Advertisement

ತುಳಸೀ ಪೂಜೆಯ ಮಹತ್ವ

09:48 AM Oct 26, 2019 | Hari Prasad |

|ತುಳಸೀ ತ್ವಾಂ ನಮಾಮ್ಯಹಂ |
ಶ್ರೀ ತುಳಸಿಯ ಬಗ್ಗೆ ನಾವು ತಿಳಿದಿರುವ ವಿಚಾರವನ್ನು ಕಾರ್ತಿಕ ಮಾಸದ ಶುಭ ಅವಸರದಲ್ಲಿ ಪರಾಮರ್ಶಿಸೋಣ. ತುಳಸಿಗೆ ಶ್ರೀ ತುಳಸಿ, ಕೃಷ್ಣ ತುಳಸಿ, ರಾಮ ತುಳಸಿ ಎಂಬ ಮೂರು ಬಗೆಯ ಹೆಸರುಗಳು ಪ್ರಚಲಿತದಲ್ಲಿ ಇವೆ. ಇವುಗಳು ಆರೋಗ್ಯದಾಯಕ. ವೈಜ್ಞಾನಿಕವಾಗಿಯೂ ಪರಮ ಔಷಧ. ಇದರ ಸೇವನೆ, ಧಾರಣೆಗಳು ಶಾರೀರಿಕವಾಗಿ ನಮ್ಮನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತವೆ.

Advertisement

ತುಳಸೀ ಪೂಜೆಯ ವಿಷಯವು ನಮಗೆ ತುಳಸಿ ಬಗೆಗೆ ಜ್ಞಾನವನ್ನು ಹೆಚ್ಚಿಸುತ್ತದೆ. ತುಳಸಿಗೂ ನಮಗೂ ಇರುವ ಸಂಬಂಧವು ಅಪ್ಪ, ಅಮ್ಮ, ಮಕ್ಕಳಿಗಿರುವ ಅನುಬಂಧವನ್ನು ಕಲ್ಪಿಸುತ್ತದೆ. ನಾವು ಹುಟ್ಟಿನಿಂದ ಸಾಯುವ ತನಕ ಗೈಯ್ಯುವ ಸಕಲ ಪಾಪಗಳೂ ಇದರಿಂದಾಗಿ ಪರಿಹಾರವಾಗುತ್ತವೆ. ಹಾಗಾಗಿ ಈ ಪೂಜಾತ್ಮಕ ತುಳಸೀ ಸಸ್ಯವನ್ನು ಮನೆಯ ಅಂಗಳದ ಉತ್ತರ ಈಶಾನ ಅಥವಾ ಈಶಾನ ಪೂರ್ವದಲ್ಲಿ ಪ್ರತಿಷ್ಟಾಪಿಸಬೇಕು.

ಇಂತಹ ತುಳಸಿಯನ್ನು ನಮ್ಮ ಕಣ್ಣಿನಿಂದ ತದೇಕ ಚಿತ್ತದಿಂದ ನೋಡಿದಾಗ ನಮ್ಮ ಪಾಪಗಳೂ ಪರಿಹಾರಗೊಳ್ಳುತ್ತವೆ. ದೃಷ್ಟಿದೋಷಗಳು ಪರಿಹಾರವಾಗುತ್ತವೆ. ತುಳಸಿಯನ್ನು ಶುದ್ಧ ಕೈಯಿಂದ ಸ್ಪರ್ಶಿಸಿದಾಗ ಕಿವಿಗಳಲ್ಲಿ, ನಾಭಿ ಪ್ರದೇಶ ಹಾಗೂ ತಲೆಯಲ್ಲಿ ಧಾರಣೆ ಮಾಡುವುದರಿಂದ ನಮ್ಮ ಶರೀರವು ಅನಾರೋಗ್ಯದಿಂದ ಮುಕ್ತವಾಗುತ್ತದೆ. ಮುಕುತಿ ಪಥವನ್ನು ತೋರಿಸುವ ತುಳಸಿಯು ನಮ್ಮ ಮನೆಯಲ್ಲಿರಬೇಕು. ನಮಗೆಲ್ಲರಿಗೂ ಇಷ್ಟವಾಗಬೇಕು. ತುಳಸಿ ಎಲ್ಲರಿಗೂಸುಖ ಸೌಭಾಗ್ಯಗಳನ್ನು, ಸುಖ ದಾಂಪತ್ಯವನ್ನು ನೀಡುತ್ತದೆ.

ಸಂಕಲ್ಪ ಪೂರ್ವಕವಾಗಿ ಕೇಶವಾದಿ ದ್ವಾದಶ ಮೂರ್ತಿ ಆವಾಹನೆಯೊಂದಿಗೆ ವಾದಿರಾಜ ಕೃತ ಸಂಕೀರ್ತನೆಗಳನ್ನು ಪಠಿಸುತ್ತಾ, ಹಾಡುತ್ತಾ ದೇವಾರ್ಪಣೆಯೊಂದಿಗೆ ಇದನ್ನು ಕಾರ್ತಿಕ ಮಾಸದ ಪಾಡ್ಯದಿಂದ ಆರಂಭಿಸಿ ಉತ್ಥಾನ ದ್ವಾದಶಿ ದಿನದವರೆಗೆ ಆಸ್ತಿಕರೆಲ್ಲರೂ ಶ್ರದ್ಧಾಭಕ್ತಿಯಿಂದ ತುಳಸೀ ಪೂಜೆಯನ್ನು ಗೈಯ್ಯುತ್ತಾರೆ.

ಈ ಪೂಜೆಯು ರಾಜ್ಯದ ಕರಾವಳೀ ಭಾಗದಲ್ಲಿನ ಎಲ್ಲಾ ಹಿಂದುಗಳು ತಮ್ಮ ಮನೆಯಲ್ಲಿ ಆಚರಿಸಿಕೊಳ್ಳುತ್ತಾರೆ. ಗುತ್ತಿನ ಮನೆಗಳಲ್ಲಿ ವಿಶೇಷವಾಗಿ ನೆಲ್ಲಿಕಾಯಿ ಗಿಡವನ್ನು ತುಳಸೀ ಗಿಡದ ಬದಿಯಲ್ಲಿ ನೆಟ್ಟು ವಿವಾಹ ಸಂಸ್ಕಾರ ಕ್ರಮದಲ್ಲಿ ಪ್ರತಿಷ್ಟೆ ಮಾಡಿ, ಫಲಗಳು, ಭಕ್ಷ ಭೋಜ್ಯಗಳು ಈ ಗಿಡಗಳ ಅಂತರ್ಯಾಮಿ ಲಕ್ಷ್ಮೀನಾರಾಯಣರಿಗೆ ಸಮರ್ಪಿಸಿ, ವಾದಿರಾಜಕೃತ ಲಕ್ಷ್ಮೀ ಶೋಭಾನೆಯನ್ನೂ ಪಠಿಸಿ ತುಳು ಭಾಷಾ ಸಂಸ್ಕೃತಿಯಂತೆ “ತುಳಸಿಗ್‌ ಬಜಿಲ್‌ ಪಾಡುನು, ಮುಡಿಪು ದೀಪಿ’ನ ಕ್ರಮದಂತೆ ದೇವರಿಗೆ ದಿಕ್ಕು, ದಿಕ್ಕುಗಳಲ್ಲಿ ದೀಪ (ನೆಲ್ಲಿ ದೀಪ, ಬಂಬೆ ದೀಪ ಇತ್ಯಾದಿ)ವನ್ನು ಬೆಳಗಿಸಿ ಪರಮ ಪಾವನೆಯಾದ ತುಳಸಿಯು ನಮಗೆ ಪರಮ ಮಂಗಳೆಯಾಗಿ, ಮುತ್ತೈದೆಯಾಗಿ, ವಿಶೇಷತಃ ಮಾತೆಯಾಗಿ ಕಂಗೊಳಿಸಿ ಹರಸಲಿ ಎಂದು ಪ್ರಾರ್ಥಿಸಿ ನಮಸ್ಕರಿಸುತ್ತಾರೆ.
|ತಸ್ಮೈ ತುಳಸ್ಸೈ ನಮಃ|

Advertisement

– ವಿ | ಎನ್‌. ಎ. ಜನಾರ್ದನ ಭಟ್‌, ನಂದಿಕೂರು

Advertisement

Udayavani is now on Telegram. Click here to join our channel and stay updated with the latest news.

Next