ಶಿರಸಿ: ಭೂತಾನ್ ಮೂಲಕ ಹಸಿ ಅಡಿಕೆಗೆ ಕೇಂದ್ರ ಸರಕಾರವೇ ಅನುಮತಿ ನೀಡಿದ್ದು, ದೇಶೀ ಅಡಿಕೆಯ ಮೇಲೆ, ಅಡಿಕೆ ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕೇಂದ್ರ ಸರಕಾರ ಈ ಕ್ಷಣ ಆದೇಶ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹಕ್ಕೊತ್ತಾಯ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ,17 ಸಾವಿರ ಟನ್ ಅಡಿಕೆ ಬರಲು ಅನುಮತಿ ನೀಡಿದ್ದಾರೆ. ಇಂದುಹಸಿ ಅಡಿಕೆ, ನಾಳೆ ಒಣ ಅಡಿಕೆ ಕೂಡ ಬರುತ್ತದೆ. ಈಗಾಗಲೇ ಅಕ್ರಮವಾಗಿ ಅಡಿಕೆ ಬರುತ್ತಿವೆ. ಇದನ್ನು ತಪ್ಪಿಸಿ ಬಿಗು ಕ್ರಮ ಕೈಗೊಳ್ಳಬೇಕು. ಅಡಿಕೆ ಬೆಳೆಗಾರ ಪ್ರದೇಶದ ಸಂಸದರು ಪ್ರಧಾನಿಗಳ ಜತೆ ಮಾತನಾಡಿ ಇದನ್ನು ನಿಲ್ಲಿಸಬೇಕು ಎಂದರು.
ಪಿ.ಡಬ್ಲ್ಯು.ಡಿ. ಕಾರವಾರ ವಿಭಾಗದಡಿ 2022 -23 ನೇ ಸಾಲಿನಲ್ಲಿ 87 ಕೋಟಿ ರೂ. ಶಿರಸಿ ವಿಭಾಗದಲ್ಲಿ 98 ಕೋಟಿ ರೂ. ಗುತ್ತಿಗೆದಾರರಿಗೆ ಕೊಡುವುದು ಬಾಕಿಯಿದೆ. ಹಾಗಾಗಿ ಘೋಷಣೆ ಹಾಗೂ ಅನುಷ್ಠಾನದ ನಡುವಿನ ವ್ಯತ್ಯಾಸ ಸಚಿವರು ತಿಳಿಯಬೇಕು ಎಂದರು.
ಬಿಜೆಪಿಯವರು ಆಡಳಿತ ಪಕ್ಷದಲ್ಲಿದ್ದಾರೋ ಅಥವಾ ವಿರೋಧ ಪಕ್ಷದಲ್ಲಿದ್ದಾರೋ ಎಂಬ ಸಂಶಯ ಮೂಡುವಂತಾಗಿದೆ. ಹಿಂದಿನ ಅತಿ ಮಳೆಗೆ ಆದ ಹಾನಿಗೆ ಮಾಡಿದ ಕಾಮಗಾರಿ ಮಾಡಿದ ಗುತ್ತಿಗೆದಾರಿಗೆ ಕೊಡಲು 86 ಕೋಟಿ ಬಾಕಿ ಇದೆ. ಈಗ ಮತ್ತೆ ನೂರು ಕೋಟಿ ರೂ. ಹೇಳುತ್ತಿದ್ದರು. ಬಿಜೆಪಿ ಸರಕಾರ ಘೋಷಣೆ ಹಾಗೂ ಅನುಷ್ಟಾನ ನಡುವಿನ ವ್ಯತ್ಯಾಸ ಕಂಡುಕೊಳ್ಳಬೇಕು ಎಂದರು.
ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರು, ವಕ್ತಾರರ ಹೇಳಿಕೆ ನೀಡೋದು ನೀಡಿದರೆ ಅವರಿಗೆ ಬಿಜೆಪಿ ಸರಕಾರ ಪೊಲೀಸ್ ವರಿಷ್ಠ ಹುದ್ದೆಗೆ ನೇಮಕಾತಿ ಮಾಡುವ ಅವಕಾಶ ಇದ್ದರೆ ಮಾಡಬಹುದು. ಪೊಲೀಸರಿಗೂ ಗೊತ್ತಿಲ್ಲದ ಅನೇಕ ಸಂಗತಿ ಅವರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಈ ವೇಳೆ ಬಸವರಾಜ್ ದೊಡ್ಮನಿ, ಜಗದೀಶ ಗೌಡ, ಶ್ರೀಪಾದ ಹೆಗಡೆ, ನಾಗರಾಜ ನಾಯ್ಕ, ಪ್ರವೀಣ ತೆಪ್ಪಾರ ಇತರರು ಇದ್ದರು.