ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ನಂಟಿನ ಕುರಿತು ಶನಿವಾರ (ಸೆಪ್ಟೆಂಬರ್ 26, 2020) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಬಾಲಿವುಡ್ ಡ್ರಗ್ಸ್ ಜಾಲದ ನಂಟಿನ ಕುರಿತು ಈಗಾಗಲೇ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಈಗಾಗಲೇ ಎನ್ ಸಿಬಿ ಎರಡನೇ ದಿನವಾದ ಶನಿವಾರ ಕೂಡಾ ವಿಚಾರಣೆ ನಡೆಸಿತ್ತು. ಮತ್ತೊಂದೆಡೆ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಕಸ್ಟಡಿಯನ್ನು ಅಕ್ಟೋಬರ್ 6ರವರೆಗೆ ವಿಸ್ತರಿಸಲಾಗಿದೆ.
ನಾನು ಕೇಳಿದ್ದ ಮಾಲು ಅದಲ್ಲ:
ಡ್ರಗ್ಸ್ ಜಾಲದ ನಂಟಿನ ಕುರಿತು ಎನ್ ಸಿಬಿ ಅಧಿಕಾರಿಗಳು ದೀಪಿಕಾ ಪಡುಕೋಣೆಯನ್ನು ಬರೋಬ್ಬರಿ ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೇ ಕರಿಷ್ಮಾ ಪ್ರಕಾಶ್ ಜತೆಗೆ ನಡೆಸಿರುವ ಚಾಟ್ಸ್ ಬಗ್ಗೆ ದೀಪಿಕಾ ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ. ಆದರೆ ತಾನು ಕೇಳಿರುವ ಮಾಲು “ಡ್ರಗ್ಸ್” ಅಲ್ಲ ಸಿಗರೇಟ್ ಎಂದು ಹೇಳಿರುವುದಾಗಿ ಮೂಲಗಳು ವಿವರಿಸಿವೆ.
ಟೈಮ್ಸ್ ನೌ ವರದಿ ಪ್ರಕಾರ, ಡ್ರಗ್ಸ್ ಜಾಲದ ನಂಟಿನ ಬಗ್ಗೆ ದೀಪಿಕಾ ಪಡುಕೋಣೆ ನೀಡಿರುವ ಹೇಳಿಕೆ ಎನ್ ಸಿಬಿ ಅಧಿಕಾರಿಗಳಿಗೆ ತೃಪ್ತಿ ತಂದಿಲ್ಲ. ಈ ನಿಟ್ಟಿನಲ್ಲಿ ಆಕೆಯನ್ನು ಮತ್ತೆ ವಿಚಾರಣೆಗೆ ಗುರಿಪಡಿಸಬೇಕಾದ ಅಗತ್ಯತೆ ಇದೆ ಎಂದು ವರದಿ ಹೇಳಿದೆ.
ಕರಿಷ್ಮಾ ಪ್ರಕಾಶ್ ಜತೆಗೆ ನಡೆಸಿದ ಡ್ರಗ್ಸ್ ಚಾಟ್ ಕುರಿತು ಎನ್ ಸಿಬಿ ಅಧಿಕಾರಿಗಳು ದೀಪಿಕಾ ಪಡುಕೋಣೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಐದು ಮಂದಿಯ ತಂಡ ದೀಪಿಕಾ ಪಡುಕೋಣೆಯನ್ನು ವಿಚಾರಣೆಗೆ ಒಳಪಡಿಸಿದೆ. ವಿಚಾರಣಾ ತಂಡದಲ್ಲಿ ಮಹಿಳಾ ಅಧಿಕಾರಿಗಳು ಇದ್ದಿರುವುದಾಗಿ ವರದಿ ವಿವರಿಸಿದೆ. ವಿಚಾರಣೆ ವೇಳೆ ದೀಪಿಕಾ ಮೊಬೈಲ್ ಫೋನ್ ಅನ್ನು ದೂರ ಇಡುವಂತೆ ಸೂಚಿಸಲಾಗಿತ್ತು ಎಂದು ವರದಿ ತಿಳಿಸಿದೆ.