Advertisement
ಇಲ್ಲ, ಈಗ ಹತ್ತುವರ್ಷಗಳ ಹಿಂದೆ ಇದ್ದಂತಹ ಸ್ಥಿತಿ ಈಗ ಇಲ್ಲ. ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಒಂದು ಭರವಸೆ ಕಾಣಿಸುತ್ತಿದೆ. ಎಲ್ಲ ಕ್ರೀಡೆಗಳಲ್ಲೂ ತಾರೆಯರು ಹುಟ್ಟಿಕೊಳ್ಳುತ್ತಿದ್ದಾರೆ. ಇದು ಭಾರತದ ಕ್ರೀಡಾಭವಿಷ್ಯದ ಬಗ್ಗೆ ಒಂದು ನಂಬಿಕೆ ಮೂಡಿಸಿದೆ. ಪ್ರತೀ ಬಾರಿ ಒಲಿಂಪಿಕ್ಸ್ ಮುಗಿಸಿಕೊಂಡು ಬರುವಾಗಲೂ ಕಾಣುತ್ತಿದ್ದ ಹತಾಶೆ ಇನ್ನು ಕಾಣಲಾರದು ಎನ್ನುವುದಂತೂ ಸತ್ಯ. ಬಹುಶಃ ಇನ್ನೊಂದೆರಡು ಒಲಿಂಪಿಕ್ಸ್ ಮುಗಿಯುವಾಗ ವಿಶ್ವ ಕ್ರೀಡಾರಂಗದಲ್ಲಿ ಭಾರತದ ಬಾವುಟ ಎತ್ತರದಲ್ಲಿ ಹಾರುತ್ತದೆ ಎಂದು ಹೇಳಿದರೆ, ಅದನ್ನು ಉತ್ಪ್ರೇಕ್ಷೆ ಎನ್ನಲು ಸಾಧ್ಯವಿಲ್ಲ.
Related Articles
Advertisement
ಪುನಿಯ ಇತಿಹಾಸ: ಹಿರಿಯರ ವಿಭಾಗದಲ್ಲಿ ಸೆಣಸುವ ಮುನ್ನ ದೀಪಕ್ ಪುನಿಯ ಕಿರಿಯರ ವಿಭಾಗದಲ್ಲಿ ಬಲವಾದ ಹೆಜ್ಜೆಯಿಟ್ಟಿದ್ದರು. ವಿಶ್ವ ಕೆಡೆಟ್ ಕೂಟದಲ್ಲಿ ಚಾಂಪಿಯನ್ ಆಗಿದ್ದರು. ವಿಶ್ವ ಕಿರಿಯರ ಕೂಟದಲ್ಲೂ ಚಾಂಪಿಯನ್ ಆಗಿದ್ದರು. ಅದನ್ನು ನೋಡಿದಾಗ, ಹಿರಿಯರ ಕೂಟದಲ್ಲಿ ದೀಪಕ್ ಪುನಿಯ ಚಿನ್ನ ಗೆಲ್ಲುವುದೇನು ಕಷ್ಟವಲ್ಲ ಎನ್ನುವ ಅಭಿಪ್ರಾಯ ದಟ್ಟವಾಗಿತ್ತು. ಅದನ್ನು ತಮ್ಮ ಮೊದಲ ಯತ್ನದಲ್ಲೇ ದೀಪಕ್ ಸರಿಯೆಂದು ಸಮರ್ಥಿಸಿಕೊಂಡರು. ಆತಿಥೇಯ ಕಜಕಸ್ತಾನದ ಅಡಿಲೆಟ್ ದಾವುಯೆವ್, ತಜಿಕಿಸ್ತಾನದ ಬಕೂರ್ ಕೊಡಿರವ್, ಕೊಲಂಬಿಯದ ಮಿಲ್ಟನ್ ಇಜಿರ್ಡೊ, ಸ್ವಿಜರ್ಲೆಂಡ್‌ನ ಸ್ಟೆಫಾನ್ ರೀಚತ್‌ರಂತಹ ದಿಗ್ಗಜರನ್ನು ಸೋಲಿಸಿ ಅಂತಿಮ ಸುತ್ತಿಗೇರಿದ್ದರು.
ಅವರ ಆಗಿನ ಓಟವನ್ನು ಗಮನಿಸಿದರೆ, ಅಂತಿಮ ಪಂದ್ಯದಲ್ಲಿ ಇರಾನಿ ಯಜಾªನಿಯನ್ನು ಸೋಲಿಸುವುದು ಕಷ್ಟವಾಗಿರಲಿಲ್ಲ. ಆಗ ಅವರಿಗೆ ಕಣ್ಣು ಮತ್ತು ಎಡಪಾದದ ನೋವು ಕಾಡಿತು. ಈ ವೇಳೆ ಸ್ಪರ್ಧಿಸಿದರೆ ಮುಂದೆ ಗಾಯ ತೀವ್ರವಾಗಿ ವೃತ್ತಿಜೀವನವೇ ಅಂತ್ಯವಾಗುವ ಸಾಧ್ಯತೆಯಿತ್ತು. ಈ ಅಪಾಯವನ್ನು ಎಳೆದುಕೊಳ್ಳಲು ಮನಸ್ಸು ಮಾಡದ ದೀಪಕ್ ಪುನಿಯ, ಸ್ಪರ್ಧೆಯನ್ನು ಕೈಚೆಲ್ಲಿದರು. ಹಾಗಂತ ಅವರೇನು ಸೋಲಲಿಲ್ಲ. ಆಡಲಿಳಿಯಲಿಲ್ಲ ಅಷ್ಟೇ. ಸೋತು ಬೆಳ್ಳಿ ಗೆದ್ದಿದ್ದಲ್ಲ, ಚಿನ್ನವನ್ನು ತಾವಾಗೇ ಬಿಟ್ಟುಕೊಟ್ಟಿದ್ದು.
ವಿಶ್ವ ನಂ.1: ಕೂಟ ಮುಗಿದ ಬೆನ್ನಲ್ಲೇ ವಿಶ್ವ ಕುಸ್ತಿ ಶ್ರೇಯಾಂಕ ಪ್ರಕಟವಾಯಿತು. ಅಲ್ಲಿ ನಿರೀಕ್ಷಿತವೆಂಬಂತೆ 65 ಕೆಜಿ ವಿಭಾಗದಲ್ಲಿ ಭಜರಂಗ್ ಪುನಿಯ ವಿಶ್ವ ನಂ.1 ಸ್ಥಾನ ಕಳೆದುಕೊಂಡರು. 2ನೆ ಸ್ಥಾನಕ್ಕೆ ಕುಸಿದರು. ಈ ನೋವನ್ನು ಮರೆಸಿದ್ದು ದೀಪಕ್ ಪುನಿಯ. ಅವರು 86 ಕೆ|ಜಿ ವಿಭಾಗದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದರು. ಅಲ್ಲಿಗೆ ವಿಶ್ವ ಕುಸ್ತಿಯಲ್ಲಿ ಭಾರತದ ಮತ್ತೂಂದು ಪ್ರತಿಭೆ ಅರಳಿ ನಿಂತಂತಾಯಿತು. ಈ ಪ್ರತಿಭಾಜ್ಯೋತಿ ಜಾಜ್ವಲ್ಯಮಾನವಾಗಿದೆ.
ಅರಳಿ ನಿಂತ ಮಹಿಳಾ ಜ್ಯೋತಿಗಳು: ಪುರುಷರ ಕುಸ್ತಿಯಲ್ಲಿ ಭಾರತೀಯರು ವಿಶ್ವವಿಜೇತರಾಗುವ ಮಟ್ಟಕ್ಕೆ ಬೆಳೆದಿದ್ದು ಈಗ ಹಳೆಯಸುದ್ದಿ. ಹಾಗಾದರೆ ಮಹಿಳೆಯರ ಕಥೆಯೇನು? ಅವರ ಸಾಧನೆಯೇನು? ಎಂದು ಪ್ರಶ್ನಿಸುವವರಿಗೆ ಇಲ್ಲೂ ಇದೆ ಸಂತಸದ ಸುದ್ದಿ. ಕಳೆದೊಂದು ದಶಕದಿಂದ ಭಾರತದಲ್ಲಿ ವಿಶ್ವಮಟ್ಟದ ಅದ್ಭುತ ಕುಸ್ತಿಪಟುಗಳು ಹೊರಹೊಮ್ಮಿದ್ದಾರೆ. 2010ರ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಗೀತಾ ಫೊಗಾಟ್, 2014ರ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಬಬಿತಾ ಫೊಗಾಟ್, 2018ರ ಕಾಮನ್‌ವೆಲ್ತ್ ಮತ್ತು ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ವಿನೇಶ್ ಫೊಗಾಟ್, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್ ಇವರೆಲ್ಲ ಅನನ್ಯ ಸಾಧಕಿಯರಿಗೆ ಕುಸ್ತಿ ಜ್ಯೋತಿಯನ್ನು ಬೆಳಗುವ ತೈಲವಾಗಿದ್ದಾರೆ.
ಮೊನ್ನೆಯಷ್ಟೇ ಕಜಕಸ್ತಾನದಲ್ಲಿ ಮುಗಿದ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ ಫೊಗಾಟ್ ಕಂಚು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆಕೆಯಿಂದ ಇಲ್ಲಿ ಇನ್ನೊಂದಷ್ಟು ಉತ್ತಮ ಪ್ರದರ್ಶನದ ನಿರೀಕ್ಷೆಯಿದ್ದರೂ, ಆಕೆ ತನ್ನ ದೇಹ ತೂಕದ ವಿಭಾಗವನ್ನು ಕೇವಲ ವರ್ಷದ ಹಿಂದಷ್ಟೇ ಬದಲಿಸಿಕೊಂಡಿದ್ದರು. ಆದ್ದರಿಂದ ಅವರ ಪ್ರದರ್ಶನ ಕಳಪೆ ಎನ್ನಲು ಸಾಧ್ಯವಿಲ್ಲ. ಕಂಚು ಗೆದ್ದಿರುವುದು ಅಮೋಘವೆನ್ನಲೇ ಬೇಕು. ಕಾರಣ, ಈ ಕೂಟದಲ್ಲಿ ಭಾರತದ ಮಹಿಳೆಯೊಬ್ಬರು ಗೆದ್ದ ಏಕೈಕ ಪದಕವಿದು!