ಉಡುಪಿ : ಲಾಕ್ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಜನರನ್ನು ಬಿ.ಎಸ್ ಯಡಿಯೂರಪ್ಪ ಕತ್ತಲೆಯಲ್ಲಿ ಕೂರಿಸುವ ಸಂಪೂರ್ಣ ಯೋಜನೆ ಹಾಕಿಕೊಂಡಿದ್ದಾರೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ವಾಗ್ದಾಳಿ ನಡೆಸಿದ್ದಾರೆ.ಇತ್ತೀಚಿಗೆ ಉಡುಪಿ ಜಿಲ್ಲೆಯಾದ್ಯಂತ ಪ್ರತಿದಿನ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ ಇದರಿಂದ ಜಿಲ್ಲೆಯ ಜನರಿಗೆ ತೊಂದರೆ ಉಂಟಾಗುತ್ತದೆ.
ಯಾವುದೇ ದುರಸ್ತಿ ಕಾರ್ಯ ಇಲ್ಲದಿದ್ದರು,ಕೈಗಾರಿಕೆಗಳು ಅರೆಪ್ರಮಾಣದಲ್ಲಿ ನಡೆಯುತ್ತಿದ್ದರು ಅರ್ಧ ಗಂಟೆಗೊಮ್ಮೆ ವಿದ್ಯುತ್ ಕಡಿತ ಮಾಡುವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.ಒಂದು ದಿನದಲ್ಲಿ 10 ಗಂಟೆಗೂ ಅಧಿಕ ವಿದ್ಯುತ್ ಕಡಿತಗೊಳಿಸುವ ಸರಕಾರದ ಕ್ರಮದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದ ಜನರಿಗಾಗಿ 24 ಗಂಟೆಗಳ ಕಾಲ ಯಾವುದೇ ವಿದ್ಯುತ್ ಕಡಿತ ಆಗದಂತೆ ಯೋಜನೆಗಳನ್ನು ರೂಪಿಸಿದ್ದರು.ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದ ಸಂಪೂರ್ಣ ಜವಬ್ದಾರಿಯನ್ನು ಡಿಕೆಶಿ ನಿಭಾಯಿಸುವಲ್ಲಿ ಸಫಲರಾಗಿದ್ದರು.ಬಿಜೆಪಿ ಸರಕಾರದ ಅವಧಿಯಲ್ಲಿ ಕರೆಂಟ್ ಇರುವುದಕ್ಕಿಂತ ಇಲ್ಲದಿರುವ ಸಮಯವೇ ಹೆಚ್ಚು ಎಂದಿದ್ದಾರೆ.
ಆದರೆ ಇಂದಿನ ಯಡಿಯೂರಪ್ಪ ಸರಕಾರ ಜನ ಪರ ಯೋಜನೆಗಳನ್ನು ರೂಪಿಸುವ ಬದಲು ಕುರ್ಚಿಯ ಬಗ್ಗೆ ಚಿಂತಿಸುತ್ತಿದೆ.ಕತ್ತಲೆ ಭಾಗ್ಯ ರಾಜ್ಯದ ಜನರಿಗೆ ಯಡಿಯೂರಪ್ಪ ನೀಡುವ ಕೊಡುಗೆ ಬಿಜೆಪಿ ಆಡಳಿತವನ್ನು ಜನರು ಪ್ರಶ್ನಿಸುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಉಡುಪಿ ಕ್ಷೇತ್ರದ ಜನರಿಗೆ ವಿನಯ್ ಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಜನರು ವಿದ್ಯುತ್ ವ್ಯತ್ಯಯ ಅನ್ನುವ ಪದವೇ ಮರೆತು ಹೋಗಿದ್ದರು.ದಿನದ 24 ಗಂಟೆಗಳ ಕಾಲ ಜಿಲ್ಲೆಯ ಜನರಿಗೆ ವಿದ್ಯುತ್ ಸರಬರಾಜು ಮಾಡಿದ ಕೊಡುಗೆ ಅವರದ್ದು. ಶಾಸಕ ರಘುಪತಿ ಭಟ್ ಉಡುಪಿ ಕ್ಷೇತ್ರದ ಜನರಿಗಾಗಿ ವಿನಯ್ ಕುಮಾರ್ ಸೊರಕೆ ಹಾಗೂ ಪ್ರಮೋದ್ ಮಧ್ವರಾಜ್ ರವರು ಮಾಡಿದ ಕಾರ್ಯಗಳನ್ನು ನೋಡಿ ಕಲಿಯಲಿ ಎಂದಿದ್ದಾರೆ.