ಮುಂಬಯಿ, ನ. 19: ಮೀರಾರೋಡ್ ಪೂರ್ವದ ಗೀತಾ ನಗರದಲ್ಲಿರುವ ಪ್ರತಿಷ್ಠಿತ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಅವರಣದಲ್ಲಿ ನ. 16ರಂದು ರಾತ್ರಿ ಕಾರ್ತಿಕ ಮಾಸದ ದೀಪೋತ್ಸವ, ತುಳಸಿ ಪೂಜೆ ಹಾಗೂ ದೀಪಾವಳಿಯ ವಿಶೇಷ ಪೂಜೆಯು ವಿವಿಧ ವಿಧಿವಿಧಾನಗಳೊಂದಿಗೆ ನಡೆಯಿತು.
ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಅವರು ದೀಪ ಪ್ರಜ್ವಲಿಸಿ, ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿ ಕಾರ್ತಿಕ ದೀಪೋತ್ಸವ, ತುಳಸಿ ಪೂಜೆ ಹಾಗೂ ಸಂಕೀರ್ತನೆಗೆ ಚಾಲನೆ ನೀಡಿದರು. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಇಚ್ಛೆ, ಸಂಕಲ್ಪ ಹಾಗೂ ಮಾರ್ಗದರ್ಶನದಂತೆ ಸನಾತನ ಧರ್ಮದ, ತುಳುನಾಡಿನ ಸಂಸ್ಕಾರ, ಸಂಪ್ರದಾಯ, ಆಚಾರ- ವಿಚಾರಗಳನ್ನು ಶ್ರದ್ಧೆಯಿಂದ ಪಾಲಿಸಿ ಅನುಷ್ಠಾನಗೊಳಿಸುವುದು ಶ್ರೀ ಪಲಿಮಾರು ಮಠದ ಧ್ಯೇಯವಾಗಿದೆ. ಇಂತಹ ಧಾರ್ಮಿಕ ಚಿಂತನೆಯ ಪುನಃಚೇತನಕ್ಕೆ ಸರ್ವರ ಸಹಕಾರ ಅನಿವಾರ್ಯ ಎಂದರು.
ಸಂಜೆ ಶ್ರೀ ಬಾಲಾಜಿ ಸನ್ನಿಧಿಯ ಸದಸ್ಯೆಯರಿಂದ ಭಜನೆ, ದರೆಗುಡ್ಡೆ ಶ್ರೀನಿವಾಸ ಆಚಾರ್ಯ ಅವರಿಂದ ಮಹಾಭಾರತ ಪ್ರವಚನ ನಡೆಯಿತು. ಪಲಿಮಾರು ಮಠದ ಟ್ರಸ್ಟಿ ವಾಸುದೇವ ಎಸ್. ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ರಾತ್ರಿ ತುಳಸಿ ಪೂಜೆ, ಕುಣಿತದೊಂದಿಗೆ ತುಳಸಿ ಸಂಕೀರ್ತನೆ, ಶ್ರೀನಿವಾಸ ದೇವರಿಗೆ ರಂಗಪೂಜೆ, ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ರುದ್ರ ದೇವರು, ಶ್ರೀ ಪದ್ಮಾಂಬಿಕೆ, ಶ್ರೀ ಅಂಜನೇಯ, ಶ್ರೀ ನಾಗದೇವರು ನವಗ್ರಹ ದೇವರಿಗೆ ವಿಶೇಷ ಪೂಜೆಗಳು ನಡೆದವು.
ಸಂಕೀರ್ತನೆಯಲ್ಲಿ ಕುಮಾರ್ ಸ್ವಾಮಿ ಭಟ್, ರಾಘವೇಂದ್ರ ಆಚಾರ್ಯ, ಪ್ರಶಾಂತ್ ಭಟ್, ಶ್ರೀಶ ಉಡುಪ, ಶಂಕರ್ ಗುರು ಭಟ್, ಗುರುಶಂಕರ್ ಭಟ್, ರಾಮರಾಜ್ ದ್ವಿವೇದಿ, ವೃಷಭ ಭಟ್, ಗೋಪಾಲ ಭಟ್, ಕೃಷ್ಣಮೂರ್ತಿ ಉಪಾಧ್ಯಾಯ ಹಾಗೂ ಶ್ರೀ ಬಾಲಾಜಿ ಭಜನ ಮಂಡಳಿಯ ಸದಸ್ಯರು, ಸದಸ್ಯೆಯರು ಪಾಲ್ಗೊಂಡಿದ್ದರು. ಕರಮಚಂದ್ರ ಗೌಡ ಮತ್ತು ಬಾಲಾಜಿ ಭಜನ ಮಂಡಳಿಯ ಸದಸ್ಯರು ಸಹಕರಿಸಿದರು.
ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರದಲ್ಲಿ ಭಕ್ತರು ದೇವರ ದರ್ಶನ ಪಡೆದರು.
ಚಿತ್ರ-ವರದಿ: ರಮೇಶ ಅಮೀನ್