Advertisement

ರಾಜಧಾನಿಗೆ ಮಾಲಿನ್ಯ ತಂದ ದೀಪವಾಳಿ ಹಬ್ಬ

11:43 AM Oct 21, 2017 | Team Udayavani |

ಬೆಂಗಳೂರು: ದೀಪಾವಳಿ ಹಬ್ಬದ ಪಟಾಕಿ ಸಿಡಿತದಿಂದ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ವರದಿಯಾಗಿದೆ. 

Advertisement

ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳಲ್ಲಿ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ನ್ಯಾಷನಲ್‌ ಆಂಬಿಯೆಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್ಸ್‌ (ಎನ್‌ಎಎಕ್ಯೂಎಸ್‌) ನಿಗದಿಪಡಿಸಿರುವ ಮಿತಿಗಿಂತಲೂ ಹೆಚ್ಚಿನ ಮಾಲಿನ್ಯ ಪ್ರಮಾಣ ವರದಿಯಾಗಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯ ದಿನಗಳಿಗಿಂತಲೂ ಕಳೆದ ಮೂರು ದಿನಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದು ಆತಂಕಕಾರಿ ವಿಚಾರವಾಗಿದೆ. 

ಎನ್‌ಎಎಕ್ಯೂಎಸ್‌ ಪ್ರಕಾರ ಗಂಧಕದ ಡೈಆಕ್ಸೆ„ಡ್‌(ಎಸ್‌ಒ2) ಹಾಗೂ ಸಾರಜನಕ ಡೈ ಆಕ್ಸೆ„ಡ್‌(ಎನ್‌ಒ2) ಪ್ರಮಾಣ ಪ್ರತಿ ಸಾವಿರ ಲೀಟರ್‌ ಗಾಳಿಯಲ್ಲಿ 80 ಮೈಕ್ರೋ ಗ್ರಾಂ ಇರಬೇಕು. ಅದೇ ರೀತಿ ಪರ್ಟಿಕ್ಯೂಲೇಟ್‌ ಮ್ಯಾಟರ್‌ (ಪಿಎಂ10) ಹಾಗೂ ಶ್ವಾಸಕೋಶಕ್ಕೆ ಭಾರಿ ಹಾನಿಯುಂಟು ಮಾಡುವ ಪಿಎಂ 2.5 ಪ್ರಮಾಣವನ್ನು 60 ಮೈಕ್ರೋ ಗ್ರಾಂಗಳಿಗಿಂತ ಹೆಚ್ಚಿರಬಾರದು ಎಂದು ಮಿತಿಗೊಳಿಸಲಾಗಿದೆ. 

ಮಾಲಿನ್ಯ ನಿಯಂತ್ರಣ ಮಂಡಳಿಯ ನಗರ ರೈಲು ನಿಲ್ದಾಣ, ಸಾಣೆ ಗುರುವನಹಳ್ಳಿ, ಕಾಡಬೀಸನಹಳ್ಳಿಯ ಜಲಮಂಡಳಿ ಕಚೇರಿ ಹಾಗೂ ಬಿಟಿಎಂ ಲೇಔಟ್‌ನಲ್ಲಿ ವಾಯುಮಾಲಿನ್ಯ ಮಿತಿ ಮೀರಿರುವುದು ದಾಖಲಾಗಿದೆ. ಅ.18 ರಿಂದ ಅ.20 ರವರೆಗಿನ ಮಾಹಿತಿಗಳನ್ನು ನೋಡಿದರೆ ಬಹುತೇಕ ಕೇಂದ್ರಗಳಲ್ಲಿ ಮಾಲಿನ್ಯ ಪ್ರಮಾಣ ಏರಿರುವುದು ಕಂಡುಬಂದಿದೆ.

ನಗರ ರೈಲು ನಿಲ್ದಾಣದ ಮಾಪನದಲ್ಲಿ ಅ.18ರಂದು ಪಿಎಂ-10 ಪ್ರಮಾಣ ಸರಾಸರಿ 193.60 ಮೈ.ಗ್ರಾಂ ದಾಖಲಾಗಿದೆ. ಉಳಿದಂತೆ ಅ.19ರಂದು 200.58 ಮೈ.ಗ್ರಾಂ ಹಾಗೂ ಅ.20 ರಂದು ರಾತ್ರಿ 8 ಗಂಟೆ ವೇಳೆಗೆ ದಾಖಲಾದ ಮಾಹಿತಿಯಂತೆ 198 ಮೈ.ಗ್ರಾಂ ದಾಖಲಾಗುವ ಮೂಲಕ ನಿಗದಿತ ಮಿತಿಗಿಂತ ದುಪ್ಪಟ್ಟು ದಾಖಲಾಗಿರುವುದು ಆಘಾತಕಾರಿ ವಿಷಯವಾಗಿದೆ. 

Advertisement

ಪಿಎಂ-10 ಪ್ರಮಾಣ ಹೆಚ್ಚಳ: ಉಳಿದಂತೆ ಸಾಣೆಗುರುವನಹಳ್ಳಿ ಅ.18 ರಂದು 96.99 ಮೈ.ಗ್ರಾಂ. ಹಾಗೂ ಅ.19 ರಂದು 120.12 ಮೈ.ಗ್ರಾಂ. ದಾಖಲಾಗಿದೆ. ಕಾಡುಬೀಸನಹಳ್ಳಿ ಜಲಮಂಡಳಿ ಕಚೇರಿಯಲ್ಲಿ ಅತ್ಯಂತ ಅಪಾಯಕಾರಿ ಧೂಳಿನ ಕಣಗಳಾದ ಪಿಎಂ-2.5 ಪ್ರಮಾಣ ಅ.20ರ ರಾತ್ರಿ 8 ಗಂಟೆಗೆ 95.06 ಮೈ.ಗ್ರಾಂ. ದಾಖಲಾಗುವ ಮೂಲಕ ರಾಷ್ಟ್ರೀಯ ಮಿತಿಗಿಂತ ಹೆಚ್ಚಿನ ಪ್ರಮಾಣ ದಾಖಲಾಗಿದೆ. ಅದೇ ರೀತಿ ಬಿಟಿಎಂ ಬಡಾವಣೆಯಲ್ಲಿ ಪಿಎಂ -2.5 ಪ್ರಮಾಣ ಅ.18ರಂದು 64.46 ಮೈ.ಗ್ರಾಂ ದಾಖಲಾಗಿದ್ದು, ಅ.20ರಂದು ರಾತ್ರಿ 8 ಗಂಟೆಗೆ 75.58 ದಾಖಲಾಗಿದೆ. 

ರಾಷ್ಟ್ರೀಯ ಮಿತಿ (ಒಂದು ಸಾವಿರ ಲೀಟರ್‌ ಗಾಳಿಯಲ್ಲಿ)
-ಪಿಎಂ-10ಗೆ 100 ಮೈಕ್ರೋ ಗ್ರಾಂ
-ಪಿಎಂ-2.5ಗೆ 60 ಮೈಕ್ರೋ ಗ್ರಾಂ

* ವೆಂ. ಸುನೀಲ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next