ಎಚ್.ಡಿ.ಕೋಟೆ: ಜಿಂಕೆ ಚರ್ಮ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯೋರ್ವನನ್ನು ಕೊಡಗು ಜಿಲ್ಲೆ ವಿರಾಜಪೇಟೆ ಅರಣ್ಯ ಸಂಚಾರಿ ದಳ ಮತ್ತು ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಕಾರಾಪುರ ಗ್ರಾಮದ ಶ್ರೀನಿವಾಸ(27) ಬಂಧಿತ ಆರೋಪಿಯಾಗಿದ್ದು, ಮತ್ತೋರ್ವ ಆರೋಪಿ ತಾಲೂಕಿನ ಕೆ.ಎಡತೋರೆ ಗ್ರಾಮದ ಪ್ರಸನ್ನ ತಲೆಮರೆಸಿಕೊಂಡಿದ್ದಾನೆ.
ಘಟನೆ ವಿವರ: ತಾಲೂಕಿನ ಕಾರಾಪುರದ ಶ್ರೀನಿವಾಸ ಹಾಗೂ ಆತನ ಭಾಮೈದ ಕೆ.ಎಡತೋರೆ ಗ್ರಾಮದ ಪ್ರಸನ್ನ ಸೇರಿ ತಮ್ಮ ಬಜಾಜ್ ಸಿ.ಟಿ.100 ಬೈಕ್‌ನಲ್ಲಿ ಜಿಂಕೆ ಚರ್ಮವನ್ನು ಮಾರಾಟ ಮಾಡಲು ಮುಂದಾಗಿರುವ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ಅರಣ್ಯ ಸಂಚಾರಿ ದಳ ಹಾಗೂ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕೆ.ಎಡತೋರೆ ಗ್ರಾಮದ ದೇವಸ್ಥಾನದ ಬಳಿ ಜಿಂಕೆ ಚರ್ಮ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಮತ್ತೋರ್ವ ಆರೋಪಿ ಪ್ರಸನ್ನ ತಪ್ಪಿಸಿಕೊಂಡಿದ್ದು, ಬಂಧನಕ್ಕೆ ಬಲೆ ಬಿಸಿದ್ದಾರೆ.
ಸೆರೆ ಸಿಕ್ಕ ಆರೋಪಿ ಶ್ರೀನಿವಾಸನನ್ನು ತೀವ್ರ ವಿಚಾರಣೆಗೊಳಪಡಿಸಿದ ನಂತರ ಪಟ್ಟಣದ ಸಿಜೆಎಂಸಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳ ಪಡಿಸಿದ್ದಾರೆ. ಕಾರ್ಯಚರಣೆಯಲ್ಲಿ ವಿರಾಜಪೇಟೆ ಅರಣ್ಯ ಸಂಚಾರಿ ದಳದ ಟಿ.ಪಿ.ಮಂಜುನಾಥ್, ಕೆ.ಬಿ.ಸೋಮಣ್ಣ, ಎಂ. ಬಿ. ಗಣೇಶ್, ಪಿ.ಬಿ.ಮೊಣ್ಣಪ್ಪ, ಸಿ.ಎಂ.ರೇವಪ್ಪ ಹಾಗೂ ಮೈಸೂರು ಅರಣ್ಯ ಸಂಚಾರಿ ದಳದ ರಮೇಶ್, ವೆಂಕಟಚಲಯ್ಯ, ಮಂಜುನಾಥ್, ಪ್ರದೀಪ್, ಚಲುವರಾಜ್, ರಘು, ನರಸಿಂಹಮೂರ್ತಿ ಇದ್ದರು.