ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ(ಎಐ) ಎಂಬ ತಂತ್ರಜ್ಞಾನವು ನಮ್ಮೆಲ್ಲರ ಕಲ್ಪನೆಗೂ ಮೀರಿ ಬೆಳೆಯುತ್ತಿದೆ. ಏನೆಲ್ಲ ಅಸಾಧ್ಯ ಎಂದು ಭಾವಿಸಲಾಗಿತ್ತೋ, ಅವೆಲ್ಲವನ್ನೂ ಈ ತಂತ್ರಜ್ಞಾನ ಸಾಧಿಸುತ್ತಿದೆ. ಮತ್ತೊಂದು ಕಡೆ, ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ಕರಾಳ ಮುಖವೊಂದು ಬಹಿರಂಗಗೊಂಡಿದೆ.
ಕೆಲವು ದುರುಳರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು “ಡೀಪ್ ಫೇಕ್ ಪೋರ್ನ್’ ವಿಡಿಯೋಗಳನ್ನು ತಯಾರಿಸುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ.
ಡೀಪ್‌ಫೇಕ್ ಎಂದರೆ, ಡಿಜಿಟಲ್ ಮಾದರಿಯಲ್ಲಿ ಸೃಷ್ಟಿಸಿ, ಕೃತಕ ಬುದ್ಧಿಮತ್ತೆಯಿಂದ ತಿರುಚಲಾಗುವ ಚಿತ್ರಗಳು ಮತ್ತು ವಿಡಿಯೋಗಳು. ಈ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ವಿಡಿಯೋಗಳು ಹಾಗೂ ಚಿತ್ರಗಳು ಕೆಲವು ವರ್ಷಗಳ ಹಿಂದೆಯೇ ಭಾರೀ ಸದ್ದು ಮಾಡಿತ್ತು. ತಮ್ಮ ವಿರೋಧಿಗಳನ್ನು ಹಣಿಯಲು ಇಂತಹ ತಿರುಚಿದ ಫೋಟೋ, ವಿಡಿಯೋಗಳನ್ನು ಕೆಲವರು ಬಳಸುತ್ತಿರುವುದು ಬೆಳಕಿಗೆ ಬಂದಿತ್ತು.
ಈಗ ಎಐ ತಂತ್ರಜ್ಞಾನದ ಸಹಾಯದಿಂದ “ಡೀಪ್ ಫೇಕ್ ಅಶ್ಲೀಲ ಚಿತ್ರ’ಗಳನ್ನು ತಯಾರಿಸಲಾಗುತ್ತಿದೆ. ಸಿನಿಮಾ ನಟಿಯರು, ಆನ್‌ಲೈನ್ ಇನ್‌ಫೂಯೆನ್ಸರ್‌ಗಳು, ಪತ್ರಕರ್ತರು, ಸಾರ್ವಜನಿಕವಾಗಿ ಹೆಚ್ಚು ಗುರುತಿಸಲ್ಪಟ್ಟವರು ಮಾತ್ರವಲ್ಲ, ಆನ್‌ಲೈನ್‌ನಲ್ಲಿ ಸಿಗುವ ಹೆಣ್ಣುಮಕ್ಕಳ ಫೋಟೋಗಳನ್ನು ಬಳಸಿಕೊಂಡು ನೀಲಿಚಿತ್ರ ತಾರೆಯರ ದೇಹಕ್ಕೆ ಈ ಫೋಟೋಗಳಲ್ಲಿರುವ ಮುಖವನ್ನು ಅಂಟಿಸಿ, “ಡೀಪ್‌ಫೇಕ್ ನೀಲಿಚಿತ್ರ’ಗಳನ್ನು ಸೃಷ್ಟಿಸಲಾಗುತ್ತಿದೆ.
ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಯಾರು ಬೇಕಿದ್ದರೂ ತಮ್ಮ ವಿರೋಧಿಗಳ, ಮಾಜಿ ಪ್ರೇಯಸಿ/ಪ್ರಿಯತಮರ, ತಮ್ಮ ಶತ್ರುಗಳ ಫೋಟೋಗಳನ್ನು ಬಳಸಿಕೊಂಡು ಈ ರೀತಿಯ ವಿಡಿಯೋ ಸೃಷ್ಟಿಸಿ ಬೆದರಿಕೆ ಹಾಕಬಹುದು, ಬ್ಲ್ಯಾಕ್‌ಮೇಲ್ ಮಾಡಬಹುದು ಅಥವಾ ವಿಕೃತಿ ಮೆರೆಯಬಹುದು ಎಂಬ ಆತಂಕ ಶುರುವಾಗಿದೆ.