Advertisement

ಸಾಗರದಾಚೆ ಯೋಗ ಪರಿಚಯಿಸಿದ ಹಳ್ಳಿ ಹೈದ ದೀಪಕ್‌

11:36 PM Sep 10, 2019 | mahesh |

ಸುಬ್ರಹ್ಮಣ್ಯ: ಛಲವಿದ್ದರೆ ಜೀವನದಲ್ಲಿ ಎಂತಹ ಸಾಧನೆಯನ್ನೂ ಮಾಡಬಹುದು ಎನ್ನುವುದನ್ನು ಹಳ್ಳಿ ಹೈದನೊಬ್ಬ ಸಾಧಿಸಿ ತೋರಿಸಿದ್ದಾನೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರೂ ಸತತ ಪರಿಶ್ರಮದಿಂದ ಯೋಗಾಭ್ಯಾಸ ಮಾಡಿ, ಈಗ ಆ ವಿದ್ಯೆಯನ್ನು ಸಾಗರದಾಚೆಯೂ ಪರಿಚಯಿಸುತ್ತಿರುವ ಯುವಕನ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಸುಬ್ರಹ್ಮಣ್ಯ ಸಮೀಪದ ಗುಂಡ್ಯ ರಸ್ತೆಯಲ್ಲಿರುವ ಎರ್ಮಾಯಿಲ್ ಎಂಬ ಪುಟ್ಟ ಹಳ್ಳಿಯ ಯುವಕ ದೀಪಕ್‌ ಸಾಧನೆಗೆ ಈಗ ನಾಡೇ ಬೆರಗಾಗಿದೆ. ಬಾಲ್ಯದಿಂದಲೂ ಸೈನಿಕನಾಗಬೇಕೆಂದು ಕನಸು ಕಂಡಿದ್ದ ದೀಪಕ್‌ ಅವರಿಗೆ ನೌಕಾಸೇನೆಯಲ್ಲಿ ಸೇವೆ ಸಲ್ಲಿಸುವ ಮಹದಾಸೆಯಿತ್ತು. ಅದೇ ಹಂಬಲದಲ್ಲಿ ಎನ್‌ಸಿಸಿ ಘಟಕ ಸೇರಿದ್ದರು. ಕೊನೆಗೆ ಯೋಗದತ್ತಲೂ ಒಲವು ಮೂಡಿ, ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಮುಡಿಪು ಶಾಲೆಯಲ್ಲಿ ಪಿಯುಸಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿ ಗಳಿಸಿದ್ದಾರೆ. ಬಳಿಕ ಔಷಧ ಕಂಪನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು.

ಅದೊಂದು ದಿನ ವಿಶ್ವವಿದ್ಯಾನಿಲಯದಲ್ಲಿ ಯೋಗ ಶಿಕ್ಷಣ ತರಗತಿ ಆರಂಭಿಸಲು ಅನುಮತಿ ಪ್ರಕ್ರಿಯೆಗಾಗಿ ಹೊಸದಿಲ್ಲಿಯಿಂದ ಪ್ರೊ| ಬಸವರಾಜ್‌ ರೆಡ್ಡಿ ಎಂಬವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದರು. ಅವರನ್ನು ವಿಮಾನ ನಿಲ್ದಾಣದಿಂದ ಕಾಲೇಜಿಗೆ ಕರೆತರಲು ಕೆಂಚಪ್ಪ ಗೌಡರು ತೆರಳಿದ್ದರು. ಪ್ರಯಾಣದ ಮಧ್ಯೆ ಪ್ರೊ| ರೆಡ್ಡಿ ಅವರು ಕೆಂಚಪ್ಪ ಅವರನ್ನು ಮಾತನಾಡಿಸಿ, ಪುತ್ರನ ಕುರಿತಾಗಿ ಕೇಳಿದ್ದರು. ವಿಶ್ವವಿದ್ಯಾಲಯದಲ್ಲಿ ಆರಂಭವಾಗುವ ಯೋಗ ತರಗತಿಗೆ ಪುತ್ರನನ್ನು ಕಳುಹಿಸುವಂತೆ ಕೇಳಿಕೊಂಡಿದ್ದರು. ಅವರ ಸಲಹೆಯಂತೆ ದೀಪಕ್‌ ಯೋಗ ಶಿಕ್ಷಣ ಡಿಪ್ಲೊಮಾ ತರಬೇತಿಗೆ ಸೇರಿದ್ದರು.

ಶಿಕ್ಷಣ ಪಡೆಯುತ್ತಿದ್ದ ವೇಳೆ ಎನ್‌ಸಿಸಿ ಘಟಕದಲ್ಲೂ ದೀಪಕ್‌ ಸಕ್ರಿಯರಾಗಿದ್ದರು. ಯೋಗವು ಅವರಿಗೆ ಬೇಗಸೆ ಸಿದ್ಧಿಸಿತು. ಜಿಂದಾಲ್ ಯೋಗ ಶಿಕ್ಷಣ ಸಂಸ್ಥೆಯಲ್ಲಿ 10 ತಿಂಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಇಂಡೋನೇಶ್ಯದ ರಾಜಧಾನಿ ಜಕಾರ್ತಕ್ಕೆ ತೆರಳಿ, ಅಲ್ಲಿ ಯೋಗ ಶಿಕ್ಷಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

Advertisement

2013ರಲ್ಲಿ ಅಖೀಲಾ ಭಾರತ ನವ ಸೈನಿಕ್‌ ಶಿಬಿರದಲ್ಲಿ ಕರ್ನಾಟಕ ಹಾಗೂ ಗೋವಾದ ಪ್ರತಿನಿಧಿಯಾಗಿ ಭಾಗ ವಹಿಸಿದ್ದರು. 2015ರಲ್ಲಿ ಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಭಾಗವಹಿಸಿದ್ದರು. ಜಿಂದಾಲ್ ನೇಚರ್‌ ಯೋಗ ಸಂಸ್ಥೆಯಲ್ಲಿ ಯೋಗ ಶಿಕ್ಷಕರಾದ ಬಳಿಕ ವಿದೇಶಕ್ಕೆ ತೆರಳಿ, ಯೋಗಾಭ್ಯಾಸದ ಅರಿವು ಮೂಡಿಸುವ ಕಾರ್ಯ ಆರಂಭಿಸಿದ್ದರು.

ದೀಪಕ್‌ ಅವರ ಯೋಗಾಭ್ಯಾಸ ವೀಕ್ಷಿಸಿದರೆ ಒಂದು ಕಲಾ ಪ್ರದರ್ಶನ ದಂತಿರುತ್ತದೆ. ದೇಹವನ್ನು ಎಲುಬೇ ಇಲ್ಲದವರಂತೆ ಬಿಲ್ಲಿನಂತೆ ಬಾಗಿಸುತ್ತಾರೆ. ಸಮುದ್ರದಲ್ಲಿ ಕಿ.ಮೀ.ಗಟ್ಟಲೆ ಈಜಬಲ್ಲರು. ಯೋಗ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿ, ಬಹುಮಾನಗಳನ್ನು ಗಳಿಸಿದ್ದಾರೆ.

ಚುರುಕ ಸ್ವಭಾವದ ದೀಪಕ್‌ ಗುರಿ ಇಡುವುದರಲ್ಲೂ ನಿಪುಣರು. ನೌಕಾದಳ ಸೇರುವ ಕನಸಿನೊಂದಿಗೆ ಮನೆಯಲ್ಲೂ ನೌಕಾಸೇನೆಯ ಯೋಧರ ಭಾವಚಿತ್ರಗಳನ್ನೇ ಗೋಡೆಗಳಿಗೆ ಅಂಟಿಸಿಕೊಂಡಿದ್ದರು. ಆಟಿಕೆ ಗನ್‌ ಮೂಲಕ ಗುರಿ ಹೊಡೆಯುವುದನ್ನು ಅಭ್ಯಾಸ ಮಾಡಿದ್ದರು. ಈಗ ತರಬೇತಿ ಪಡೆದು ಶಾರ್ಪ್‌ ಶೂಟರ್‌ ಕೂಡ ಆಗಿದ್ದಾರೆ.

ದಂಪತಿಗೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದು, ಅವರಲ್ಲಿ ಹಿರಿಯ ಪುತ್ರ ಕೆಲವು ವರ್ಷಗಳ ಹಿಂದೆ ಮರದ ಗೆಲ್ಲು ಮುರಿದು ಬಿದ್ದು ಮೃತಪಟ್ಟಿದ್ದ. ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದು, ತಾಯಿ ಇಂದಿರಾ ಗೃಹಿಣಿ. ಒಬ್ಬ ಮಗನನ್ನು ಕಳೆದುಕೊಂಡ ನೋವು, ಮತೋರ್ವ ಮಗನ ಸಾಧನೆಗೆ ಸಂತೋಷ ಎರಡೂ ಹೆತ್ತವರಲ್ಲಿದೆ.

ಬಿಎಸ್ಸಿ ಪದವೀಧರ
ವೃತ್ತಿಯಲ್ಲಿ ಚಾಲಕರಾಗಿರುವ ಎರ್ಮಾಯಿಲ್ ಕೆಂಚಪ್ಪ ಹಾಗೂ ಗೃಹಿಣಿಯಾಗಿರುವ ಇಂದಿರಾ ದಂಪತಿಯ ಪುತ್ರರಾದ ದೀಪಕ್‌ ಹುಟ್ಟೂರಿನ ಚೇರು ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ.

ನಿಷ್ಠೆಯಿಂದ ಕಲಿತೆಯಾವುದೇ ವಿದ್ಯೆಯಾಗಲಿ, ನಿಷ್ಠೆಯಿಂದ ಕಲಿತರೆ ನಾವು ಅಂದುಕೊಂಡ ಗುರಿಯನ್ನು ಸಾಧಿಸಬಹುದು. ಅದರ ಜತೆಗೆ ಉತ್ತಮ ಆದಾಯವನ್ನು ಗಳಿಸಬಹುದು. ಹೆತ್ತವರ ಶ್ರಮಕ್ಕೆ ಫ‌ಲ ಸಿಕ್ಕಿದೆ. ಸೂಕ್ತ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ.
– ದೀಪಕ್‌ , ಯೋಗ ಶಿಕ್ಷಕ

ನೋವು-ಖುಷಿ ಎರಡೂ ಇವೆ
ದಂಪತಿಗೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದು, ಅವರಲ್ಲಿ ಹಿರಿಯ ಪುತ್ರ ಕೆಲವು ವರ್ಷಗಳ ಹಿಂದೆ ಮರದ ಗೆಲ್ಲು ಮುರಿದು ಬಿದ್ದು ಮೃತಪಟ್ಟಿದ್ದ. ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದು, ತಾಯಿ ಇಂದಿರಾ ಗೃಹಿಣಿ. ಒಬ್ಬ ಮಗನನ್ನು ಕಳೆದುಕೊಂಡ ನೋವು, ಮತೋರ್ವ ಮಗನ ಸಾಧನೆಗೆ ಸಂತೋಷ ಎರಡೂ ಹೆತ್ತವರಲ್ಲಿದೆ.

ಕನಸಲ್ಲೂ ಎಣಿಸಿರಲಿಲ್ಲ

ಮಗ ಯೋಗ ಕಲಿತು ವಿದೇಶದಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ತೆರಳುತ್ತಾನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡ ತನವಿ ದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದೆವು. ವಿಧಿಯಾಟದಿಂದ ಒಬ್ಬ ಗಂಡು ಮಗನನ್ನು ಕಳೆದು ಕೊಂಡೆವು. ದೀಪಕ್‌ ಸಾಧನೆ ದಾರಿ ಯಲ್ಲಿ ಸಾಗುತ್ತಿರುವುದು ಖುಷಿ ತಂದಿದೆ.
– ಕೆಂಚಪ್ಪ ಗೌಡ ಎರ್ಮಾಯಿಲ್ ತಂದೆ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next