Advertisement

ಇಜಿಪ್ತ್ ರಾಜಧಾನಿ ಕೈರೋ ದಲ್ಲೂ ದೀಪಾವಳಿ ಸಂಭ್ರಮ

04:44 PM Nov 15, 2020 | Suhan S |

ಮುದ್ದೇಬಿಹಾಳ: ಇಜಿಪ್ತ್ ನ  ರಾಜಧಾನಿ ಕೈರೋದಲ್ಲಿ ವಾಸವಾಗಿರುವ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಢವಳಗಿ ಗ್ರಾಮದ ಚಂದ್ರಶೇಖರ ಬಿರಾದಾರ ಅವರು ತಮ್ಮ ನಿವಾಸದಲ್ಲಿ ಅಲ್ಲಿನ ಕನ್ನಡ ಬಳಗದೊಂದಿಗೆ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಮೂಲಕ ವಿದೇಶದಲ್ಲೂ ದೀಪಾವಳಿ ಸೊಗಡನ್ನು ಪಸರಿಸಿದ್ದಾರೆ.

Advertisement

ಕೈರೋದಲ್ಲಿ ನೆಲೆ ನಿಂತು ಕೃಷಿ ವಿಜ್ಞಾನಿಗಳ ತಂಡದ ಮುಖ್ಯಸ್ಥರಾಗಿ ಬೇರೆ ದೇಶಗಳ ವಿಜ್ಞಾನಿಗಳ ಸಂಪರ್ಕ ಹೊಂದಿರುವ ಇವರು ದಸರಾ, ಕನ್ನಡ ರಾಜ್ಯೋತ್ಸವ, ಹೋಳಿ, ದೀಪಾವಳಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿ ಭಾರತದ ಹಲವು ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಪಾಲಿಸುತ್ತಿದ್ದಾರೆ. ಈ ದೀಪಾವಳಿಯಂದು ತಮ್ಮ ಮನೆಯಲ್ಲೇ ಕಚ್ಚಾ ಸಾಮಗ್ರಿ ಬಳಸಿ ಆಕಾಶಬುಟ್ಟಿ, ದೀಪದ ಆಕಾರದ ತೋರಣ ಸೇರಿ ಹಲವು ಅಲಂಕಾರಿಕ ಸಾಮಗ್ರಿಗಳನ್ನು ತಮ್ಮ ಮಕ್ಕಳ ಮೂಲಕವೇ ತಯಾರಿಸಿದ್ದಾರೆ. ಇಜಿಪ್ತ್ನ ಆಕಾಶದಲ್ಲಿ ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಆಕಾಶಬುಟ್ಟಿಯ ಹಾರಾಟ ಆಕರ್ಷಣೆಗೆ ಕಾರಣವಾಗಿದೆ.

ತಮ್ಮ ಮನೆಯ ವರಾಂಡಾ, ಮೇಲ್ಛಾವಣಿ ಸೇರಿದಂತೆ ವಿವಿಧೆಡೆ ಕನ್ನಡದ ನೆಲದ ತರಕಾರಿ, ಹಣ್ಣು ಬೆಳೆದು ಪಕ್ಷಿಗಳಿಗಾಗಿ ಗೂಡನ್ನೂ ನಿರ್ಮಿಸಿ ಪರಿಸರಪ್ರಿಯರೆನ್ನಿಸಿಕೊಂಡಿರುವ ಚಂದ್ರಶೇಖರ ಅವರು ಪರಿಸರ ಪ್ರೇಮಿ ದೀಪಾವಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಮನೆಯಲ್ಲಿ ರಂಗವಲ್ಲಿ ಹಾಕಿ, ಅಲ್ಲಲ್ಲಿ ದೀಪ ಹಚ್ಚಿ ಇಡಿ ಮನೆಯನ್ನೇ ಹಣತೆಯ ದೀಪಗಳ ಪ್ರಕಾಶಕ್ಕೆ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಕುಟುಂಬ ಮಾತ್ರವಲ್ಲದೆ ಅಕ್ಕಪಕ್ಕದ ಕನ್ನಡಿಗರ ಕುಟುಂಬಗಳನ್ನು ಮನೆಗೆ ಕರೆಸಿಕೊಂಡು ಎಲ್ಲರೂ ಒಟ್ಟಾಗಿ ದೀಪ ಬೆಳಗಿಸಿ ಹಬ್ಬದ ಸಂಭ್ರಮ ಸವಿದಿದ್ದಾರೆ.

ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು, ಅಜ್ಞಾನ, ಅಂಧಕಾರದ ಕತ್ತಲೆಯನ್ನು ಹೊಡೆ ದೋಡಿಸುವ ದೀಪಾವಳಿಗೆ ನಾವು ಪರಿಸರಸ್ನೇಹಿ ಸ್ಪರ್ಶ ನೀಡಿದ್ದೇವೆ. ಅಲಂಕಾರ, ಆಹಾರ ಸೇವನೆ, ಕಾಣಿಕೆ ನೀಡುವಿಕೆ ಸೇರಿ ಹಲವು ಸಂಭ್ರಮಗಳನ್ನು ಪರಿಸರಸ್ನೇಹಿಯಾಗಿ ಮಾಡಬಹುದು ಎನ್ನುವುದನ್ನು ನಾವು ಪಾಲಿಸುತ್ತಿದ್ದೇವೆ. ದೀಪಾವಳಿಗೆ ಅಗತ್ಯವಿರುವ ವಸ್ತುಗಳು ಇಲ್ಲಿ ಸಿಗೊಲ್ಲ. ಹಾಗಾಗಿ ಕಚ್ಚಾ ಸಾಮಗ್ರಿಗಳನ್ನು ತಂದು ನಾವೇ ಕುಟುಂಬ ಸಮೇತ ಅಗತ್ಯ ವಸ್ತುಗಳನ್ನು ತಯಾರಿಸಿ ಮನೆಗಳನ್ನು ಅಲಂಕರಿಸಿ ಸಂಭ್ರಮಿಸುತ್ತೇವೆ. ನಮ್ಮ ಮನೆಯ ಹಸಿರಿನ ಪರಿಸರದೊಂದಿಗೆ ದೀಪಗಳ

ಅಲಂಕಾರ ನೋಡುಗರ ಕಣ್ಣಿಗೆ ಉಲ್ಲಾಸ ನೀಡುವಂತಿದೆ. ಇಜಿಪ್ತ್ನಂಥ ರಾಷ್ಟ್ರದಲ್ಲಿ ನಮ್ಮ ಹಬ್ಬಗಳನ್ನು ಆಚರಿಸುವುದು ನಮಗೆ ಖುಷಿ ಕೊಡುವುದರ ಜೊತೆಗೆ ನಮ್ಮ ಸಂಸ್ಕೃತಿ ಅನಾವರಣಕ್ಕೆ ಅವಕಾಶವನ್ನೂ ಸೃಷ್ಟಿಸುತ್ತದೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

Advertisement

 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next