ಎಲ್ಲರ ಬಾಯಲ್ಲೂ ಈಗ ದೀಪಾ ಸನ್ನಿಧಿಯದ್ದೇ ಮಾತು! ಅದಕ್ಕೆ ಕಾರಣ, “ಚಕ್ರವರ್ತಿ’. “ಸಾರಥಿ’ ಬಳಿಕ ದೀಪಾ ಸನ್ನಿಧಿ ದರ್ಶನ್ ಜತೆ ನಟಿಸಿರುವ ಚಿತ್ರವಿದು. ಆ ಕಾರಣಕ್ಕೆ, ದೀಪಾಗೆ ಇದು ವಿಶೇಷ ಸಿನಿಮಾ. ಈ ಚಿತ್ರದಲ್ಲಿ ದೀಪಾ ಸನ್ನಿಧಿ ಶಾಂತಿ ಎಂಬ ಪಾತ್ರ ನಿರ್ವಹಿಸಿದ್ದಾರೆ. ಇಡೀ ಸಿನಿಮಾದುದ್ದಕ್ಕೂ ಆ ಶಾಂತಿ ಪಾತ್ರ ಬರಲಿದೆಯಂತೆ. ಹಾಗಾದರೆ, “ಚಕ್ರವರ್ತಿ’ಯೊಳಗಿನ ಪಾತ್ರ, ಅನುಭವ ಕುರಿತು ದೀಪಾ ಸನ್ನಿಧಿ ಹೇಳುವುದೇನು ಗೊತ್ತಾ?
“ಸಾಮಾನ್ಯವಾಗಿ ನಾಯಕಿಯರಿಗೆ ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಚ್ಚು ಅವಕಾಶಗಳೇ ಇರುವುದಿಲ್ಲ. ಅಲ್ಲಿ ನಾಯಕನಿಗಷ್ಟೇ ಹೆಚ್ಚು ಮಹತ್ವ. ಆದರೆ, “ಚಕ್ರವರ್ತಿ’ಯಲ್ಲಿ ಮಾತ್ರ ನನಗೆ ಸಾಕಷ್ಟು ಅವಕಾಶ ಇದೆ. “ಚಕ್ರವರ್ತಿ’ ದೊಡ್ಡ ಕಮರ್ಷಿಯಲ್ ಸಿನಿಮಾ. ದರ್ಶನ್ ಅವರ ಪಾತ್ರ ಹೇಗೆ ಸಾಗಿ ಬರುತ್ತೋ, ಅವರೊಂದಿಗೆ ನನ್ನ ಪಾತ್ರವೂ ಸಾಗುತ್ತದೆ. ಈ ಚಿತ್ರದಲ್ಲಿ ನನಗೂ ಕೆಲ ಗೆಟಪ್‌ಗ್ಳಿವೆ.
ಆಯಾ ಕಾಲಘಟ್ಟದ ಸನ್ನಿವೇಶಕ್ಕೆ ನನ್ನ ಲುಕ್ ಬದಲಾಗುತ್ತಾ ಹೋಗಲಿದೆ. ನನ್ನ ವೃತ್ತಿಬದುಕಿಗೆ “ಚಕ್ರವರ್ತಿ’ ಹೊಸ ಭಾಷ್ಯ ಬರೆಯಲಿದೆ ಎಂಬ ನಂಬಿಕೆ ಇದೆ. ಈ ಚಿತ್ರ ಮಾಡುವಾಗ, ನನಗೆ “ಸಾರಥಿ’ ಚಿತ್ರದಲ್ಲಿ ಕೆಲಸ ಮಾಡಿದಷ್ಟೇ ಖುಷಿಯಾಯ್ತು. ಎಲ್ಲರೂ ಗೊತ್ತಿರುವುದರಿಂದಲೇ, ನಾನು ಇಲ್ಲಿ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ನಿರ್ದೇಶಕ ಚಿಂತನ್ ಅವರಿಗೆ ನನ್ನ ಪಾತ್ರದ ಬಗ್ಗೆ ಐಡಿಯಾ ಇತ್ತು. ಹಾಗಾಗಿ, ನನ್ನಿಂದ ತುಂಬಾ ಚೆನ್ನಾಗಿ ಕೆಲಸ ತೆಗೆಸಿಕೊಂಡಿದ್ದಾರೆ’ ಎನ್ನುತ್ತಾರೆ ದೀಪಾ.
ನಾನು ಚಿತ್ರರಂಗಕ್ಕೆ ಬಂದು ಏಳು ವರ್ಷಗಳಾಗಿವೆ. ಇದುವರೆಗೆ 9 ಚಿತ್ರಗಳಲ್ಲಿ ನಟಿಸಿದ್ದೇನೆ. ನಾನು ಬಂದ ಅವಕಾಶಗಳೆಲ್ಲವನ್ನೂ ಒಪ್ಪಲಿಲ್ಲ. ಆಯ್ಕೆ ವಿಚಾರದಲ್ಲಿ ಎಚ್ಚರ ವಹಿಸಿದ್ದೆ. ನನಗೆ “ಲೂಸಿಯಾ’ ರೀತಿಯ ಪಾತ್ರ ಮಾಡುವ ಆಸೆ ಇತ್ತು. ತಮಿಳಿನಲ್ಲಿ “ಲೂಸಿಯಾ’ ರಿಮೇಕ್‌ನಲ್ಲಿ ಮಾಡುವ ಅವಕಾಶ ಸಿಕ್ಕಿತು. ಅಲ್ಲಿಗೆ ಹೋದೆ. ಆ ಸಮಯದಲ್ಲಿ ಇಲ್ಲಿ ಅವಕಾಶ ಬಂತು. ಡೇಟ್ಸ್ ಸಮಸ್ಯೆಯಿಂದ ಮಾಡಲಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ದೀಪಾ ಸನ್ನಿಧಿ. ಹಾಗಾದರೆ, “ಚಕ್ರವರ್ತಿ’ ಕಂಬ್ಯಾಕ್ ಸಿನಿಮಾ ಆಗುತ್ತಾ? ಈ ಪ್ರಶ್ನೆಗೆ, “ಕಂಬ್ಯಾಕ್’ ಅನ್ನಲು ನಾನೇನೂ ಚಿತ್ರರಂಗ ಬಿಟ್ಟೇ ಹೋಗಿಲ್ಲವಲ್ಲ ಎಂಬ ಉತ್ತರ ಕೊಡುತ್ತಾರೆ ದೀಪಾ.