Advertisement
ನಾಡು ದೀಪಾವಳಿ ಹಬ್ಬಕ್ಕೆ ಸಿದ್ಧಗೊಳ್ಳುತ್ತಿದ್ದು, ಮಂಗಳೂರಿನ ವಿಟಿ ರಸ್ತೆಯ ಸೇವಾ ಭಾರತಿ ಸಂಸ್ಥೆಯ ಚೇತನಾ ಬಾಲವಿಕಾಸಕೇಂದ್ರದ ವಿಶೇಷ ಚೇತನ ವಿದ್ಯಾರ್ಥಿಗಳು ಹಣತೆಗಳಿಗೆ ಬಣ್ಣದ ಚಿತ್ತಾರ ನೀಡುವ ಮೂಲಕ ಬೆಳಕಿನ ಹಬ್ಬಕ್ಕೆ ಸಿದ್ಧತೆಯನ್ನು ಮಾಡಿ ಕೊಂಡಿದ್ದಾರೆ.
ಮುಂಬಯಿಂದ ಮಣ್ಣಿನ ಹಣತೆಗಳನ್ನು ತಂದು ಅವುಗಳಿಗೆ ಬಣ್ಣ ಬಳಿಯಲಾಗುತ್ತದೆ. ಆ ಬಳಿಕ ದಿಯಾ(ಹಣತೆ)ಗಳಲ್ಲಿ ವಿವಿಧ ಕಲಾ ಚಿತ್ತಾರಗಳನ್ನು ಬರೆಯಲಾಗುತ್ತದೆ. ಓರ್ವ ಒಂದು ದಿನಕ್ಕೆ 25 ಹಣತೆಗಳಿಗೆ ಬಣ್ಣ ಬಳಿಯುತ್ತಾರೆ. ಆ ಬಳಿಕ ಕಲಾ ಸ್ಪರ್ಶ
ನೀಡುವ ಕಾರ್ಯವನ್ನು ತಾಳ್ಮೆಯಿಂದ ಮಾಡಬೇಕಾಗುತ್ತದೆ. ಕೆಲವು ವಿಶೇಷ ಚೇತನ ಮಕ್ಕಳೇ ಕಲಾಕೃತಿಗಳನ್ನು ರಚಿಸಿದರೆ,
ಉಳಿದವರಿಗೆ ಸಿಬಂದಿ ನೆರವಾಗುತ್ತಾರೆ.
Related Articles
Advertisement
ಮಂಗಳೂರು ಮಾತ್ರವಲ್ಲದೆ ಮುಂಬಯಿ, ಪುಣೆ, ಬೆಂಗಳೂರು, ಮೈಸೂರಿಗೆ ಸಾವಿರಾರು ಹಣತೆಗಳನ್ನು ಕಳುಹಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರು. ವರ್ಷವಿಡೀ ಚಟುವಟಿಕೆ ದೀಪಾವಳಿ ಸಂದರ್ಭ ಹಣತೆಗಳಿಗೆ ಬಣ್ಣದ ಚಿತ್ತಾರ ಒಂದೆಡೆಯಾದರೆ, ಮತ್ತೂಂದೆಡೆ ಬೇಡಿಕೆಗೆ ಅನುಗುಣವಾಗಿ ಗೂಡುದೀಪಗಳನ್ನು ತಯಾರಿಸುತ್ತಿದ್ದಾರೆ.
ಇದಲ್ಲದೆ ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಸ್ಕ್ರೀನ್ ಪೈಂಟಿಂಗ್, ಪೇಪರ್, ಬಟ್ಟೆ ಬ್ಯಾಗ್ ತಯಾರಿಕೆ, ಮೆಡಿಕಲ್ ಗಳಿಗೆ ಬೇಕಾಗುವ ಕವರ್ ಗಳು, ಅಲಂಕಾರಿಕ ಹೂವುಗಳು, ಬಟ್ಟೆಯ ಮ್ಯಾಟ್‌ಗಳು, ಕ್ಯಾಂಡಲ್ತಯಾರಿಕೆ ಹೀಗೆ ವಿವಿಧ ಚಟುವಟಿಕೆಗಳು ಅಂಗ ವಿಕಲರನ್ನು ಕ್ರೀಯಾಶೀಲರನ್ನಾಗಿಸುತ್ತಿದೆ. ವಿಶೇಷ ಮಮತೆಯಿಂದ ರಂಗುರಂಗಿನ ಚಿತ್ತಾರ
ಚೇತನಾ ಬಾಲವಿಕಾಸ ಸಂಸ್ಥೆಗೆ ಸೇರಿಕೊಂಡವರನ್ನು ಅತೀವ ಪ್ರೀತಿ ಮಮತೆಯಿಂದ ನೋಡಿಕೊಳ್ಳುತ್ತೇವೆ. ಇದರಿಂದಾಗಿ ಅವರು ನಮ್ಮೊಡನೆ ಚೆನ್ನಾಗಿಯೇ ಬೆರೆತುಕೊಳ್ಳುತ್ತಾರೆ. ಅವರಿಗೆ ನೀಡುವ ಚಟುವಟಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ದೀಪಾವಳಿ ಹಬ್ಬಕ್ಕೆ ತಯಾರಿ ಎಂಬಂತೆ ಮೂರು ತಿಂಗಳುಗಳ ಮೊದಲೇ ಹಣತೆಗಳನ್ನು ಬಣ್ಣಗಳಿಂದ ಶೃಂಗರಿಸುವ ಕಾರ್ಯ ಆರಂಭಿಸುತ್ತೇವೆ. ಅಲಂಕೃತಗೊಂಡ ಹಣತೆಗಳಿಗೆ ಮಂಗಳೂರಿಗರು ಮಾತ್ರವಲ್ಲದೆ ಹೊರಭಾಗದಿಂದಲೂ ಬೇಡಿಕೆ ಬಂದಿದ್ದು, ಮುಂದಿನ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲಾಗುವುದು.
ಸುಪ್ರಿತಾ, ಮುಖ್ಯಶಿಕ್ಷಕಿ ಚೇತನಾ ಬಾಲ ವಿಕಾಸ ಕೇಂದ್ರ ಹೆತ್ತವರಿಂದಲೂ ಮಕ್ಕಳಿಗೆ ಸಹಕಾರ
6 ವರ್ಷಗಳಿಂದ ಸಂಸ್ಥೆಯಲ್ಲಿ ವಿಶೇಷ ಚೇತನ ಮಕ್ಕಳು ಹಣತೆ ಶೃಂಗರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ದೀಪಾವಳಿ ಸಂದರ್ಭ ಹಣತೆಗಳನ್ನು ಶೃಂಗರಿಸುವ ಕಾರ್ಯ ಮಾಡುತ್ತಿದ್ದು ಇವುಗಳಿಗೆ ಬೇಡಿಕೆ ಹೆಚ್ಚಿದೆ. ಕಳೆದ ವರ್ಷ 1 ಸಾವಿರ ಹಣತೆಗಳನ್ನು ಬಣ್ಣ ಹಚ್ಚಿ ನೀಡಿದ್ದೆವು. ಈ ವರ್ಷ ಇಲ್ಲಿಯ ತನಕ 5 ಸಾವಿರಕ್ಕೂ ಅಧಿಕ ಹಣತೆಗಳನ್ನು ಬಣ್ಣ ಹಚ್ಚಿ ಮಾರಾಟ ಮಾಡಲಾಗಿದೆ. ಕೆಲಸ ಹೆಚ್ಚಾಗಿರುವುದರಿಂದ ಹೆತ್ತ ವರು ತಮ್ಮ ಮಕ್ಕಳ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ. ಅವರೊಂದಿಗೆ ಬೆರೆತು ಆನಂದಪಡುತ್ತಾರೆ. ಜತೆಗೆ ಸಂಸ್ಥೆಯ ಸಿಬಂದಿ, ಸ್ವಯಂ ಸೇವಕರ ಸಹಕಾರದಿಂದಾಗಿ ನಿರೀಕ್ಷೆಗೂ ಮೀರಿ ಹಣತೆಗಳನ್ನು ಪೂರೈಸಲಾಗುತ್ತಿದೆ ಎನ್ನುವುದು ಸಂಸ್ಥೆಯ ಸಿಬಂದಿ ಮಾತು. *ಸಂತೋಷ್ ಮೊಂತೆರೋ