Advertisement
ಮಳೆ ಮತ್ತು ಗಾಳಿಯಿಂದ ಸಮುದ್ರ ಉಗ್ರ ಸ್ವರೂಪ ತಾಳಿದ್ದು, ಆಳಸಮುದ್ರದಲ್ಲಿ ನೀರಿನ ಸೆಳೆತ ಇರುವ ಕಾರಣ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಕೆಲವು ಆಳಸಮುದ್ರ ಬೋಟುಗಳು ನಿಯಂತ್ರಣ ಸಾಧ್ಯವಾಗದೆ ಸಮೀಪದ ಬಂದರು ಸೇರಿವೆ. ಮಲ್ಪೆ ಬಂದರಿನ ಸುಮಾರು 300ರಷ್ಟು ದೋಣಿಗಳು ಕಾರವಾರದ ಬಂದರನ್ನು ಆಶ್ರಯಿಸಿವೆ. ಮಲ್ಪೆಯ ಆಳಸಮುದ್ರ, ಪಸೀìನ್, ತ್ರಿ ಸೆವಂಟಿ, ಸಣ್ಣ ಟ್ರಾಲ್ ಬೋಟ್ ಸೇರಿದಂತೆ ಸುಮಾರು 15 ಸಾವಿರಕ್ಕೂ ಅಧಿಕ ದೋಣಿಗಳು ಬಂದರಿನಲ್ಲೇ ಉಳಿದಿವೆ.
ಋತು ಆರಂಭದ ಎರಡು ತಿಂಗಳು ಉತ್ತಮ ಮೀನು ದೊರೆತು ಹೆಚ್ಚು ಲಾಭ ತರುವ ಸಮಯ. ಈ ಹೊತ್ತಿನಲ್ಲೇ ಹವಾಮಾನ ಕೈಕೊಟ್ಟಿರುವುದು ನಿರಾಶೆ ಮೂಡಿಸಿದೆ. ಮೀನುಗಾರಿಕೆ ಉದ್ಯಮದ ಕೋಟ್ಯಂತರ ರೂ. ವ್ಯವಹಾರಕ್ಕೆ ಅಡ್ಡಿಯಾಗಿದ್ದು, ಸರಕಾರದ ಬೊಕ್ಕಸಕ್ಕೂ ನಷ್ಟವಾಗಿದೆ. ಪ್ರವಾಹದಿಂದ ರೈತಾಪಿ ವರ್ಗಕ್ಕೆ ಉಂಟಾಗಿರುವಷ್ಟೇ ಸಂಕಷ್ಟವನ್ನು ನಾವೂ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಮೀನುಗಾರರು. ಪ್ರಾಕೃತಿಕ ವಿಕೋಪದ ಸಂದರ್ಭ ಇಲ್ಲಿನ ಬೋಟ್‌ಗಳಿಗೆ ಆಶ್ರಯಕ್ಕಾಗಿ ರಾಜ್ಯದ ಇತರ ಬಂದರು ಪ್ರವೇಶಕ್ಕೆ ಅವಕಾಶ ಒದಗಿಸುವಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
Related Articles
ಬಹುತೇಕ ದೋಣಿಗಳು ಬಂದರಿನಲ್ಲಿ ಲಂಗರು ಹಾಕಿರುವುದರಿಂದ ಮಾರುಕಟ್ಟೆಗೆ ಮೀನುಗಳ ಪೂರೈಕೆ ನಿಂತಿದೆ. ದುಬಾರಿ ಬೆಲೆ ತೆತ್ತು ಖರೀದಿಸಬೇಕಾದ ಸ್ಥಿತಿ ಇದೆ. ಪಾಂಫ್ರೆಟ್ ದರ 1,000-1,100 ರೂ., ದೊಡ್ಡ ಬಂಗುಡೆ 3ಕ್ಕೆ 100 ರೂ., ಸಣ್ಣವು 4ಕ್ಕೆ 100 ರೂ., ಬೂತಾಯಿ 10ಕ್ಕೆ 100 ರೂ., ಕಲ್ಲೂರು ಕೆಜಿಗೆ 350, ಏಡಿ ಕೆಜಿಗೆ 250ರಿಂದ 300 ರೂ. ಇದೆ. ಅಂಜಲ್ ಮಾರುಕಟ್ಟೆಯಲ್ಲಿ ಇಲ್ಲ. ಮೀನು ಸಿಗದೆ ಮೀನು ಮಾರಾಟ ಮಹಿಳೆಯರ ಜೀವನ ಕಷ್ಟಕರ ವಾಗಿದೆ ಎನ್ನುತ್ತಾರೆ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್.
Advertisement
ಗಾಳಿ ನಿಂತರೆ ಕಡಲಿಗಿಳಿಯಬಹುದುಸಮುದ್ರದಲ್ಲಿ ನೀರಿನ ಸೆಳೆತ, ಗಾಳಿಯ ಒತ್ತಡ ಅಧಿಕವಾಗಿರು ವುದರಿಂದ ಬೋಟ್‌ಗಳನ್ನು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಬಲೆಗಳು ಹಾನಿಗೀಡಾಗುತ್ತವೆ. ಚೌತಿಯ ಅನಂತರವೂ ಹವಾಮಾನ ಸರಿಹೋಗದ ಕಾರಣ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ.
– ಗಣೇಶ್ ಸುವರ್ಣ, ಅಧ್ಯಕ್ಷರು, ಮಲ್ಪೆ ಟ್ರಾಲ್‌ಬೋಟ್ ತಾಂಡೇಲರ ಸಂಘ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು
ಹವಾಮಾನದ ವೈಪರೀತ್ಯದಿಂದ ಎಲ್ಲ ವರ್ಗದ ಬೋಟ್‌ಗಳಿಗೆ ಕಡಲಿಗಿಳಿಯಲು ಸಾಧ್ಯವಾಗಿಲ್ಲ. ಶೇ. 20ರಷ್ಟು ಆಳಸಮುದ್ರ ಬೋಟ್‌ಗಳು ತೆರಳಿದ್ದರೂ ವಾಪಸಾಗಿವೆ. ಸರಕಾರ, ಜನಪ್ರತಿನಿಧಿಗಳು ಮೀನುಗಾರರ ಕಷ್ಟವನ್ನು ಅರಿತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ಅವರ ಸಾಲದ ಮರುಪಾವತಿಗೆ ಕಾಲಾವಕಾಶ ನೀಡಬೇಕು. ಬಡ ಮೀನುಗಾರರ ಸಣ್ಣ ಮಟ್ಟದ ಸಾಲ ಮನ್ನಾ ಮಾಡುವ ಅನಿವಾರ್ಯತೆ ಇದೆ.
– ಕೃಷ್ಣ ಎಸ್. ಸುವರ್ಣ, ಅಧ್ಯಕ್ಷರು ಮೀನುಗಾರರ ಸಂಘ, ಮಲ್ಪೆ