ಅಮಾವಾಸ್ಯೆಯ ಮೊದಲಿನ ಮೂರ್‍ನಾಲ್ಕು ದಿನಗಳೆಂದರೆ ಕಗ್ಗತ್ತಲಿನ ಸರ್ವಾಧಿಪತ್ಯದ ಮಹಾಸಾಮ್ರಾಜ್ಯ. ಚಂದ್ರಪ್ರಭೆ ಇಲ್ಲದ ಕಾರಿರುಳು. ಕೃಷ್ಣ ಪಕ್ಷದ ಮುಕ್ತಾಯದ ದಿನ. ರಾತ್ರಿಗಳೆಂದರೆ ಹಾಗೆ, ಅಂಧಕಾರದ ಅಟ್ಟಹಾಸ. ಚುಕ್ಕಿಚಂದ್ರಮರ ವಿರಳ ದರ್ಶನ. ಕಂಡರೂ ಕಾಣದಂತೆ ಅಲ್ಲೊಂದು ಇಲ್ಲೊಂದು ಮಿನುಗುತ್ತಾರೆ. ಒಡೆಯನಿಲ್ಲದ ದಿನ, ನಗುವಿಲ್ಲದ ವಿಲಕ್ಷಣ. ಇಂತಹ ಘನ -ಗಂಭೀರ ಸನ್ನಿವೇಶದ ನಡುವೆ ನಗಿಸಲು ನಲಿಯುತ್ತಾ ಬರುವವನೇ ಹಬ್ಬಗಳ ಅಭಿಷಿಕ್ತ ದೊರೆ – ದೀಪಾವಳಿ.
ಧನ ತ್ರಯೋದಶಿ -ಧನ ಸಂಚಯ, ನರಕ ಚತುರ್ದಶಿ-ತೈಲಾಭ್ಯಂಗ, ಕುದಿಕುದಿ ನೀರಿನ ಜಳಕ, ನೂತನ ವಸ್ತ್ರ ಧಾರಣ. ಅಮಾವಾಸ್ಯೆ – ಧನ, ಧಾನ್ಯ ಲಕ್ಷ್ಮೀ ಆರಾಧನೆ – ಸಾಷ್ಟಾಂಗ ನಮನ. ಅನಂತರ ದೀಪಾವಳಿ-ಸಾಲು ಸಾಲು ದೀಪಗಳ ಪ್ರಜ್ವಲನ. ದೀಪ ಒಂದನ್ನು ಬೆಳಗಿ ಮೃತ್ಯು ಭಯವಿಲ್ಲ. ದೀಪಂ ಕರೋತಿ ಕಲ್ಯಾಣಂ.
ಇವೆಲ್ಲದರ ನಡುವೆ ಮನಸೆಳೆವ, ಮೊಗ ಅರಳಿಸುವ, ನಗು ಹೊಮ್ಮಿಸುವ, ಮುದ ನೀಡುವ ಮಾಂತ್ರಿಕತೆಯ ಪ್ರಕೃತಿಯ ರಂಗುಗಳನ್ನೆಲ್ಲ ಕಲಸಿದಂತಿರುವ ಚುಕ್ಕಿ-ಚಂದ್ರಮರ ಪ್ರಭೆಯನ್ನೂ ಅಣಕಿಸುವ ಬುಡ್ಡಿ ದೀಪಗಳು ಎಲ್ಲೆಲ್ಲೂ ರಾರಾಜಿಸುತ್ತವೆ. ಅದೇ ಆಕಾಶದೀಪ, ಗೂಡುದೀಪ, ಬಾನದೀಪ, ಬಣ್ಣದ ದೀಪ, ನಕ್ಷತ್ರ ದೀಪ. ನೂರಾರು ಹೆಸರಿನ ಏಕಳಾವರ – ಧರ್ಮಸೂತ್ರದ ಮಿನುಗುವ ಸರ್ವ ದೀಪ. ಹಬ್ಬಗಳ ಅರಸನ ಸ್ವಾಗತಕ್ಕೆ ಅಲಂಕರಿಸಿದ ವರ್ಣ ಸಾಮ್ರಾಜ್ಯ.
ಈ ಆಕಾಶದೀಪಕ್ಕೆ ಕುತೂಹಲದ ದಂತಕತೆಗಳು ನೂರಾರು. ಧನಲಕ್ಷ್ಮೀ-ಧಾನ್ಯಲಕ್ಷ್ಮೀಯರು ದ್ಯುಲೋಕದಿಂದ ಧರೆಗಿಳಿಯುವ ವೇಳೆ ಅಮಾವಾಸ್ಯೆಯ ಕಾರಿರುಳಲ್ಲವೇ? ಅವರಿಗೆ ಮರ್ತ್ಯ ಲೋಕ ಕಾಣಿಸಬೇಡವೇ? ಎಲ್ಲಾದರೂ ಎಡವಿ ತಡವಿದರೆ? ಅದಕ್ಕಾಗಿ ಬಣ್ಣ ಬಣ್ಣದ ದೀಪಗಳ ಬೆಳಕು ಹೊಮ್ಮಿಸುವ ಪರಿಹಾರ. ಯಾರ ಮನೆಯ ದೀಪವು ರಂಗುರಂಗಾಗಿ ಅಂಡವಾಗಿರುವುದೋ ಅಲ್ಲೇ ಲಕ್ಷ್ಮೀ ನುಗ್ಗಿ ಬಿಡುವಳೆಂಬ ಭ್ರಮೆಯೋ-ಭಾವನೆಯೋ? ಅಂತೂ ಭಾಗ್ಯದ ಲಕ್ಷ್ಮೀದೇವಿಯನ್ನು ಬರಸೆಳೆದು ಮನೆ ತುಂಬಿಸಿಕೊಳ್ಳುವ ತವಕದ ಪರಮ ಹುನ್ನಾರ. ಅಬ್ಟಾ ಬುದ್ಧಿವಂತಿಕೆಯೇ! ಅದಕ್ಕಾಗಿ ನೂರಾರು ರಂಗುರಂಗಿನ ಪತ್ರ – ಚಿತ್ರಗಳ ಚೌಕಟ್ಟಿನ ಗೂಡು. ಅದರೊಳಗೊಂದು ಉರಿವ ದೀಪ. ಅದೇ ಗೂಡುದೀಪ-ಆಕಾಶದೀಪ. ಮೇಲಿಂದ ಕೆಳಗಿಳಿಯುವವರಿಗೆ ದಾರಿ ಸರಾಗವಾಗಿ ಬೇಡವೇ? ಅದಕ್ಕಾಗಿ ನೀಳವಾದ ದೋಟಿಯೊಂದಕ್ಕೆ ಕಟ್ಟಿ ಮೇಲೇರಿಸುವ ಪ್ರಯತ್ನ. ಆಕಾಶದೀಪವಲ್ಲವೇ? ಆಕಾಶಕ್ಕಿಂತ ಕೊಂಚ ಕೆಳಗೆ, ಭೂಮಿಗಿಂತ ಮೇಲಿದ್ದರೆ ಸಾಕು ಎಂಬ ಚಿಂತನೆ.
ಧನ, ಧಾನ್ಯ ಲಕ್ಷ್ಮೀಯರಂತೆ ದಾನವೇಂದ್ರ ಬಲಿರಾಜನಿಗೂ ಅದೇ ರೀತಿಯ ಕರೆ. “ವರುಷಕ್ಕೊಮ್ಮೆ ನಾನಾಳಿದ ಧರೆಗೆ ಬರುವಾಗ ಎಲ್ಲೆಡೆ ಬೆಳಕು ಬೇಕು. ಕತ್ತಲಲ್ಲಿ ಬರುವವನಲ್ಲ ನಾನು. ಜ್ಯೋತಿಗಳು ಲಾಸ್ಯವಾಡಿ ಎಲ್ಲರ ಮನೆ-ಮನಗಳು ನಿಚ್ಚಳವಾಗಿ ಗೋಚರಿಸಬೇಕು’ ಎಂತಹ ಸದಾಶಯ ಬಲಿ ಚಕ್ರವರ್ತಿಯದ್ದು ! ಆತನು ಪಾತಾಳದಿಂದ ಭೂಮಿಗೆ ಬರುವಾಗ ಅವನಿಗೆ ಭವ್ಯ ಸ್ವಾಗತ. ಸುಂದರ ವರ್ಣಾಲಂಕೃತ ದೀಪಗಳಿರುವ ತೆರೆದ ಬಾಗಿಲ ಗೃಹಗಳಿವೆಯೋ ಅಲ್ಲಿಗೇ ಬಲಗಾಲಿಟ್ಟು ಪ್ರವೇಶಿಸುವನಂತೆ ಬಲೀಂದ್ರ ! ಕಲಿರಾಯನನ್ನು ನಿಗ್ರಹಿಸಲು ಮನೆ, ಹೊಲ, ವೃಂದಾವನ, ಅಂಗಳ, ಎಲ್ಲೆಲ್ಲೂ ಬೆಳಕೇ ಬೆಳಕು. ತಮಸೋಮಾ ಜ್ಯೋತಿರ್ಗಮಯ !
ಶಶಿತಾರೆಯರ ಅನುಪಸ್ಥಿತಿ ಗೋಚರವಾಗಬಾರದೆಂದು ಆಕಾಶದೀಪಗಳು, ಬುಡ್ಡಿದೀಪಗಳು, ಗೂಡುದೀಪಗಳು, ನಕ್ಷತ್ರ ದೀಪಗಳು ಯಾರು ಹೇಳಬಲ್ಲರು ಚಂದ್ರ-ಚುಕ್ಕಿಗಳಿಲ್ಲವೆಂದು? ಕೃಷ್ಣ ಪಕ್ಷದ ಕತ್ತಲೆಯ ಅಟ್ಟಹಾಸವನ್ನು ಹಂಗಿಸಲು ಸೃಷ್ಟಿಸಿದ ಕೃತಕ ದೀಪಗಳು. ಪಂಚವರ್ಣ, ಸಪ್ತವರ್ಣ, ಶತ-ಸಹಸ್ರವರ್ಣ, ಬಾನಿನ ಕೋಲ್ಮಿಂಚು ಭುವಿಗಿಳಿದಂತೆ.
ಆಕಾಶದೀಪ-ಮುಗಿಯದ ಕೌತುಕ: ಆಕಾಶದೀಪಗಳ ಕಥನ ಕೌತುಕ ಇಷ್ಟಕ್ಕೇ ಮುಗಿಯುವುದಿಲ್ಲ.ಜಿನ ತೀರ್ಥಂಕರ ಮಹಾವೀರರು ನಿರ್ಯಾಣರಾಗಿ ಸ್ವರ್ಗಾರೋಹಣ ಮಾಡಿದಾಗ ಅವರ ಸ್ವಾಗತಕ್ಕೆ ದೇವತೆಗಳು ಆಕಾಶದೀಪವಿರಿಸಿದರಂತೆ. ಅಹಿಂಸಾ ಪರಮೋ ಧರ್ಮ ಎಂದು ಸಾರಿದ ತ್ಯಾಗಮೂರ್ತಿಗೆ ಎಂತಹ ಅಪೂರ್ವ ಗೌರವ. ತ್ರೇತಾ ಯುಗದ ಶ್ರೀರಾಮಚಂದ್ರ ಹದಿನಾಲ್ಕು ವರುಷಗಳ ವನವಾಸ ಮುಗಿ ದುಷ್ಟ ದಮನ ಮಾಡಿ ಅಯೋಧ್ಯೆಗೆ ಮರಳಿದಾಗ ತಮ್ಮ ರಾಮರಾಜ್ಯದ ಕನಸು ನನಸಾಯಿತೆಂದು ಹರ್ಷದಿಂದ ನಾಡ ತುಂಬಾ ದೀಪ ಬೆಳಗಿ ಅಗಸದಲ್ಲೂ ಆಕಾಶದೀಪ ಏರಿಸಿ “ಬಾ ರಾಮ ಬಾರೊ ಬಾರೋ ಬಡವರನು ಕಾಯೊ ಬಾರೋ’ ಎಂದು ಹಾಡಿ ನಲಿದರಂತೆ. ಬಹುಶಃ ಅಂದಿನ ನಾಂದಿಯೇ ಇಂದಿನವರೆಗೂ ಆಕಾಶದೀಪ, ಗೂಡುದೀಪ, ವರ್ಣದೀಪ, ಬಲಿದೀಪ, ತಿರು ದೀಪ, ನಕ್ಷತ್ರ ದೀಪ, ಗಾಳಿದೀಪ ಇತ್ಯಾದಿ ವಿವಿಧ ನಾಮಗಳಿಂದ ಕಂಗೊಳಿಸುತ್ತಿದೆಯೋ ಏನೋ?
ಏನೇ ಇರಲಿ ಎಲ್ಲರ ಮನೆ ಮುಂದೆ ದೀಪ ಪ್ರಜ್ವಲಿಸಲಿ. ಆಕಾಶದೀಪ ಮೇಲೇರಿ ಬಣ್ಣಬಣ್ಣದ ಚಿತ್ರ-ಚಿತ್ತಾರ ಅಂಗಳದ ಕಿರಣವಾಗಲಿ. ಎಲ್ಲರ ಬದುಕೂ ಸಪ್ತವರ್ಣದಂತೆ ಸುಂದರವಾಗಲು ಶ್ರೀ ಲಕ್ಷ್ಮೀದೇವಿ ಎಲ್ಲರ ಮನೆಯಲ್ಲೂ ತಾಂಡವವಾಡಲಿ. ಬಲಿಚಕ್ರವರ್ತಿ ದುರಿತಗಳನ್ನು ದೂರ ಮಾಡಲಿ. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
-ಮೋಹನದಾಸ, ಸುರತ್ಕಲ್