Advertisement
ತಂತ್ರಜ್ಞಾನ ಮುಂದುವರಿದಂತೆ ಅದರಿಂದ ಉಂಟಾಗುವ ಅಪಾಯಗಳೂ ಹೆಚ್ಚಾಗುತ್ತವೆ. ಪ್ರತೀ ತಂತ್ರಜ್ಞಾನದ ಅನ್ವೇಷಣೆ ವೇಳೆಯಲ್ಲಿ ಇಂಥ ಆತಂಕಗಳು ಎದುರಾಗಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದು ವಾಡಿಕೆಯಾಗಿದೆ. ಆದರೆ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ತಂತ್ರಜ್ಞಾನ ಬೆಳವಣಿಗೆಯಾದ ಮೇಲೆ ಯಾರ ನಿಯಂತ್ರಣಕ್ಕೂ ಸಿಗದ ರೀತಿಯಲ್ಲಿ ಇದು ಮುಂದುವರಿದು ಬಿಟ್ಟಿದೆ. ಅದರಲ್ಲೂ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್, ಅದಕ್ಕೆ ತಕ್ಕಂತೆ ಅಂತರ್ಜಾಲ ವ್ಯವಸ್ಥೆಯೂ ಬೆಳೆದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಡೀಪ್‌ಫೇಕ್ ಅಥವಾ ಮುಖ ನಕಲು ಮಾಡುವಂಥ ಅಸಂಖ್ಯಾತ ಆ್ಯಪ್‌ಗಳೂ ಇವೆ. ಇಲ್ಲಿ ಯಾರ ದೇಹಕ್ಕೆ, ಬೇರೆಯವರ ಮುಖವನ್ನು ಆರಾಮವಾಗಿ ಜೋಡಿಸಬಹುದು.
ಇಂಥ ತಂತ್ರಜ್ಞಾನಗಳು ಪ್ರಧಾನಮಂತ್ರಿಯಂಥ ಹುದ್ದೆಯಲ್ಲಿ ಇರುವವರನ್ನೂ ಸಂತ್ರಸ್ತರನ್ನಾಗಿ ಮಾಡುತ್ತವೆ ಎಂದರೆ ಅಪಾಯದ ಅರಿವು ಎಲ್ಲರಿಗೂ ಮೂಡಲೇ ಬೇಕು. ಹೀಗಾಗಿ ಕೇಂದ್ರ ಸರಕಾರ ಇವುಗಳ ನಿಯಂತ್ರಣ ನಿಟ್ಟಿನಲ್ಲಿ ಗಟ್ಟಿ ಹೆಜ್ಜೆಯನ್ನು ಇಟ್ಟಿದೆ. ಇನ್ನು 10 ದಿನಗಳಲ್ಲಿ ನಿಯಂತ್ರಣ ನಿಯಮ ಜಾರಿಗೆ ತರುವುದಾಗಿ ಸ್ವತಃ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರೇ ಹೇಳಿದ್ದಾರೆ. ಅಲ್ಲದೆ ಇವುಗಳನ್ನು ಗುರುತಿಸಿ, ತೆಗೆಯುವಂಥ ತಂತ್ರಜ್ಞಾನವನ್ನು ರೂಪಿಸಿಕೊಳ್ಳಲು ಸಾಮಾಜಿಕ ಜಾಲ ಸಂಸ್ಥೆಗಳಿಗೂ ಹೇಳಿದ್ದಾರೆ.
ಏನೇ ಆಗಲಿ, ಇಂಥ ತಂತ್ರಜ್ಞಾನ ಬಳಸಿ ಬೇರೊಬ್ಬರ ವ್ಯಕ್ತಿತ್ವ ಹಾಳು ಮಾಡುವಂಥವರಿಗೆ ಕಠಿನ ಶಿಕ್ಷೆಯಾಗಬೇಕು. ಯಾರೊಬ್ಬರೂ ಡೀಪ್‌ಫೇಕ್‌ನಂಥ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ಚಿಂತನೆ ನಡೆಸಬೇಕಾದದ್ದು ಇಂದಿನ ದಿನದಲ್ಲಿ ಅತ್ಯಗತ್ಯವಾಗಿದೆ.