ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವಲಯದಲ್ಲಿ ಜಿಂಕೆ ಹಾಗೂ ಕಾಡುಕುರಿಗಳ ಸಾವಿಗೆ ಯೂರಿಯಾ ಅಥವಾ ಜಿಂಕ್ ಪಾಸ್ಪೇಟ್ ಮಿಶ್ರಿತ ನೀರು ಕುಡಿದಿರುವುದು ಕಾರಣವೇ? ಇಂತಹದೊಂದು ಅನುಮಾನದ ಮೇಲೆ ತನಿಖೆ ಮುಂದುವರಿದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಮೇವು- ನೀರನ್ನರಸಿ ಹೊರಬಂದ ಜಿಂಕೆ ಮತ್ತು ಕಾಡು ಕುರಿಗಳ ಹಿಂಡಿನ ಪೈಕಿ ಸೊಳ್ಳೆಪುರ ಎ ಬೀಟ್‌ನ ಕೆಂಪನಾಯಕನ ಹೆಬ್ಬಳ್ಳದಲ್ಲಿ ನೀರು ಕುಡಿದು, ಅಂದಾಜು 3 ರಿಂದ ಮೂರುವರೆ ವರ್ಷ ಪ್ರಾಯದ ಐದು ಹೆಣ್ಣು ಜಿಂಕೆಗಳು ಹಾಗೂ ಅಂದಾಜು ಎರಡೂವರೆಯಿಂದ 3 ವರ್ಷ ಪ್ರಾಯದ 3 ಗಂಡು ಮತ್ತು 4 ಹೆಣ್ಣು ಕಾಡು ಕುರಿಗಳು ಸಾವನ್ನಪ್ಪಿದ್ದು, ವನ್ಯಪ್ರಾಣಿಗಳ ಈ ಸಾವಿಗೆ ಹೆಬ್ಬಳ್ಳದ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿರಬಹುದೇ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಹಳ್ಳದ ನೀರಿನಲ್ಲಿ ಕೊರಮ ಮೀನುಗಳು ಜೀವಂತವಾಗಿರುವುದು ಈ ಶಂಕೆಯನ್ನು ದೂರ ಮಾಡಿವೆ. ಜತೆಗೆ ಸಾವನ್ನಪ್ಪಿದ ಜಿಂಕೆ ಮತ್ತು ಕಾಡುಕುರಿಗಳ ಮರಣೋತ್ತರ ಪರೀಕ್ಷೆ ವೇಳೆ ವಿಷದ ವಾಸನೆ ಕಂಡುಬಂದಿಲ್ಲ ಎನ್ನಲಾಗಿದೆ.
ಅಲ್ಲದೆ ನೀರು ಕಲುಷಿತವಾಗಿದ್ದರೂ ಅದನ್ನು ಕುಡಿದ ತಕ್ಷಣ ಪ್ರಾಣಿಗಳು ಸಾವನ್ನಪ್ಪುವುದಿಲ್ಲ. ಬದಲಿಗೆ ಅನಾರೋಗ್ಯಪೀಡಿತವಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಆದರೆ, ಈ ಪ್ರಕರಣದಲ್ಲಿ ಹೆಬ್ಬಳದಿಂದ ಮೂರ್‍ನಾಲ್ಕು ಅಡಿ ದೂರದಲ್ಲಿ ಜಿಂಕೆ ಮತ್ತು ಕಾಡು ಕುರಿಗಳು ಮೃತಪಟ್ಟಿರುವುದು ಹೆಬ್ಬಳ್ಳದ ನೀರಿನಲ್ಲಿ ಯೂರಿಯಾ ಇಲ್ಲವೇ ಜಿಂಕ್ ಪಾಸ್ಪೇಟ್ ಬೆರೆತಿರುವ ನೀರು ಕುಡಿದು ಎಂಬ ಅನುಮಾನ ವ್ಯಕ್ತವಾಗಿದೆ. ಸಮೀಪದಲ್ಲೇ ಶುಂಠಿ ಬೆಳೆಯಲಾಗಿದ್ದು, ಶುಂಠಿಗದ್ದೆಗೆ ಸ್ಪಿ$ಂಕ್ಲರ್‌ನಲ್ಲಿ ನೀರು ಹಾಯಿಸುವುದರಿಂದ ಸುತ್ತಮುತ್ತ ಸ್ವಲ್ಪ ಪ್ರಮಾಣದಲ್ಲಿ ಗರಿಕೆ ಬೆಳೆದಿದ್ದು, ಅದನ್ನು ತಿನ್ನಲ್ಲು ಈ ವನ್ಯಪ್ರಾಣಿಗಳು ಬಂದಿರುವ ಸಾಧ್ಯತೆ ಇದೆ. ಜಿಂಕೆಗಳು ಗುಂಪು ಗುಂಪಾಗಿ ಬರುವುದು ಸಹಜ, ಆದರೆ, ಕಾಡು ಕುರಿಗಳು ಗುಂಪಾಗಿ ಬರುವ ಸಾಧ್ಯತೆ ಕಡಿಮೆ. ಇಲ್ಲಿ 7 ಕಾಡುಕುರಿಗಳು ಸಾವನ್ನಪ್ಪಿರುವುದು ಸಹ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತಷ್ಟು ಅನುಮಾನ ಮೂಡಿಸಿದೆ.
ಶುಂಠಿ ಬೆಳೆಗೆ ಬಳಸಿದ ಯೂರಿಯಾ, ಜಿಂಕ್ ಪಾಸ್ಪೇಟ್‌ನ ಖಾಲಿ ಚೀಲಗಳನ್ನು ಹೆಬ್ಬಳದ ನೀರಿನಲ್ಲಿ ತೊಳೆದಿದ್ದು, ಕಡಿಮೆ ನೀರಿನಲ್ಲಿ ಗೊಬ್ಬರದ ಅಂಶ ಬೆರೆತಿರುವುದರಿಂದ ಜಿಂಕೆ, ಕಾಡುಕುರಿಗಳು ಈ ನೀರು ಕುಡಿದು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾವನ್ನಪ್ಪಿದ ಜಿಂಕೆ ಮತ್ತು ಕಾಡು ಕುರಿಗಳ ಮರಣೋತ್ತರ ಪರೀಕ್ಷೆ ನಂತರ ಹೊಟ್ಟೆ, ಕರುಳಿನ ಭಾಗ ಹಾಗೂ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದ್ದು, ನೀರು ಸೇರಿದಂತೆ ಪ್ರತಿ ಪ್ರಾಣಿಯ ಸುಮಾರು 6 ರಿಂದ 7 ಮಾದರಿಗಳನ್ನು ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ಶನಿವಾರ ಈ ಎಲ್ಲ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಿದ್ದಾರೆ.
ಜಿಂಕೆ ಮತ್ತು ಕಾಡುಕುರಿಗಳ ಸಾವಿಗೆ ಹೆಬ್ಬಳ್ಳದ ನೀರಿಗೆ ವಿಷ ಬೆರೆತಿರುವ ಅನುಮಾನದ ಮೇರೆಗೆ ಎಚ್.ಡಿ.ಕೋಟೆ ವಲಯ ಅರಣ್ಯಾಧಿಕಾರಿ ಮಧು ಅವರು ನೀಡಿದ ದೂರಿನ ಮೇರೆಗೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎನ್ನುತ್ತಾರೆ ಎಚ್.ಡಿ.ಕೋಟೆ ಠಾಣೆ ಇನ್ಸ್‌ಪೆಕ್ಟರ್ ಅಶೋಕ್.