Advertisement

ಶಾಸಕ ಬಾವಾ ನೆರವು ನಿರಾಕರಿಸಿದ ದೀಪಕ್‌ ಕುಟುಂಬ

09:13 AM Jan 06, 2018 | Team Udayavani |

ಸುರತ್ಕಲ್‌: ಹತ್ಯೆಯಾಗಿರುವ ದೀಪಕ್‌ ರಾವ್‌ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ 5 ಲಕ್ಷ ರೂ. ಪರಿಹಾರ ನೀಡಲು ಶುಕ್ರವಾರ ಕಾಟಿಪಳ್ಳದ ನಿವಾಸಕ್ಕೆ ಆಗಮಿಸಿದ್ದ ಶಾಸಕ ಮೊದಿನ್‌ ಬಾವಾ ಅವರ ನೆರವನ್ನು ಕುಟುಂಬ ನಿರಾಕರಿಸಿದೆ. ಶವಾಗಾರದಿಂದ ದೀಪಕ್‌ ಪಾರ್ಥಿವ ಶರೀರವನ್ನು ಪೊಲೀಸರು ರಹಸ್ಯವಾಗಿ ಮನೆಗೆ ತಲುಪಿಸಿದ ವಿಚಾರದಲ್ಲೂ ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Advertisement

ದೀಪಕ್‌ ರಾವ್‌ ಮನೆಗೆ ಆಗಮಿಸಿದ ಶಾಸಕ ಬಾವಾ ಅವರು ಕುಟುಂಬಕ್ಕೆ ಹಾಗೂ ಆತನ ತಾಯಿಗೆ ಸಾಂತ್ವನ ಹೇಳಿದರು. ಅಂತಿಮ ಸಂಸ್ಕಾರದ ಸಂದರ್ಭ ಆಗಮಿಸದ ಸ್ಥಳೀಯ ಶಾಸಕ ಬಾವಾ ವಿರುದ್ಧ ಮನೆಯವರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಪೊಲೀಸರ ಸಲಹೆ ಯಂತೆ ಆಗಮಿಸಿರಲಿಲ್ಲ. ಹತ್ಯೆಯಾದ ರಾತ್ರಿಯೇ ಆಸ್ಪತ್ರೆಗೆ ತೆರಳಿ ಮೃತ ದೇಹ ವೀಕ್ಷಿಸಿ ದುಃಖ ವ್ಯಕ್ತಪಡಿಸಿದ್ದೇನೆ ಎಂದು ಮನವರಿಕೆ ಮಾಡಲು ಯತ್ನಿಸಿದರು. ಬಳಿಕ ಸರಕಾರದಿಂದ ಕುಟುಂಬದ ಜೀವನಕ್ಕೆ ಬೇಕಾದ ಸೌಲಭ್ಯ ಒದಗಿಸಲು ಸಂಪೂರ್ಣ ಬದ್ಧನಾಗಿದ್ದೇನೆ ಎಂದು ತಿಳಿಸಿ ಅಲ್ಲಿಂದ ತೆರಳಿದರು.

ಕೋಮು ರಾಜಕೀಯ: ಬಾವಾ ಟೀಕೆ
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷ ಎಂಟು ತಿಂಗಳು ಆಡಳಿತದಲ್ಲಿ ಯಾವುದೇ ಕೋಮು ಗಲಭೆ ಆಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷ ಯಾವುದೇ ಕಾರಣ ಸಿಗದೆ ಕೋಮು ದ್ವೇಷ ಹಬ್ಬಿಸಿ ಅ ಧಿಕಾರ ಹಿಡಿಯುವ ಯತ್ನ ನಡೆಸುತ್ತಿದೆ. ನನಗೆ ಗಲಭೆ ರಾಜಕೀಯ, ಜಾತಿ ರಾಜಕೀಯದಲ್ಲಿ ನಂಬಿಕೆಯಿಲ್ಲ. ಕುರಾನ್‌, ಬೈಬಲ್‌ ಅಥವಾ ಯಾವುದೇ ದೇವ ಸ್ಥಾನಕ್ಕೆ ಬಂದು ಪ್ರತಿಜ್ಞೆ ಮಾಡಿ ಹೇಳಲು ಸಿದ್ಧ. ಆರೋಪಿ ಗಳೊಂದಿಗೆ ನನಗೆ ಯಾವುದೇ ಸಂಬಂಧವೂ ಇಲ್ಲ; ವ್ಯವಹಾರವೂ ಇಲ್ಲ. ಆರೋಪಿಗಳು ಬಿಜೆಪಿಗೆ ಚುನಾವಣೆ ಸಂದರ್ಭ ಕೆಲಸ ಮಾಡಿದ ಬಗ್ಗೆ ಮಾಹಿತಿಯಿದೆ ಎಂದರು. ಈ ಹತ್ಯೆಯ ಹಿಂದೆ ಬಂಟಿಂಗ್‌ ವಿಚಾರಕ್ಕಿಂತಲೂ ಹೆಚ್ಚಿನ ಕಾರಣ ಇರುವ ಶಂಕೆಯಿದ್ದು ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಲ್ಲಿ ಕೋರ ಲಾಗುವುದು ಎಂದರು.

ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ಅಧಿಕಾರಕ್ಕಾಗಿ ಕೋಮು ಪ್ರಚೋದಕ ಭಾಷಣ, ರಾಜಕೀಯ ಲಾಭಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ವಿಪಕ್ಷ ಬಿಡಬೇಕು. ಜಿಲ್ಲೆಯಲ್ಲಿ , ರಾಜ್ಯದಲ್ಲಿ  ಶಾಂತಿ ಕಾಪಾಡಲು ನಮ್ಮ ಸರಕಾರ ಸದಾ ಶ್ರಮಿಸುತ್ತಿದ್ದು ರಾಜಕೀಯ ಬಿಟ್ಟು ಬಿಜೆಪಿಯೂ ಕೈಜೋಡಿಸಬೇಕು ಎಂದರು.

ಪ್ರತಿಭಾ ಕುಳಾ, ಬಶೀರ್‌ ಅಹ್ಮದ್‌, ಕೇಶವ ಸನಿಲ್‌, ದೀಪಕ್‌ ಪೂಜಾರಿ, ಸುರೇಂದ್ರ ಕಾಂಬ್ಳಿ, ವೈ. ರಾಘವೇಂದ್ರ ರಾವ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next