Advertisement

ದೀಪಾವಳಿ ಶಾಪಿಂಗ್ : ದೀಪಾವಳಿ ತರಲಿ ಖರೀದಿಯ ಸಂಭ್ರಮ

09:52 AM Oct 26, 2019 | Hari Prasad |

ಸಾಮಾನ್ಯ ಜನರಿಗಷ್ಟೇ ಅಲ್ಲ ಬಡತನ ಸಿರಿತನದ ಹಂಗಿಲ್ಲದೇ ಎಲ್ಲ ವರ್ಗದವರಿಗೂ ವರ್ಷದ ಅತಿದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಇತರ ಹಬ್ಬಗಳನ್ನು ಆಡಂಬರ ಮತ್ತು ಹುರುಪಿನಿಂದ ಆಚರಿಸದಿದ್ದರೂ ಸಹ, ದೀಪಾವಳಿಯಂದು ಎಲ್ಲಾ ಅಡೆತಡೆಗಳನ್ನು ದಾಟಲು ಬಯಸುತ್ತದೆ ಮನ. ಸಂಪತ್ತು, ಶಾಂತಿ ಹಾಗೂ ಸಮೃದ್ಧಿಯ ಸಂಕೇತ ಲಕ್ಷ್ಮೀ ದೇವಿ, ಭೂದೇವಿ, ಗೋಮಾತೆ, ತುಳಸೀ ದೇವಿ ಎಂದು ವಿವಿಧ ದೇವತೆಗಳ ಆರಾಧನೆ ಮಾಡುವ ದೀಪಾವಳಿ ಹಬ್ಬದಂದು ಮನೆಮನಗಳಲ್ಲಿ ಸಂಪತ್ತು, ಸಮೃದ್ಧಿಯ ಬೆಳಕು ಚೆಲ್ಲಲಿ ಎಂದು ಆಚರಿಸಲಾಗುತ್ತದೆ. ದೀಪಾವಳಿ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿರದ ಹಬ್ಬವಾಗಿ ಎಲ್ಲ ವರ್ಗದವರೂ ಆಚರಿಸುತ್ತಿರುವ ಸಾರ್ವತ್ರಿಕ ಹಬ್ಬವಾಗಿ ಮಾರ್ಪಾಡಾಗಿದೆ.

Advertisement

ಸಿದ್ಧತೆ
ದೀಪಾವಳಿಗೆ ಶಾಪಿಂಗ್‌ ಕೊಡುಗೆಗಳು ಭರ್ಜರಿಯಾಗಿರುತ್ತದೆ. ಆ ಕಾರಣದಿಂದ ಗೃಹೋಪಯೋಗಿ ಉಪಕರಣಗಳನ್ನು ಅಪ್‌ಗ್ರೇಡ್‌ ಮಾಡುವುದರಿಂದ ತೊಡಗಿ ಹತ್ತಿರದ ಕುಟುಂಬದವರಿಗೆ ಬಟ್ಟೆ, ಆಭರಣಗಳು ಮತ್ತು ಉಡುಗೊರೆಗಳಾಗಿ ಶಾಪಿಂಗ್‌ ಮಾಡುವವರೆಗೆ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅತಿಥಿಗಳನ್ನು ಆಹ್ವಾನಿಸುವುದು, ಸಂತೋಷಕೂಟ ಆಯೋಜಿಸುವುದು, ಭೂರಿ ಭೋಜನ, ಪಟಾಕಿ ಸಿಡಿಸುವುದು, ಪುಣ್ಯ ಕ್ಷೇತ್ರಗಳಿಗೆ ಹೋಗುವುದು, ಬಂಧು ನೆಂಟರಿಷ್ಟರ ಮನೆಗೆ ಹೋಗುವುದು ಹೀಗೆ ವಿಭಿನ್ನವಾಗಿರಬಹುದು.

ದಿಢೀರ್‌ ಸಾಲ
ದೀಪಾವಳಿ ಆಚರಣೆಯನ್ನು ದೊಡ್ಡ ಮತ್ತು ಉಜ್ವಲವಾಗಿ ಮಾಡಲು ಅನೇಕ ಹಣಕಾಸು ಸಂಸ್ಥೆಗಳು ಮಾರುಕಟ್ಟೆಯಲ್ಲಿ ಮಳಿಗೆಗಳ ಜತೆ ಒಪ್ಪಂದ ಮಾಡಿಕೊಂಡು ದಿಢೀರ್‌ ಸಾಲ ನೀಡುತ್ತವೆ. ಇದು ದೀಪಾವಳಿಯನ್ನು ನಮ್ಮದೇ ಶೈಲಿಯಲ್ಲಿ ಆಚರಿಸಲು ನಿಮಗೆ ಅಗತ್ಯವಿರುವ ಎಲ್ಲಾ ಹಣಕಾಸಿನ ಸಹಾಯ ದೊರೆತಂತಾಗುತ್ತದೆ. ವೈಯಕ್ತಿಕ ಸಾಲವು ಕೊನೆ ಕ್ಷಣದಲ್ಲಿ  ಉಡುಗೊರೆಗಳಿಗಾಗಿ, ಮನೆಯ ಆದ್ಯತೆಗಾಗಿ ಶಾಪಿಂಗ್‌ ಮಾಡಲು, ಮನೆ ನವೀಕರಣ ಮಾಡಲು, ಅದ್ಭುತವಾದ ದೀಪಾವಳಿ ಕೂಟಗಳನ್ನು ಆಯೋಜಿಸಲು ನೆರವಾಗುತ್ತದೆ.

ಯೋಜನೆ ರೂಪಿಸಿ
ದೀಪಾವಳಿಗೆ ಏನೆಲ್ಲಾ ಮಾಡಬೇಕು ಎಂದು ಯೋಜನೆ ರೂಪಿಸಿ. ಹಬ್ಬಕ್ಕೆ ಮನೆ ಅಲಂಕಾರ ಹೇಗಿರಬೇಕು? ಹಬ್ಬದ ಅಡುಗೆ ಏನೇನು ಮಾಡಬೇಕು? ಮಗಳು ಮತ್ತು ಅಳಿಯನಿಗೆ ಅಥವಾ ಆಪ್ತೇಷ್ಟರಿಗೆ ಏನು ಉಡುಗೊರೆ ಕೊಡಬೇಕು? ಮನೆಗೆ ಏನು ಖರೀದಿಸಬೇಕು? ಒಟ್ಟು ಖರೀದಿಯ ಬಜೆಟ್‌ ಎಷ್ಟಿರಬೇಕು? ಮೊದಲಾದ ಯೋಜನೆಗಳನ್ನು ರೂಪಿಸಿಟ್ಟುಕೊಂಡರೆ ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಮಾಡಿ ನಿರಾತಂಕವಾಗಿ ಹಬ್ಬ ಆಚರಿಸಬಹುದು.

ದೀಪಾರಾಧನೆ
ದೀಪ ಆವಳಿ ಬಂದಾಗ ಎಲ್ಲಿ ನೋಡಿದರೂ ಬೆಳಕು.  ದೀಪಾವಳಿಯನ್ನು ಹೆಚ್ಚು ಸುಂದರವಾಗಿ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಆಯ್ಕೆಗಳ ಕೊರತೆಯಿಲ್ಲ. ಪರಿಸರಸ್ನೇಹಿ ಪಟಾಕಿಗಳು ಬಂದಿವೆ. ಚೀನೀ ದೀಪಗಳ ಬದಲಿಗೆ, ಸ್ಟೈಲಿಶ್‌ ದೀಪಗಳು, ಲ್ಯಾಂಟರ್ನ್ಗಳು, ಮನೆಮನೆಗಳಲ್ಲಿ ತಯಾರಿಸಿದ ಮಣ್ಣಿನ ದೀಪಗಳು ಜನರನ್ನು ಮನಸೂರೆಗೊಳಿಸುತ್ತಿವೆ. ಪಿಂಗಾಣಿ, ದೀಪಗಳು ಮತ್ತು ಮಣ್ಣಿನ ಆರಾಧನಾ ತಟ್ಟೆಯಂತಹ ಆಯ್ಕೆಗಳೊಂದಿಗೆ ದೀಪಾವಳಿಯನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಅವಕಾಶವಿದೆ.

Advertisement

ಶಾಪಿಂಗ್‌
ಶಾಪಿಂಗ್‌ ಮಾಡುವಾಗ ತುಂಬಾ ಎಚ್ಚರವಹಿಸಬೇಕು. ಅಂಗಡಿಗಳಲ್ಲಿ ಅನೇಕ ಹಬ್ಬದ ಆಫರ್‌ಗಳಿರುತ್ತವೆ. ಆಫರ್‌ ಇದೆ ಎಂದು ಕೊಂಡುಕೊಳ್ಳುವ ಮೊದಲು ಅವುಗಳ ಗುಣಮಟ್ಟ ಪರೀಕ್ಷಿಸಿ, ಬಜೆಟ್‌ನ ಒಳಗೆ ಶಾಪಿಂಗ್‌ ಮಾಡಿ. ಇಲ್ಲದಿದ್ದರೆ ತಿಂಗಳ ಕೊನೆಯಲ್ಲಿ ಹಣ ಖಾಲಿಯಾಗಿ ಪರದಾಡಬೇಕಾಗುತ್ತದೆ. ಶಾಪಿಂಗ್‌ಗೆ ಎಂದು ತೆಗೆದಿಟ್ಟ ಬಜೆಟ್‌ನಲ್ಲೇ ಖರೀದಿ ಮುಗಿಸಿ.

ಮನೆ ಅಲಂಕಾರ
ಮನೆ ಅಲಂಕಾರಕ್ಕೆ  ಖರ್ಚು ಮಾಡುವಾಗ ಮನೆಯಲ್ಲಿರುವ ವಸ್ತುಗಳಿಂದ ಅಲಂಕರಿಸಿದರೆ ಹಣ ಮಿಗುತ್ತದೆ. ನಂತರ ಹಣತೆಗಳಿಂದ ಮಿನುಗಿಸಬಹುದು. ದೀಪಗಳ ಸಾಲು ಬೆಳಗಿದಾಗ ಮನೆ ಆಕರ್ಷಕವಾಗಿ ಕಾಣುತ್ತದೆ.

ಸಜ್ಜಾಗುವ ಮಾರುಕಟ್ಟೆ
ಅನೇಕರ ಮನೆಗಳಲ್ಲಿ ದೊಡ್ಡ ಮಟ್ಟದ ಖರೀದಿ ಭರಾಟೆ ಇರುವಾಗ ಮಾರುಕಟ್ಟೆ ಅದರ ಸದುಪಯೋಗ ಪಡೆದುಕೊಳ್ಳುತ್ತದೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಖರೀದಿಗೆ ದೊಡ್ಡ ಪ್ರಮಾಣದ ಆಫ‌ರ್‌ಗಳ ಸುರಿಮಲೆ ಇದ್ದಂತೆಯೇ ಸ್ಥಳೀಯವಾಗಿ ಇನ್ನಷ್ಟು ಆಕರ್ಷಕ ಕೊಡುಗೆಗಳು ದೊರೆಯುತ್ತದೆ. ಹೀಗೆ ಸ್ಥಳೀಯವಾಗಿ ಖರೀದಿ ಮಾಡುವುದರಿಂದ ಅನೇಕರಿಗೆ ಉದ್ಯೋಗ, ವ್ಯಾಪಾರ ಒದಗಿಸಿ ಅವರ ಹಬ್ಬವನ್ನೂ ಇಮ್ಮಡಿಗೊಳಿಸಿದ ಸಂತಸ ನಮ್ಮದಾಗುತ್ತದೆ.

ಗಮನಿಸಿಕೊಳ್ಳಿ
ಹೆಚ್ಚು ರಿಯಾಯಿತಿ ಇರುವ ಕಡೆ ಹೆಚ್ಚು ಜನ  ಹೋಗುತ್ತಾರೆ. ಈ ಲೆಕ್ಕಾಚಾರದ ಆಧಾರದ ಮೇಲೆ ಯುಗಾದಿ, ಚೌತಿ, ದಸರಾ, ದೀಪಾವಳಿಗೆ ಅತ್ಯಂತ ಹೆಚ್ಚಿನ ರಿಯಾಯಿತಿಗಳನ್ನು ಕೊಡಲಾಗುತ್ತದೆ. ಎಲ್ಲಾ ವ್ಯಾಪಾರಿಗಳೂ, ಬ್ರಾಂಡ್‌ಗಳೂ ರಿಯಾಯಿತಿ ಘೋಷಿಸಿರುತ್ತವೆ. ಹಾಗೆ ರಿಯಾಯತಿ ಘೋಷಿಸಿದಾಗ ಅವರು ವಿಧಿಸುವ ಶರತ್ತುಗಳನ್ನೂ ಗಮನಿಸಿಕೊಳ್ಳಿ. ವಸ್ತುಗಳ ಗುಣಮಟ್ಟವನ್ನೂ ನೋಡಿಕೊಳ್ಳಿ. ಬೆಲೆಯ ವ್ಯತ್ಯಾಸವನ್ನೂ ಅರಿತುಕೊಳ್ಳಿ. ಆಗ ಹಬ್ಬದ ಸಂಭ್ರಮ ಶಾಪಿಂಗ್‌ ಮೂಲಕ ಖರೀದಿಸುವವರದ್ದಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next