ತು ಉತ್ತರಾಭಿಮುಖ ಬಾಗಿಲುಗಳನ್ನು ಹೊಂದಿದ್ದು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಮೂಲಸ್ಥಾನ ಗರಡಿಯ ಒಳಭಾಗದಲ್ಲಿನ ಸತ್ಯದ ನಡೆ ಸಹಿತದ ಗರ್ಭಗುಡಿಯಲ್ಲಿ ಗುರು ಸಾಯನ ಬೈದ್ಯರ ಕುಳಿತ ಭಂಗಿಯ ವಿಗ್ರಹ ಮತ್ತು ಅಕ್ಕಪಕ್ಕದಲ್ಲಿ ನಿಂತ ಭಂಗಿಯ ಕೋಟಿ-ಚೆನ್ನಯರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ತಪ್ಪಲಲ್ಲಿರುವ ಸತ್ಯಧರ್ಮ ಚಾವಡಿಯಿಂದ ಶಿಖರಾಗ್ರದ ಗರಡಿಯಿಂದ ತಪ್ಪಲಲ್ಲಿರುವ ಸತ್ಯಧರ್ಮ ಚಾವಡಿಗೆ ವಿಗ್ರಹಗಳನ್ನು ಚೆಂಡೆ, ವಾದ್ಯ ಮೇಳದೊಂದಿಗೆ ಕೊಂಡೊಯ್ಯಲಾಯಿತು.

ಗೆಜ್ಜೆಗಿರಿ ಕ್ಷೇತ್ರದಲ್ಲಿ ಇಂದಿನಿಂದ ನೇಮ
ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ ಲ್‌ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವು ಶುಕ್ರವಾರಕ್ಕೆ ಮುಕ್ತಾಯಗೊಂಡಿದ್ದು, ಶನಿವಾರದಿಂದ ನೇಮ ನಡೆಯಲಿದೆ.
ಫೆ. 29ರ ಬೆಳಗ್ಗೆ ಮಹಾಮಾತೆ ದೇಯಿ ಬೈದ್ಯೆತಿ ಮಹಾ ಸಮಾಧಿಯಲ್ಲಿ ಆರಾಧನಾ ಮಹೋತ್ಸವ, ಅನಂತರ ಧೂಮಾವತಿ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕುಪ್ಪೆ ಪಂಜುರ್ಲಿ ಸಾನ್ನಿಧ್ಯದಲ್ಲಿ ಕಲಶ ಹೋಮ, ರಾತ್ರಿ ಕುಪ್ಪೆ ಪಂಜುರ್ಲಿ ನೇಮ, ಕಲ್ಲಾಲ್ದಾಯ ಕೋಲ, ರವಿವಾರ ಮುಂಜಾನೆ ಕೊರತಿ ದೈವದ ಕೋಲ ನಡೆಯಲಿದೆ.

ಧಾರ್ಮಿಕ ಸಭೆ
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಶುಭಾಸಂಶನೆ ಮಾಡಲಿದ್ದು, ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕ್ಷೇತ್ರದ ಆನುವಂಶಿಕ ಮೊಕ್ತೇಸರ ರವೀಂದ್ರ ಸುವರ್ಣ ಉಪಸ್ಥಿತರಿರಲಿದ್ದಾರೆ ಹಾಗೂ ಹಲವು ಮಂದಿ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಗೌರವಾರ್ಪಣೆ
ಬಡಗನ್ನೂರು ಗ್ರಾ.ಪಂ. ಸದಸ್ಯೆ ಸುಶೀಲಾ, ಶಿಲಾ ಸ್ತಪತಿಗಳಾದ ಲಮಾಣಿ ಕುಬೇರಪ್ಪ ಹಾಗೂ ಕುಪ್ಪು ಸ್ವಾಮಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ವೈವಿಧ್ಯ
ಅಪರಾಹ್ನ ಜಗದೀಶ್‌ ಆಚಾರ್ಯ ಪುತ್ತೂರು ಬಳಗದವರಿಂದ ಭಕ್ತಿ ರಸಮಂಜರಿ, ಮಂಗಳೂರು ಮಂತ್ರ ನಾಟ್ಯಕಲಾ ಗುರುಕುಲ ಪ್ರಸ್ತುತಪಡಿಸುವ ನಾಟ್ಯಮಂತ್ರಂ (ಶಾಸ್ತ್ರೀಯ ಮತ್ತು ಜನಪದ ನೃತ್ಯ ವೈಭವ), ರಾತ್ರಿ ಗೆಜ್ಜೆಗಿರಿತ ಬೊಲ್ಪು – ತುಳು ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next