Advertisement

ದೀಪಾ ಕರ್ಮಾಕರ್‌ ಗುರಿ ಏಶ್ಯನ್‌ ಗೇಮ್ಸ್‌

06:25 AM Apr 02, 2018 | |

ಹೊಸದಿಲ್ಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ವಿಶ್ವದ ಗಮನ ಸೆಳೆದ ಭಾರತದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್‌ ಅವರಿಗೆ ಕಾಮನ್ವೆಲ್ತ್‌ ಗೇಮ್ಸ್‌ ವೇಳೆ ಕಂಟಕ ಎದುರಾಗಿದೆ. ಗಾಯಾಳಾಗಿರುವ ಅವರು ಗೋಲ್ಡ್‌ ಕೋಸ್ಟ್‌ಗೆ ತೆರಳುವುದಿಲ್ಲ. ಇದರಿಂದ ಭಾರತಕ್ಕೆ ಜಿಮ್ಮಾಸ್ಟಿಕ್‌ ಪದಕವೊಂದು ಕೈತಪ್ಪಿದೆ ಎಂದೇ ಹೇಳಬಹುದು.

Advertisement

ಗಾಯಾಳಾದರೂ ಇತ್ತೀಚೆಗೆ ಅಭ್ಯಾಸವನ್ನು ಪುನರಾರಂಭಿಸಿದ ದೀಪಾ, ಹೆಚ್ಚಿನ ಅಭ್ಯಾಸ ಹಾಗೂ ತರಬೇತಿಗಾಗಿ ಮಾಸ್ಕೋಗೆ ತೆರಳಲಿದ್ದಾರೆ. ಅಲ್ಲಿ ಒಂದು ತಿಂಗಳ ಕಾಲ ದೀಪಾ ಕಠಿನ ತರಬೇತಿಯಲ್ಲಿ ತೊಡಗಲಿದ್ದಾರೆ. ಅವರ ಮುಂದಿನ ಗುರಿ ಏಶ್ಯಾಡ್‌ ಪಂದ್ಯಾವಳಿ ಎಂದು ದೀಪಾ ಅವರ ಕೋಚ್‌ ಬಿಶ್ವೇಶ್ವರ್‌ ನಂದಿ ತಿಳಿಸಿದ್ದಾರೆ.

“ದೀಪಾ ಅವರ ಪುನಶ್ಚೇತನ ಪ್ರಕ್ರಿಯೆ ಉತ್ತಮವಾಗಿ ಸಾಗಿದೆ. ಅಭ್ಯಾಸ ಆರಂಭಿಸಿದ್ದಾರೆ. ವಾಲ್ಟ್ನ ಮೂಲಭೂತ ಅಂಶಗಳತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಒಮ್ಮೆ ಸ್ಥಿರತೆ ಸಾಧಿಸಿದ ಬಳಿಕ ಅಪಾಯಕಾರಿ ಪ್ರೊಡಿನೋವಾದತ್ತ ಗಮನ ಹರಿಸಲಿದ್ದಾರೆ’ ಎಂದು ನಂದಿ ಹೇಳಿದರು.

ರಿಯೋದಲ್ಲಿ 4ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದ ಬಳಿಕ ದೀಪಾ ಕರ್ಮಾಕರ್‌ ವಿಶ್ವ ಮಟ್ಟದ ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಂಡಿಲ್ಲ. 24ರ ಹರೆಯದ ದೀಪಾ ಮೊದಲ ಏಶ್ಯಾಡ್‌ ಪದಕದತ್ತ ಗುರಿ ನೆಟ್ಟಿದ್ದಾರೆ. “ಕಾಮನ್ವೆಲ್ತ್‌ ಗೇಮ್ಸ್‌ಗಿಂತ ಏಶ್ಯನ್‌ ಗೇಮ್ಸ್‌ ಸವಾಲು ಕಠಿನವಾದದ್ದು. ಇಲ್ಲಿ ಚೀನ ಮತ್ತು ದಕ್ಷಿಣ ಕೊರಿಯಾದ ಬಲವಾದ ಸ್ಪರ್ಧೆ ಎದುರಿಸಬೇಕಿದೆ. ಹೀಗಾಗಿ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (ಟಾಪ್‌) ಯೋಜನೆಯಡಿ ದೀಪಾ ರಶ್ಯಕ್ಕೆ ತೆರಳುತ್ತಿದ್ದಾರೆ’ ಎಂದು ಕೋಚ್‌ ಸ್ಪಷ್ಟಪಡಿಸಿದರು. ಸದ್ಯ ದೀಪಾ ಮತ್ತು ಕೋಚ್‌ ನಂದಿ ಅಗರ್ತಲಾಕ್ಕೆ ತೆರಳಿ 2 ವಾರಗಳ ವಿಶ್ರಾಂತಿ ಪಡೆಯಲಿದ್ದಾರೆ.

ಗೇಮ್ಸ್‌ ಪದಕದ ವಿಶ್ವಾಸ
ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ದೀಪಾ ಕರ್ಮಾಕರ್‌ ಬದಲು ಪ್ರಣತಿ ನಾಯಕ್‌ ಸ್ಥಾನ ಪಡೆದಿದ್ದಾರೆ. ಬಿ. ಅರುಣಾ ರೆಡ್ಡಿ ಮತ್ತು ಪ್ರಣತಿ ದಾಸ್‌ ಉಳಿದಿಬ್ಬರು ಸ್ಪರ್ಧಿಗಳು. ಈ ಮೂವರಿಂದ ಪದಕವನ್ನು ನಿರೀಕ್ಷಿಸಬಹುದಾಗಿದೆ ಎಂಬುದು ಬಿಶ್ವೇಶ್ವರ್‌ ನಂದಿ ಅವರ ನಂಬಿಕೆ.

Advertisement

“ಪ್ರಣತಿ ನಾಯಕ್‌ ವಾಲ್ಟ್ ಪರಿಣಿತೆ. 3ರಿಂದ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಣತಿ ದಾಸ್‌ ಬೀಮ್‌ನಲ್ಲಿ ಫೈನಲ್‌ ತಲುಪುವುದು ಬಹುತೇಕ ಖಚಿತ. ಅರುಣಾ ರೆಡ್ಡಿ ಇತ್ತೀಚೆಗಷ್ಟೇ ಮೆಲ್ಬರ್ನ್ ವರ್ಲ್ಡ್ ಕಪ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭರವಸೆ ಮೂಡಿಸಿದ್ದಾರೆ’ ಎಂದು ನಂದಿ ಹೇಳಿದರು.

“ಜಿಮ್ನಾಸ್ಟಿಕ್‌ನಲ್ಲಿ ಪದಕ ಖಚಿತ ಎಂದು ಹೇಳಲಾಗದು. ಇದು ಅನಿಶ್ಚಿತತೆಗಳ ಸ್ಪರ್ಧೆ. ಒಂದು ಕಳಪೆ ಲ್ಯಾಂಡಿಂಗ್‌ ಇಡೀ ಅವಕಾಶವನ್ನು ಹಾಳುಗೆಡವಬಹುದು. ಆದರೆ ನಾವು ಭರವಸೆ ಇರಿಸಿಕೊಳ್ಳೋಣ…’ ಎಂದು ನಂದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next