ಉಡುಪಿ/ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಖರೀದಿಯೂ ಜೋರಾಗಿದೆ.
ದೀಪಾವಳಿ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ತೈಲಾಭ್ಯಂಗ, ಬಳಿಕ ಮಹಾಪೂಜೆ, ರಾತ್ರಿ ಬಲೀಂದ್ರ ಪೂಜೆ, ಕೊಲ್ಲೂರು, ಮಂದಾರ್ತಿ ಮೊದಲಾದ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳು ನೆರವೇರಿದವು.
ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ತುಳಸಿ ಪೂಜೆ, ಬಲೀಂದ್ರ ಪೂಜೆ, ರಂಗಪೂಜೆ ನಡೆದವು. ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಬಲೀಂದ್ರ ಪೂಜೆ, ಮಂಟಪ ಪೂಜೆ ನಡೆದು, ಪಲ್ಲಕ್ಕಿ ಉತ್ಸವ ಆರಂಭಗೊಂಡಿತು. ಶುಕ್ರವಾರ ಬೆಳಗ್ಗೆ 8.30ಕ್ಕೆ ಸಾರ್ವಜನಿಕ ಗೋಪೂಜೆ ನಡೆಯಲಿದೆ. ಬಲಿಪಾಡ್ಯಮಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 5ರಂದು “ಯಶಸ್ವಿ’ಗೆ ಗಜಲಕ್ಷ್ಮೀ ಪೂಜೆ ನಡೆಯಲಿದೆ. ಜತೆಗೆ ಗೋ ಪೂಜೆ ನಡೆಯಲಿದೆ.
ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ದೀಪಾವಳಿ ಸಂದರ್ಭ ಬಲಿ ಉತ್ಸವ ಆರಂಭಗೊಂಡಿದ್ದು, ಗುರುವಾರ ಸಂಜೆ ಉಳಿಪ್ಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ, ದೊಡ್ಡ ರಂಗಪೂಜೆ ನಡೆದು ಶ್ರೀ ಸುಬ್ರಹ್ಮಣ್ಯ ದೇವರ ಬಲಿ ಉತ್ಸವ, ಉತ್ಸವಾದಿಗಳು ಆರಂಭಗೊಂಡವು. ಮುಂದೆ ಪತ್ತನಾಜೆಯವರೆಗೆ ಬಲಿ ಉತ್ಸವ ನಡೆಯುತ್ತದೆ. ಜತೆಗೆ ದೀಪಾವಳಿಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಲೀಂದ್ರ ಪೂಜೆ, ನ. 5ರಂದು ಸಂಜೆ 5.30ಕ್ಕೆ ಗೋಪೂಜೆಗಳು ನಡೆಯಲಿವೆ. ಇನ್ನುಳಿದಂತೆ ಉಭಯ ಜಿಲ್ಲೆಗಳ ಪ್ರಮುಖ ದೇವಾಲಯಗಳಲ್ಲಿ ದೀಪಾವಳಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೀಪಾವಳಿಯ ಹಿನ್ನೆಲೆಯಲ್ಲಿ ಹೂವು, ಹಣ್ಣು, ಪಟಾಕಿ, ಗೂಡುದೀಪ, ಹಣತೆಗಳ ಖರೀದಿ ಹೆಚ್ಚಾಗಿತ್ತು. ಹಬ್ಬದ ಕಾರಣ ಮನೆಗಳು, ವಾಣಿಜ್ಯ ಕಟ್ಟಡಗಳು ವಿದ್ಯುತ್‌ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು.
ಮಳೆ ಅಡ್ಡಿ, ಟ್ರಾಫಿಕ್ ಜಾಮ್:
ಮಳೆಯಿಂದಾಗಿ ಹಲವೆಡೆ ಹಬ್ಬದ ವಾತಾವರಣಕ್ಕೆ ಅಡ್ಡಿಯಾಯಿತು. ಸತತ ರಜೆ ಇರುವ ಕಾರಣ ವಾಹನ ಸಂಚಾರ ಹೆಚ್ಚಿಗೆಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇಂದು ಗೋಪೂಜೆ:
ಶುಕ್ರವಾರ ಗೋಪೂಜೆ ನಡೆಯಲಿದೆ. ಮುಜರಾಯಿ ದೇವಸ್ಥಾನಗಳಲ್ಲಿ ಸಂಜೆ 5.30ರಿಂದ 6.30ರ ವರೆಗೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ನೆರವೇರಲಿದೆ. ಅದೇ ರೀತಿ ಸಾರ್ವಜನಿಕರು ತಮ್ಮ ಮನೆಗಳಲ್ಲಿಯೂ ಗೋವಿಗೆ ಪೂಜೆ ನಡೆಸುವ ಸಂಪ್ರದಾಯವಿದೆ. ವಿವಿಧ ಸಂಘ-ಸಂಸ್ಥೆಗಳು ಕೂಡ ಗೋಪೂಜೆ ಹಮ್ಮಿಕೊಂಡಿವೆ.