ಯಾದಗಿರಿ: ಕಾರ್ತಿಕ ಮಾಸದ ಪವಿತ್ರ ದಿನಗಳಲ್ಲಿ ಹಲವಾರು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಭಕ್ತರಲ್ಲಿ ಪರಸ್ಪರ ಸಾಮರಸ್ಯ ಮೂಡಿಸಿದೆ. ಇದುಎಲ್ಲರ ಬದುಕಿನಲ್ಲಿ ಪರಿವರ್ತನೆಗೆ ನಾಂದಿಯಾಗಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನೆರೆಯ ಆಂಧ್ರಪ್ರದೇಶದ ಶ್ರೀಶೈಲನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಗದಗ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ ಹಮ್ಮಿಕೊಂಡಿದ್ದ 9ನೇ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಭಾರತದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀಶೈಲ ಕ್ಷೇತ್ರ ವಿಶಿಷ್ಟವಾಗಿ ಭೂಕೈಲಾಸ ಎಂದು ಹೆಸರಾಗಿದೆ. ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುವ ಭಕ್ತರ ಬದುಕುಪಾವನವಾಗುತ್ತದೆ. ಕನ್ನಡಿಗರು ಈ ಕ್ಷೇತ್ರದೊಂದಿಗೆಸಾವಿರಾರು ವರ್ಷಗಳ ಸಂಬಂಧ ಹೊಂದುವಜತೆಗೆ ಪ್ರಗತಿಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದರು.
ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡದವರನ್ನು ರಾಜ್ಯ ಸರ್ಕಾರ ಹಿಂದುಳಿದ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಅಂದಾಗಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂಬ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದರು.
ಶ್ರೀಶೈಲ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್. ರಾಮರಾವ್ ಮಾತನಾಡಿ, ಈ ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಭಕ್ತರು ಪ್ರತಿ ವರ್ಷ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಅವರಿಗೆ ನಾವು ಅಗತ್ಯ ಸೌಕರ್ಯ ನೀಡಲು ಒತ್ತು ನೀಡಿದ್ದೇವೆ ಎಂದರು.
ನರೇಗಲ್ಲನ ಮಲ್ಲಿಕಾರ್ಜುನ ಶಿವಾಚಾರ್ಯರು, ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯರು ಮಾತನಾಡಿದರು. ಶ್ರೀಶೈಲ ದೇವಸ್ಥಾನ ಆಡಳಿತ ಮಂಡಳಿ ಅಧಿ ಕಾರಿಗಳಾದ ಹರಿದಾಸ್, ಸಾಯಿಕುಮಾರ, ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕ ಗುರುಪಾದಯ್ಯ ಸ್ವಾಮಿ, ಓಂಕಾರಯ್ಯಸ್ವಾಮಿ, ವೀರಭದ್ರ ಸ್ವಾಮಿ, ಗದಗ ಜಿಪಂ ಉಪಾಧ್ಯಕ್ಷೆ ಶೋಭಾ ಮೇಟಿ, ಶರಣೆ ನೀಲಮ್ಮ, ಮಂಜುನಾಥರೆಡ್ಡಿ, ಪ್ರಭು ಶಿರೂರ, ಬಾಸ್ಕರರೆಡ್ಡಿ, ರವಿ ಸಿಂಗನಾಳ ಗಂಗಾವತಿ, ಪವಿತ್ರಾರೆಡ್ಡಿ, ಬಸವಂತರೆಡ್ಡಿ, ಮಲ್ಹಾರ ಯಾದಗಿರಿ, ಮಾಣಿಕರೆಡ್ಡಿ ಕುರಕುಂದಿ, ಶರಣಗೌಡ ಪಾಟೀಲ್ ಯಡ್ಡಳ್ಳಿ, ಬಸವಂತ್ರಾಯಗೌಡ ನಾಯ್ಕಲ್, ಲಕ್ಷ್ಮೀಕಾಂತರೆಡ್ಡಿ ಬೊಮಶೆಟ್ಟಹಳ್ಳಿ ಸೇರಿದಂತೆ ನೂರಾರು ಭಕ್ತರು ಭಾಗಿಯಾಗಿದ್ದರು.