ಗೋಲ್ಡ್‌ಕೋಸ್ಟ್: ಭಾರತದ ಸ್ಟಾರ್ ಸ್ಕ್ವಾಷ್ ಆಟಗಾರ್ತಿ, ಗ್ಲಾಸೊ ಡಬಲ್ಸ್ ಚಾಂಪಿಯನ್ ದೀಪಿಕಾ ಪಳ್ಳಿಕಲ್ ಕಾಮನ್ವೆಲ್ತ್ ಗೇಮ್ಸ್ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.
26ರ ಹರೆಯದ ದೀಪಿಕಾ ಕಳೆದ ಗ್ಲಾಸೊYà ಕಾಮನ್ವೆಲ್ತ್ ಗೇಮ್ಸ್ ಡಬಲ್ಸ್‌ನಲ್ಲಿ ಜೋಶ್ನಾ ಚಿನ್ನಪ್ಪ ಜತೆಗೂಡಿ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಸ್ಕ್ವಾಷ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಬಂಗಾರ ಇದಾಗಿತ್ತು.
2015ರಲ್ಲಿ ದೀಪಿಕಾ ಅವರು ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರನ್ನು ಮದುವೆಯಾದದ್ದು ದೇಶಾದ್ಯಂತ ಕ್ರೀಡಾಭಿಮಾನಿಗಳ ಗಮನ ಸೆಳೆದಿತ್ತು. ಈ ಬೆನ್ನಲ್ಲೇ “ನಾನು ಕ್ರಿಕೆಟನ್ನು ದ್ವೇಷಿಸುತ್ತೇನೆ’ ಎನ್ನುವ ದೀಪಿಕಾರ ಹೇಳಿಕೆಯೂ ಅಷ್ಟೇ ದೊಡ್ಡ ಮಟ್ಟದಲ್ಲಿ ದೇಶಾದ್ಯಂತ ಸುದ್ದಿಯಾಗಿತ್ತು.
ಚಿನ್ನವನ್ನು ಉಳಿಸಿಕೊಳ್ಳುವ ಸಲುವಾಗಿ ಗೋಲ್ಡ್‌ಕೋಸ್ಟ್‌ಗೆ ಬಂದಿಳಿದಿರುವ ದೀಪಿಕಾ ಸುದ್ದಿಗಾರರೊಂದಿಗೆ ಮಾತನಾಡಿ, “ಉಳಿದೆಲ್ಲ ಕ್ರೀಡೆಗಳು ಕ್ರಿಕೆಟ್‌ನಿಂದಾಗಿ ಮೂಲೆಗುಂಪಾಗುತ್ತಿರುವುದಾಗಿ ಭಾವಿಸಿ ನಾನು ಹಾಗೆ ಹೇಳಿದೆ’ ಎಂದಿದ್ದಾರೆ.
ದೀಪಿಕಾ ಅವರಿಗೆ ಮೊದಲ ಸುತ್ತಿನ ಬೈ ಲಭಿಸಲಿದ್ದು, ಟ್ರನಿಡಾಡ್ ಮತ್ತು ಟೊಬಾಗೋ ಆಟಗಾರ್ತಿ ಷಾರ್ಲೆಟ್ ನಾಗ್ಸ್ ವಿರುದ್ಧ ಗುರುವಾರ ಮೊದಲ ಸವಾಲು ಸ್ವೀಕರಿಸಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಸೌರವ್ ಘೋಷಾಲ್ ಜತೆ ಕಣಕ್ಕಿಳಿಯಲಿದ್ದಾರೆ.